ವಿದ್ಯುತ್ ತಂತಿಯಡಿ ಗಿಡ ನೆಡುವುದಕ್ಕೆ ಆಕ್ಷೇಪ

| Published : Nov 03 2025, 03:03 AM IST

ಸಾರಾಂಶ

ಪುತ್ತೂರು ತಾ.ಪಂ. ತರಬೇತಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಮಿತಿ ಸಭೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಅಧ್ಯಕ್ಷತೆಯಲ್ಲಿ ನಡೆಯಿತು.

ಪುತ್ತೂರು: ಪಂಚ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಸೂಚನೆಕನ್ನಡಪ್ರಭ ವಾರ್ತೆ ಪುತ್ತೂರು

ತಾಲೂಕಿನ ವಿವಿಧ ಕಡೆಗಳಲ್ಲಿ ವಿದ್ಯುತ್ ತಂತಿ ಹಾದು ಹೋಗುವ ರಸ್ತೆ ಬದಿಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ಸಾಲು ಮರಗಳನ್ನು ನೆಡಲಾಗುತ್ತಿದೆ. ಇದರಿಂದ ಮುಂದೆ ಸಮಸ್ಯೆಗಳು ಸೃಷ್ಟಿಯಾಗಲಿವೆ. ಹಾಗಾಗಿ ಈಗಲೇ ಈ ಗಿಡಗಳನ್ನು ತೆರವು ಮಾಡಬೇಕು. ವಿದ್ಯುತ್ ತಂತಿಯ ಅಡಿಯಲ್ಲಿ ಗಿಡಗಳನ್ನು ನೆಡದಂತೆ ಮೆಸ್ಕಾಂ ಇಲಾಖೆ ನೋಡಿಕೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ತಿಳಿಸಿದ್ದಾರೆ.ಮಂಗಳವಾರ ಪುತ್ತೂರು ತಾ.ಪಂ. ತರಬೇತಿ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಪ್ರಗತಿ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಕಾರ್ಡುಗಳು ರದ್ದಾಗುವ ಸಂದರ್ಭ ಸರಿಯಾದ ಪರಿಶೀಲನೆ ಮಾಡಬೇಕು. ಬಡವರಿಗೆ ಅನ್ಯಾಯ ಆಗಬಾರದು. ಅರ್ಹ ಫಲಾನುಭವಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಶ್ರೀಮಂತರಲ್ಲಿ ಇಂತಹ ಕಾರ್ಡುಗಳಿದ್ದರೆ ಅದನ್ನು ರದ್ದು ಮಾಡಿ. ಆದರೆ ನಿಜವಾಗಿಯೂ ಅರ್ಹತೆ ಇದ್ದರೆ ಅದನ್ನು ಪರಿಶೀಲನೆ ಮಾಡಿ ಕಾರ್ಡು ಉಳಿಸಿಕೊಳ್ಳುವ ಕೆಲಸವಾಗಬೇಕು ಎಂದು ಉಮಾನಾಥ ಶೆಟ್ಟಿ ತಿಳಿಸಿದರು.ಅಂಗಡಿಗಳಲ್ಲಿ ಪರಿಶೀಲನೆ:ಪಡಿತರ ಅಕ್ಕಿ ಮಾರಾಟ ಮಾಡುವ ಜಾಲ ಪತ್ತೆ ಹಚ್ಚಬೇಕು. ಈ ಅಕ್ಕಿ ಪಡೆದುಕೊಳ್ಳುವ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಆಗ ಕನಿಷ್ಠ ಜಾಗೃತಿ ಉಂಟಾಗುತ್ತದೆ. ಅಕ್ಕಿ ಮಾರಾಟ ಮಾಡುವ ಹಾಗೂ ಅದನ್ನು ಖರೀದಿಸುವ ಅಂಗಡಿಗಳ ಬಗ್ಗೆ ಕಾನೂನುಕ್ರಮ ಕೈಗೊಂಡರೆ ಸರ್ಕಾರಿ ಸೌಲಭ್ಯ ಬಡವರ್ಗಕ್ಕೆ ಸಿಗುವಂತಾಗುತ್ತದೆ ಎಂದು ಅವರು ತಿಳಿಸಿದರು.ಸಮಿತಿಯ ಸದಸ್ಯ ಕಾರ್ಯದರ್ಶಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು. ಆಹಾರ ಇಲಾಖೆಯ ಶಿರಸ್ತೇದಾರ್ ಸರಸ್ವತಿ, ಸಿಡಿಪಿಒ ಹರೀಶ್ ಕೆ, ಕೆಎಸ್ಸಾರ್ಟಿಸಿ ಡಿಪೊ ಮೆನೇಜರ್ ಸುಬ್ರಹ್ಮಣ್ಯ ಪ್ರಕಾಶ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಸಹಾಯಕ ಸಾಂಖ್ಯಿಕ ಅಧಿಕಾರಿ ವಿಜಯಲಕ್ಷ್ಮೀ, ಮೆಸ್ಕಾಂ ಇಲಾಖೆಯ ಶಿವಶಂಕರ್, ಸದಸ್ಯರಾದ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸೇಸಪ್ಪ ನೆಕ್ಕಿಲು, ವಿಜಯಲಕ್ಷ್ಮೀ, ಮಹಮ್ಮದ್ ಫಾರೂಕ್, ಬಬಿತಾ, ತಾರಾನಾಥ ನುಳಿಯಾಲು, ಹುಸೈನ್, ವಿಶ್ವಜಿತ್ ಅಮ್ಮುಂಜೆ, ಶೀನಪ್ಪ ಪೂಜಾರಿ,ವಿಷಯ ನಿರ್ವಾಹಕಿ ವಂದನಾ ಪಿ. ಮತ್ತಿರರು ಭಾಗಿಗಳಾಗಿದ್ದರು.