ಧಾರವಾಡ: ಉತ್ತರ ಕರ್ನಾಟಕದ ಚಿತ್ರ ಕಲಾವಿದರು, ನಿರ್ಮಾಪಕರು ಹಾಗೂ ನಿರ್ದೇಶಕರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೂ ಮಾದರಿಯಾಗಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೆಳೆಸೋಣ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಹ್ಯಾಟ್ರಿಕ್‌ ನಾಗೇಂದ್ರ ಮಾಗಡಿ ಹೇಳಿದರು.

ಇಲ್ಲಿಯ ರಂಗಾಯಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಉಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಪದಾಧಿಕಾರಿಗಳ ಪದಗ್ರಹಣದಲ್ಲಿ ಅವರು ಮಾತನಾಡಿದರು.

ಬೆಂಗಳೂರು ಭಾಗದ ಚಲನಚಿತ್ರದ ದಿಗ್ಗಜರು ಸುಮಾರು ದಶಕಗಳ ಕಾಲ ಶ್ರಮಿಸಿದ ಫಲವಾಗಿ ಸ್ವಂತ ಕಟ್ಟಡ ಸೇರಿದಂತೆ ಸಾಕಷ್ಟು ಸೌಲಭ್ಯಗಳು ಹಾಗೂ ಅಸ್ತಿತ್ವ ದೊರಕಿದೆ. ಆ ಭಾಗದ ಜನರಲ್ಲಿ ಸಂಘಟನಾತ್ಮಕ ಶಕ್ತಿ, ಬದ್ಧತೆ ಇದೆ. ಅದೇ ಮಾದರಿಯಲ್ಲಿ ನಾವೂ ಸಂಘಟನೆ ಹಾಗೂ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಂಘವನ್ನು ಉತ್ತುಂಗಕ್ಕೆ ಏರಿಸಬೇಕು ಎಂದರು.

ಮೂರು ದಶಕಗಳಿಗೂ ಹೆಚ್ಚುಕಾಲ ಬೆಂಗಳೂರಿನಲ್ಲಿದ್ದು, ಚಿತ್ರರಂಗವನ್ನು ನೋಡಿದ್ದು, ಉತ್ತರ ಕರ್ನಾಟಕ ಭಾಗದ ಸಾಕಷ್ಟು ಸಂಖ್ಯೆಯಲ್ಲಿ ಅತ್ಯದ್ಭುತ ಕಲಾವಿದರು, ನಿರ್ಮಾಪಕರು ಹಾಗೂ ನಿರ್ದೇಶಕರಿದ್ದಾರೆ. ಇಲ್ಲಿಯ ಜನರು ಕಲಾಪ್ರಿಯರು. ಹೀಗಾಗಿ ಸುದೀಪ, ದರ್ಶನ, ರವಿಚಂದ್ರ, ಯಶ್‌ ಅಂತಹ ಕನ್ನಡದ ಖ್ಯಾತ ನಟರು ಈ ಭಾಗವನ್ನು ಅಷ್ಟೊಂದು ಪ್ರೀತಿಸುತ್ತಾರೆ. ದಕ್ಷಿಣ ಕರ್ನಾಟಕಕ್ಕಿಂತ ಹೆಚ್ಚು ಉತ್ತರ ಕರ್ನಾಟಕದಲ್ಲಿ ಕನ್ನಡ ಚಿತ್ರಗಳು ಗೆಲ್ಲುವ ಹಿನ್ನೆಲೆಯಲ್ಲಿ ಉಕವನ್ನು ಯಾರೂ ಬಿಟ್ಟುಕೊಡುವ ಮಾತಿಲ್ಲ. ಈ ಹಿನ್ನೆಲೆಯಲ್ಲಿ ಈ ಮಂಡಳಿಯು ಉತ್ತರೋತ್ತರವಾಗಿ ಬೆಳೆಯಲು ಬೇಕಾದ ಸಹಕಾರ ನಮ್ಮಿಂದಲೂ ಆಗಲಿದೆ ಎಂಬ ಭರವಸೆ ನೀಡಿದರು.

ಬಿಜೆಪಿ ಮುಖಂಡ ಮಂಜುನಾಥ ಮಕ್ಕಳಗೇರಿ ಸಮಾರಂಭಕ್ಕೆ ಚಾಲನೆ ನೀಡಿ, ಯಾವುದೇ ಸಂಸ್ಕೃತಿಯ ಶ್ರೀಮಂತಿಕೆ ತಿಳಿಯಲು ಹಾಗೂ ಪೂರ್ವಜರು ಮಾಡಿದ ಮಹತ್ತರ ಸಾಧನೆ ಅರಿಯಲು ನಾಟಕ ಮತ್ತು ಸಿನಿಮಾಗಳ ಪಾತ್ರ ಅತ್ಯಂತ ಅಗ್ರಗಣ್ಯ. ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳನ್ನು ನಾಟಕ, ಸಿನಿಮಾ ಮೂಲಕ ತೋರಿಸಿದ್ದರಿಂದ ಜನಸಾಮಾನ್ಯರಿಗೆ ಶ್ರೀರಾಮನ ತ್ಯಾಗ ಹಾಗೂ ಆದರ್ಶಗಳು ಸುಲಭವಾಗಿ ಮನದಟ್ಟಾಗುತ್ತವೆ. ಇಂತಹ ಮೌಲ್ಯಗಳು ನಾಟಕ ಮತ್ತು ಚಲನಚಿತ್ರಗಳ ಮೂಲಕ ಜನರನ್ನು ಇಂದಿಗೂ ಹೆಚ್ಚು ಪರಿಣಾಮಕಾರಿಯಾಗಿ ತಲುಪುತ್ತಿವೆ ಎಂದರು.


ಖ್ಯಾತ ಕಲಾವಿದರಾ ಹೆಲನ್‌ ಮೈಸೂರು ಮಾತನಾಡಿ, ನಟ, ನಟಿಯಾಗಬೇಕೆಂದು ಉತ್ತರದಿಂದ ಬೆಂಗಳೂರಿಗೆ ಹೋಗಿ ಜೀವನ ಹಾಳು ಮಾಡಿಕೊಂಡವರೇ ಜಾಸ್ತಿ. ಇಷ್ಟಾಗಿಯೂ ಕೆಲವರು ಮಾತ್ರ ಬೆಳೆದಿದ್ದಾರೆ. ಬೆಂಗಳೂರಿನ ಮಂದಿಗೆ ಉತ್ತರದ ಜನರೆಂದರೆ ತಾತ್ಸಾರ ಭಾವನೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ರಚನೆ ಆಗಿರುವ ಮಂಡಳಿಯು ರಾಜ್ಯ ಮಂಡಳಿಗೂ ಎತ್ತರದಲ್ಲಿ ಬೆಳೆಯುವಂತಾಗಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಆಗಸ್ಟ್‌ ತಿಂಗಳಲ್ಲಿ ಧಾರವಾಡದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಮಂಡಳಿ ನೂತನ ಅಧ್ಯಕ್ಷರಾಗಿ ಮಂಜುನಾಥ ಹಗೇದಾರ, ಉಪಾಧ್ಯಕ್ಷರಾದ ಪ್ರಭು ಹಂಚನಾಳ, ಕಾರ್ಯಾಧ್ಯಕ್ಷರಾಗಿ ಡಾ. ಚಂದ್ರಶೇಖರ ರೊಟ್ಟಿಗವಾಡ, ಪ್ರಧಾನ ಕಾರ್ಯದರ್ಶಿಗಳಾದ ಡಾ. ಕಲ್ಮೇಶ ಹಾವೇರಿಪೇಟೆ, ರಾಹುಲದತ್ತ ಪ್ರಸಾದ್, ಖಜಾಂಚಿಯಾಗಿ ಕಿರಣ ಸಿದ್ದಾಪೂರ ಅಧಿಕಾರ ಸ್ವೀಕರಿಸಿದರು. ವಿ.ಎಸ್‌. ಸಿದ್ದಾಪೂರ, ಅನೀಶ ಬಾರದವಾಲೆ, ಪ್ರೇಮಾ ನಡುವಿನಮನಿ, ಡ್ಯಾನ್ಸ್‌ ಮಾಸ್ಟರ್‌ ಸಯ್ಯದ ಇದ್ದರು.