ಪಹಣಿಯಲ್ಲಿ ವಕ್ಫ್‌ ಹೆಸರು ತೆಗೆಯಲು ನ. 5ರ ಗಡುವು

| Published : Oct 31 2024, 12:58 AM IST

ಸಾರಾಂಶ

ಶ್ರೀರಾಮಸೇನೆಯು ರೈತರ ನೇತೃತ್ವದಲ್ಲಿ ಬುಧವಾರ ಧಾರವಾಡ ತಹಸೀಲ್ದಾರ್‌ ಕಚೇರಿ ಎದುರು ಆಯೋಜಿಸಿದ್ದ ಪ್ರತಿಭಟನೆಗೆ ಏಕಾಏಕಿ ದೊಡ್ಡಮಟ್ಟದ ಬೆಂಬಲ ದೊರೆತು ರೈತ ಸಂಘಟನೆ, ದಲಿತ ಸಂಘಟನೆಗಳು ಸಹ ಕೈ ಜೋಡಿಸಿದವು.

ಧಾರವಾಡ:

ಉಪ್ಪಿನ ಬೆಟಗೇರಿ ಸೇರಿದಂತೆ ತಾಲೂಕಿನ ರೈತರ ಜಮೀನುಗಳ ಮೇಲೆ ವಕ್ಫ್‌ ಮಂಡಳಿ ಹೆಸರು ನಮೂದು ಆಗಿರುವುದನ್ನು ಕಡಿಮೆ ಮಾಡಲು ನೊಂದ ರೈತರು, ರೈತ ಹೋರಾಟಗಾರರು ಹಾಗೂ ಶ್ರೀರಾಮಸೇನೆಯು ನ. 5ರ ವರೆಗೆ ತಹಸೀಲ್ದಾರ್‌ಗೆ ಗಡುವು ನೀಡಿದೆ.

ಶ್ರೀರಾಮಸೇನೆಯು ರೈತರ ನೇತೃತ್ವದಲ್ಲಿ ಬುಧವಾರ ಇಲ್ಲಿಯ ತಹಸೀಲ್ದಾರ್‌ ಕಚೇರಿ ಎದುರು ಆಯೋಜಿಸಿದ್ದ ಪ್ರತಿಭಟನೆಗೆ ಏಕಾಏಕಿ ದೊಡ್ಡಮಟ್ಟದ ಬೆಂಬಲ ದೊರೆತು ರೈತ ಸಂಘಟನೆ, ದಲಿತ ಸಂಘಟನೆಗಳು ಸಹ ಕೈ ಜೋಡಿಸಿದವು. ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ರೈತರು, ಯಾರನ್ನು ಕೇಳಿ ವಕ್ಫ್‌ ಹೆಸರು ಸೇರಿಸಿದ್ದೀರಿ? ಹೆಸರು ಸೇರಿಸುವಾಗ ಏತಕ್ಕೆ ನೋಟಿಸ್‌ ನೀಡಲಿಲ್ಲ? ಇದೇ ರೀತಿ ಮುಂದುವರಿದರೆ ತಹಸೀಲ್ದಾರ್‌ ಕಚೇರಿಗೆ ಆಯುಧಗಳಿಂದ ಮುತ್ತಿಗೆ ಹಾಕಬೇಕಾದೀತು ಎಂಬ ಎಚ್ಚರಿಕೆ ನೀಡಿದರು.

ತಮ್ಮ ಹೊಲ ವಕ್ಫ್‌ ಮಂಡಳಿ ಹೆಸರು ಆಗಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಉಪ್ಪಿನ ಬೆಟಗೇರಿಯ ಗಂಗಪ್ಪ ಜವಳಗಿ, ರೈತರ ಹೊಲಗಳನ್ನು ವಕ್ಫ್‌ ಮಂಡಳಿ ಕಬಳಿಸಲು ರಾಜ್ಯ ಸರ್ಕಾರ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ದುಷ್ಟರ ಕೂಟ ರಚಿಸಿಕೊಂಡಿದ್ದಾರೆ ಎಂದು ವೈಯಕ್ತಿಕವಾಗಿ ಅವರ ಬಗ್ಗೆ ಅವಾಚ್ಯ ಶಬ್ದಗಳನ್ನು ಸಹ ಬಳಸಿದರು. ಅದೇ ರೀತಿ ಇನ್ನೋರ್ವ ರೈತ ಮರಬಸಪ್ಪ ಮಸೂತಿ ಸಹ ಸರ್ಕಾರದ ನಿರ್ಲಕ್ಷ್ಯದಿಂದ ನಮ್ಮ ಆಸ್ತಿ ವಕ್ಫ್‌ ಪಾಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕರಾದ ಅಮೃತ ದೇಸಾಯಿ, ಸೀಮಾ ಮಸೂತಿ ಮಾತನಾಡಿ, ಯಾವ ರೈತರು ಭಯ ಪಡುವಂತಿಲ್ಲ. ಅವರೊಂದಿಗೆ ನಾವಿದ್ದು ಯಾವುದೇ ಕಾರಣಕ್ಕೂ ತಮ್ಮ ಆಸ್ತಿ ವಕ್ಫ್‌ ಮಂಡಳಿಗೆ ಹೋಗಲು ಬಿಡುವುದಿಲ್ಲ. ತಲೆ-ತಲಾಂತರಿಂದ ಬಂದ ಆಸ್ತಿ ಹೇಗೆ ವಕ್ಫ್‌ ಆಸ್ತಿ ಆಗಲಿದೆ ಎಂದು ಪ್ರಶ್ನಿಸಿ, ಈ ಬಗ್ಗೆ ನಾವು ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಮನವಿ ನೀಡುವ ಬದಲು ಎಚ್ಚರಿಕೆ ನೋಟಿಸ್‌ ನೀಡೋಣ ಎಂದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಮಾತನಾಡಿ, ಆಗಿನ ಪ್ರಧಾನಿ ನೆಹರು ಹಾಗೂ ಪಿ.ವಿ. ನರಸಿಂಹರಾವ್‌ ಮಾಡಿದ ತಪ್ಪಿನಿಂದಾಗ ಇಂದು ರೈತರು ಪರದಾಡುವ ಸ್ಥಿತಿ ಬಂದಿದೆ. ಸುಪ್ರೀಂಕೋರ್ಟ್ ಸಹ ವಕ್ಫ್‌ ಆಸ್ತಿಯನ್ನು ಪ್ರಶ್ನಿಸದಂತೆ ಕಾನೂನು ಮಾಡಲಾಗಿದೆ. ಹೀಗಾಗಿ ವಕ್ಫ್‌ ಈ ರೀತಿ ಆಟ ನಡೆಸುತ್ತಿದೆ. ಉಪ್ಪಿನ ಬೆಟಗೇರಿಯಲ್ಲಿ ರೈತರು ಮುತವಲ್ಲಿಯಿಂದ ಪತ್ರ ತರಬೇಕು ಎಂದು ಅಧಿಕಾರಿಗಳು ಹೇಳಿದ್ದು ಇದೇ ಕಾನೂನಿನ ಬಲದಿಂದ. ಹೀಗಾಗಿ ಈ ಕಾನೂನಿನಲ್ಲಿ ತಿದ್ದುಪಡಿ ತರಲು ನಾವೆಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲಿಸಬೇಕು ಎಂದು ಪ್ರತಿಪಾದಿಸಿದರು. ಜತೆಗೆ ಯಾವುದೇ ಕಾರಣಕ್ಕೂ ಇನ್ಮುಂದೆ ರೈತರು ಅಧಿಕಾರಿಗಳ ಬಳಿ ಹೋಗುವಂತಿಲ್ಲ. ಸಮಸ್ಯೆಗೆ ಅವರೇ ಪರಿಹಾರ ಒದಗಿಸಿ ರೈತರ ಬಳಿ ಬರಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಕಂದಾಯ ಸಚಿವ ಹಾಗೂ ಜಿಲ್ಲಾಡಳಿತಕ್ಕೆ ಎಚ್ಚರಿಕೆ ಪತ್ರವೊಂದನ್ನು ನೀಡಲಾಯಿತು. ಪತ್ರವನ್ನು ಸ್ವೀಕರಿಸಿ ಪ್ರತಿಕ್ರಿಯೆ ನೀಡಿದ ತಹಸೀಲ್ದಾರ್‌ ಡಾ. ದೊಡ್ಡಪ್ಪ ಹೂಗಾರ, ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ಮಾಡಿದ್ದು ವಕ್ಫ್‌ ಮಂಡಳಿ ಅಧಿಕಾರಿಗಳನ್ನು ನ. 5ಕ್ಕೆ ಕರೆಯಲಾಗಿದ್ದು, ಕಾನೂನು ಪ್ರಕಾರ ರೈತರಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ರೈತ ಮುಖಂಡರು, ಶ್ರೀರಾಮ ಸೇನೆ ಸದಸ್ಯರು ಇದ್ದರು.