ದೇಶ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ: ಪ್ರವೀಣ್

| Published : Feb 04 2024, 01:31 AM IST

ದೇಶ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರಕುವುದಿಲ್ಲ: ಪ್ರವೀಣ್
Share this Article
  • FB
  • TW
  • Linkdin
  • Email

ಸಾರಾಂಶ

ದೇಶ ಸೇವೆ ಮಾಡುವ ಪುಣ್ಯದ ಕೆಲಸ ಎಲ್ಲರಿಗೂ ದೊರಕುವುದಿಲ್ಲ ಎಂದು ತಾಲೂಕು ಪ್ಯಾರಾ ಮಿಲಿಟರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪ್ರವೀಣ್‌ ಮಡಬೂರು ಹೇಳಿದರು.

ನಿವೃತ್ತಿ ಹೊಂದಿ ತವರಿಗೆ ಮರಳಿದ ಯೋಧ ಜಾರ್ಜ್ ಸ್ವಾಗತ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ದೇಶ ಸೇವೆ ಮಾಡುವ ಪುಣ್ಯದ ಕೆಲಸ ಎಲ್ಲರಿಗೂ ದೊರಕುವುದಿಲ್ಲ ಎಂದು ತಾಲೂಕು ಪ್ಯಾರಾ ಮಿಲಿಟರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪ್ರವೀಣ್‌ ಮಡಬೂರು ಹೇಳಿದರು.

ಶನಿವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಪ್ಯಾರಾ ಮಿಲಿಟರಿ ಮಾಜಿ ಸೈನಿಕರ ಸಂಘ, ಶಂಕೋನ ಮಾಜಿ ಸೈನಿಕರ ಸಂಘ ಹಾಗೂ ಜೇಸೀ ಸಂಸ್ಥೆಯಿಂದ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ತವರಿಗೆ ಮರಳಿದ ಯೋಧ ಜಾರ್ಜ್ ಅವರನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶ ಸೇವೆ ಮಾಡಿ ಸುರಕ್ಷಿತವಾಗಿ ಮರಳುವುದೂ ಕೂಡ ದೊಡ್ಡ ಸಾಹಸ. ಜೀವದ ಹಂಗನ್ನೂ ತೊರೆದು ಸೇವೆ ಸಲ್ಲಿಸಬೇಕು. ಇದಕ್ಕೆ ಕುಟುಂಬ ತೊರೆಯಬೇಕು. ದೇಶ ಸೇವೆ ಭಾಗ್ಯ ದೊರಕುವುದೇ ಒಂದು ಹೆಮ್ಮೆಯ ವಿಷಯ ಎಂದರು.

ಜೇಸೀ ಸಂಸ್ಥೆ ಸದಸ್ಯ ಹೊನ್ನೇಕುಡಿಗೆ ಎಲ್ದೋ ಮಾತನಾಡಿ, ದೇಶ ಸೇವೆ ಮಾಡುವಾಗ ಕುಟುಂಬದ ಸಂಪರ್ಕವಿಲ್ಲದೆ ಎಷ್ಟೋ ವರ್ಷಗಳಗಟ್ಟಲೇ ಕಾಲ ಹೊರಗೆ ಇರಬೇಕಾಗುತ್ತದೆ. ನಮ್ಮ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತ ಯೋಧರಿ ದ್ದಾರೆ. ನಮ್ಮ ತಾಲೂಕಿನ ಇಷ್ಟು ಜನ ದೇಶ ಸೇವೆ ಸಲ್ಲಿಸಿದ್ದಾರೆ ಎಂಬುದೇ ನಮ್ಮ ತಾಲೂಕಿಗೆ ಹೆಮ್ಮೆ. ನಿವೃತ್ತ ಯೋಧರ ಸಂಘ ಸ್ಥಾಪಿಸಿರುವುದೂ ಕೂಡ ಶ್ಲಾಘನೀಯ ಎಂದರು.

ಎಎಸ್ಐ ನಟರಾಜ್ ಮಾತನಾಡಿ, ಕುಟುಂಬವನ್ನು ಹಾಗೂ ಜೀವದ ಹಂಗು ತೊರೆದು ದೇಶ ಸೇವೆ ಮಾಡುವುದು ಕಷ್ಟಕರವಾದದ್ದು. ಮಳೆ, ಬಿಸಿಲು, ಗಾಳಿ ಎನ್ನದೆ ನಿರಂತರ ವರ್ಷದ 365 ದಿನಗಳೂ ಯೋಧರು ಸೇವೆ ಸಲ್ಲಿಸುತ್ತಾರೆ. ಕಾಣದ ಶಕ್ತಿ ಎಂದರೆ ಯೋಧರು, ಕಾಣುವ ಶಕ್ತಿ ಎಂದರೆ ಅದು ಪೊಲೀಸರು ಎಂದರು.

ಸೇವೆಯಿಂದ ನಿವೃತ್ತಿ ಹೊಂದಿ ತವರಿಗೆ ಬಂದ ಯೋಧ ಜಾರ್ಜ್ ಅವರನ್ನು ಶೃಂಕೋನ ಮಾಜಿ ಸೈನಿಕರ ಸಂಘ, ಜೇಸೀ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದರು. ನಂತರ ಮೆರವಣಿಗೆ ಮೂಲಕ ಸ್ವಗ್ರಾಮ ಶಿಂಸೆಗೆ ಕರೆದೊಯ್ಯಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪ್ಯಾರಾ ಮಿಲಿಟರಿ ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳಾದ ಭಾಸ್ಕರ್‌ ಆಚಾರಿ, ಉಮೇಶ್, ಚಿನ್ನಯ್ಯ, ಸೋಮಶೇಖರ್, ಶೃಂಕೋನ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳಾದ ಡೇವೀಸ್, ವರ್ಗೀಸ್, ಬಿನು, ಜೇಸೀ ಸಂಸ್ಥೆ ಅಧ್ಯಕ್ಷ ಎಂ.ಪಿ.ಮನು, ಅಜೇಯ, ಅಪೂರ್ವ ರಾಘು, ಅಭಿನವ ಗಿರಿರಾಜ್, ಎಸ್.ಎಸ್.ಜಗದೀಶ್, ಚರಣ್‌ರಾಜ್ ಮತ್ತಿತರರು ಉಪಸ್ಥಿತರಿದ್ದರು.