ವಿಜಯನಗರದ ಚರಿತ್ರೆಗೆ ಯುವಸಮೂಹ ಫಿದಾ

| Published : Feb 04 2024, 01:31 AM IST

ಸಾರಾಂಶ

ವಿಜಯನಗರ ಸಾಮ್ರಾಜ್ಯದ ಚರಿತ್ರೆ, ಹಕ್ಕ- ಬುಕ್ಕರು, ವಿದ್ಯಾರಣ್ಯರು, ಪ್ರೌಢದೇವರಾಯ, ಶ್ರೀಕೃಷ್ಣದೇವರಾಯ ಸೇರಿದಂತೆ ಹಂಪಿಯ ಸುವರ್ಣಯುಗ, ಆಗಿನ ಕಾಲದಲ್ಲೇ ಹಂಪಿಗೆ ವಿದೇಶಿ ಪ್ರವಾಸಿಗರು ಆಗಮಿಸಿ ಇಲ್ಲಿನ ಆಡಳಿತವನ್ನು ವರ್ಣನೆ ಮಾಡಿರುವುದನ್ನು ಯುವಕರು ಕೇಳಿ ರೋಮಾಂಚನಗೊಂಡರು.

ಕೃಷ್ಣ ಎನ್. ಲಮಾಣಿ

ಹಂಪಿ: ವಿಶ್ವವಿಖ್ಯಾತ ಹಂಪಿ ಉತ್ಸವದ ವೀಕ್ಷಣೆಗೆ ಯುವಕರ ದಂಡೇ ಹಂಪಿಗೆ ಆಗಮಿಸಿದ್ದು, ವಿಜಯನಗರ ಗತಕಾಲದ ವೈಭವವನ್ನು ಮುಂದಿನ ಪೀಳಿಗೆಗೆ ದಾಟಿಸಲು ವಿಜಯನಗರ ಜಿಲ್ಲಾಡಳಿತ ಕೂಡ ಶಾಲೆಗಳಿಗೂ ರಜೆ ನೀಡಿದ ಹಿನ್ನೆಲೆ ಶಾಲಾ ಮಕ್ಕಳೂ ಹಂಪಿಗೆ ಆಗಮಿಸಿ ಉತ್ಸವಕ್ಕೆ ಉತ್ಸಾಹ ತುಂಬಿದರು.

ವಿಜಯನಗರ ಸಾಮ್ರಾಜ್ಯದ ಚರಿತ್ರೆ, ಹಕ್ಕ- ಬುಕ್ಕರು, ವಿದ್ಯಾರಣ್ಯರು, ಪ್ರೌಢದೇವರಾಯ, ಶ್ರೀಕೃಷ್ಣದೇವರಾಯ ಸೇರಿದಂತೆ ಹಂಪಿಯ ಸುವರ್ಣಯುಗ, ಆಗಿನ ಕಾಲದಲ್ಲೇ ಹಂಪಿಗೆ ವಿದೇಶಿ ಪ್ರವಾಸಿಗರು ಆಗಮಿಸಿ ಇಲ್ಲಿನ ಆಡಳಿತವನ್ನು ವರ್ಣನೆ ಮಾಡಿರುವುದನ್ನು ಯುವಕರು ಕೇಳಿ ರೋಮಾಂಚನಗೊಂಡರು.

ಜೀವಂತ ಚರಿತ್ರೆ: ಹಂಪಿಯ ಜೀವಂತ ಚರಿತ್ರೆಯನ್ನು ಕಣ್ತುಂಬಿಕೊಂಡ ಯುವ ಸಮೂಹ ದೇವಾಲಯಗಳು, ಮಂಟಪ, ಸ್ಮಾರಕಗಳನ್ನು ವೀಕ್ಷಿಸಿ ಇತಿಹಾಸ ತಿಳಿದುಕೊಂಡರು. ಹಂಪಿಯ ವಸ್ತುಪ್ರದರ್ಶನ, ಪುಸ್ತಕ ಮೇಳ, ಪುಷ್ಪಮೇಳಕ್ಕೂ ಭೇಟಿ ನೀಡಿ ಯುವಕರು ಖುಷಿಪಟ್ಟರು.

ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ರಥಬೀದಿ, ಕಲ್ಲಿನತೇರು, ಕಡಲೆಕಾಳು ಗಣೇಶ, ವಿಜಯ ವಿಠ್ಠಲ ದೇವಾಲಯ, ಹಜಾರರಾಮ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳನ್ನು ಕಂಡು ಇತಿಹಾಸವನ್ನು ಯುವಕರು ಅರಿತುಕೊಂಡರು.

ಮೈಸೂರು ದಸರೆಗೆ ಹಂಪಿ ಪ್ರೇರಣೆ: ಹಂಪಿಯ ಮಹಾನವಮಿ ದಿಬ್ಬದಲ್ಲಿ ವಿಜಯನಗರದ ಆಳರಸರು ಒಂಬತ್ತು ದಿನಗಳವರೆಗೆ ನವರಾತ್ರಿ ಉತ್ಸವ ನಡೆಸುತ್ತಿದ್ದರು. ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ಮೈಸೂರು ರಾಜರು ಇದೇ ದಸರಾ ಹಬ್ಬ ಮುಂದುವರಿಸಿದರು. ಈಗ ಈ ಹಬ್ಬ ನಾಡಹಬ್ಬವಾಗಿ ಮಾರ್ಪಟ್ಟಿದೆ ಎಂಬುದನ್ನು ಕೇಳಿ ಯುವಕರು ರೋಮಾಂಚನಗೊಂಡರು.

ಹಂಪಿ ಉತ್ಸವ: ಹಂಪಿ ಉತ್ಸವ 1970ರಲ್ಲಿ ಕನಕ- ಪುರಂದರ ಉತ್ಸವವಾಗಿ ಆಚರಣೆಗೊಂಡು ಎಂ.ಪಿ. ಪ್ರಕಾಶ್‌ ಅವರ ಇಚ್ಛಾಸಕ್ತಿಯಿಂದ ಹಂಪಿ ಉತ್ಸವವಾಗಿ ಆಚರಣೆ ಮಾಡುತ್ತಾ ಬರಲಾಗುತ್ತಿದೆ ಎಂಬುದನ್ನು ಕೇಳಿ ತಿಳಿದುಕೊಂಡ ಯುವ ಸಮೂಹ, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿವಿಗಾಗಿ ಇಂತಹ ಉತ್ಸವಗಳು ಕಾಲ ಕಾಲಕ್ಕೆ ನಡೆಯಬೇಕೆಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.

ಹಂಪಿಯ ಗಾಯತ್ರಿಪೀಠ ವೇದಿಕೆ, ಎದುರು ಬಸವಣ್ಣ ವೇದಿಕೆ, ಶ್ರೀ ವಿರೂಪಾಕ್ಷೇಶ್ವರ ವೇದಿಕೆ ಮತ್ತು ಸಾಸಿವೆಕಾಳು ಗಣಪತಿ ವೇದಿಕೆಯ ನಿರ್ಮಾಣ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದ ಯುವ ಸಮೂಹ ಕಲಾವೈಭವಕ್ಕೆ ತಲೆದೂಗಿದರು.

ಧ್ವನಿ ಮತ್ತು ಬೆಳಕು: ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಕಟ್ಟಿಕೊಡುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವೀಕ್ಷಿಸಿದ ಯುವಕರು, ವಿಜಯನಗರ ನೆಲದ ವೈಭವಪೇತ ಇತಿಹಾಸಕ್ಕೆ ಮಾರುಹೋದರು. ಹಂಪಿ ಉತ್ಸವ ಬರೀ ಕಾಟಾಚಾರದ ಉತ್ಸವವಲ್ಲ, ಮುಂದಿನ ಪೀಳಿಗೆಗೆ ಈ ಉತ್ಸವ ಇತಿಹಾಸವನ್ನು ಉಣಬಡಿಸಿದೆ. ಅಷ್ಟೇ ಅಲ್ಲ, ಕಲಾವಿದರಿಗೂ ಅನ್ನ ಕೊಡುವ ಉತ್ಸವವಾಗಿದೆ.

ಈ ಉತ್ಸವ 5000 ಕಲಾವಿದರಿಗೆ ವೇದಿಕೆ ಕಲ್ಪಿಸಿದೆ. ನಾಡಿನ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವನ್ನೂ ಹಂಪಿ ಉತ್ಸವ ಮಾಡಿದೆ ಎಂಬದುನ್ನು ಅರಿತುಕೊಂಡ ಯುವ ಸಮೂಹ ವಿಜಯನಗರ ವೈಭವಕ್ಕೆ ಜೈಕಾರ ಮೊಳಗಿಸಿದರು.