ಪೌರಕಾರ್ಮಿಕರಿಗೆ ಸೈಟ್‌ ನೀಡುತ್ತಿಲ್ಲ: ಪಾಲಿಕೆ ಸ್ಪಷ್ಟನೆ

| Published : Feb 10 2024, 01:48 AM IST

ಪೌರಕಾರ್ಮಿಕರಿಗೆ ಸೈಟ್‌ ನೀಡುತ್ತಿಲ್ಲ: ಪಾಲಿಕೆ ಸ್ಪಷ್ಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ಯಾವುದೇ ನಿವೇಶನಗಳನ್ನು ನೀಡುವ ಯೋಜನೆಯನ್ನು ಪ್ರಸ್ತುತ ಕೈಗೆತ್ತಿಕೊಂಡಿಲ್ಲ. ನಿವೇಶನ ಹಂಚಿಕೆ ಕುರಿತು ಯಾವುದೇ ಅಧಿಕೃತವಾಗಿ ಪಾಲಿಕೆಯಿಂದ ಅಧಿಸೂಚನೆ ಹೊರಡಿಸಿಲ್ಲ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಆರ್‌.ಪ್ರತಿಭಾ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಪೌರಕಾರ್ಮಿಕರಿಗೆ ಪಾಲಿಕೆ ವತಿಯಿಂದ ನಿವೇಶನ ನೀಡುವ ಯಾವುದೇ ಯೋಜನೆ ಕೈಗೊಂಡಿಲ್ಲ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಆರ್‌.ಪ್ರತಿಭಾ ಸ್ಪಷ್ಟಪಡಿಸಿದ್ದಾರೆ.

ಅನಾಮಧೇಯ ವ್ಯಕ್ತಿಗಳು ಪೌರಕಾರ್ಮಿಕರಿಂದ ನಿವೇಶನ ಕೊಡಿಸುವುದಾಗಿ ಹಣ ವಸೂಲಿ ಮಾಡುತ್ತಿರುವುದು ಹಾಗೂ ಪಾಲಿಕೆಯ ಹೆಸರನ್ನು ಬಳಸಿ ದುರ್ಬಳಕೆ ಮಾಡಿರುವ ಬಗ್ಗೆ ಪಾಲಿಕೆಗೆ ದೂರುಗಳು ಬರುತ್ತಿರುತ್ತಿವೆ.

ಪೌರ ಕಾರ್ಮಿಕರಿಗೆ ಪಾಲಿಕೆ ವತಿಯಿಂದ ಯಾವುದೇ ನಿವೇಶನಗಳನ್ನು ನೀಡುವ ಯೋಜನೆಯನ್ನು ಪ್ರಸ್ತುತ ಕೈಗೆತ್ತಿಕೊಂಡಿಲ್ಲ. ನಿವೇಶನ ಹಂಚಿಕೆ ಕುರಿತು ಯಾವುದೇ ಅಧಿಕೃತವಾಗಿ ಪಾಲಿಕೆಯಿಂದ ಅಧಿಸೂಚನೆ ಹೊರಡಿಸಿಲ್ಲ. ಆದ್ದರಿಂದ ಇಂತಹ ಯಾವುದೇ ಆಮಿಷ ಮತ್ತು ಸುಳ್ಳು ವದಂತಿಗಳಿಗೆ ಪೌರ ಕಾರ್ಮಿಕರು ಮೋಸ ಹೋಗಬಾರದು ಎಂದು ತಿಳಿಸಿದ್ದಾರೆ.

ಒಂದು ವೇಳೆ ಮಾತುಗಳು ಕೇಳಿ ಮೋಸ ಹೋದರೆ ಪಾಲಿಕೆಯು ಜವಾಬ್ದಾರಿ ಆಗುವುದಿಲ್ಲ ಎಂದು ಜಂಟಿ ಆಯುಕ್ತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ನಾಳೆ ಕಟ್ಟಡ ಕಾರ್ಮಿಕ ಒಕ್ಕೂಟದ ಪ್ರತಿಭಟನೆ

ಬೆಂಗಳೂರು: ನೋಂದಣಿ ಆಗಿರುವ ಕಟ್ಟಡ ಕಾರ್ಮಿಕರಿಗೆ ₹5 ಲಕ್ಷ ವಸತಿ ಸೌಲಭ್ಯ, ಉಚಿತ ಬಸ್ ಪಾಸ್, ಕಾರ್ಮಿಕರ ಸಮುದಾಯ ಭವನ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟವು ಫೆ.11ಕ್ಕೆ ಫ್ರೀಡಂ ಪಾರ್ಕ್‌ನಲ್ಲಿ ‘ಕಾರ್ಮಿಕ ಹಕ್ಕಿಗಾಗಿ ಬೃಹತ್ ಪ್ರತಿಭಟನೆ’ ಹಮ್ಮಿಕೊಂಡಿರುವುದಾಗಿ ಒಕ್ಕೂಟದ ರಾಜ್ಯ ಅಧ್ಯಕ್ಷ ಬಿ. ದೇವರಾಜ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಿಷ್ಠ ವೇತನಕ್ಕೆ ಒಳಪಡುವ ಕಾರ್ಮಿಕರಿಗೆ ₹25 ಸಾವಿರ ನಿಗದಿಪಡಿಸಬೇಕು. ಕಾರ್ಮಿಕ ಇಲಾಖೆಯಿಂದ ವಂತಿಗೆ ಹಣವನ್ನು ಇಡೀ ರಾಜ್ಯಾದ್ಯಂತ ಶೇ.2ರಷ್ಟು ಹೆಚ್ಚುವರಿಯಾಗಿ ಏರಿಸಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗೆ ಪಿಎಫ್, ಇಎಸ್‌ಐ ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.ರಾಜ್ಯಾದ್ಯಂತ ಕಾರ್ಖಾನೆ, ಮಾಲ್, ಹೋಟೆಲ್, ಪೆಟ್ರೋಲ್ ಬಂಕ್, ಗಾರ್ಮೆಂಟ್ಸ್ ಹಾಗೂ ಸೆಕ್ಯೂರಿಟಿಗಳಲ್ಲಿ ಕೆಲಸ ಮಾಡುವವರಿಗೆ ನ್ಯಾಯಯುತವಾಗಿ ವೇತನ ಚೀಟಿ ಸಿಗುವಂತಾಗಬೇಕು, ವಿವಿಧ ಕಾರ್ಮಿಕರಿಗೆ ನೀಡುವ ಕಿಟ್‌ಗಳಿಗಾಗಿ ವಹಿಸುವ ಟೆಂಡರನ್ನು ತಕ್ಷಣವೇ ರದ್ದುಪಡಿಸಬೇಕು, ಸಂಚಾರಿ ವಾಹನ ಚಿಕಿತ್ಸೆಯನ್ನು ತಕ್ಷಣವೇ ರದ್ದುಗೊಳಿಸಬೇಕು, ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಕಾರ್ಮಿಕರಿಗಾಗಿ ₹1 ಸಾವಿರ ಕೋಟಿ ಅನುದಾನ ಘೋಷಣೆ ಮಾಡಬೇಕು ಎಂಬ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಈ ಬಗ್ಗೆ ಸರ್ಕಾರ ಕ್ರಮಕೈಗೊಳ್ಳದಿದ್ದರೆ, ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಮೇಲುಕೋಟೆ ಬೆಟ್ಟಸ್ವಾಮಿ ಗೌಡ, ಎಂ.ಮಹೇಶ್ ಇದ್ದರು.