ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾಹನ ಚಾಲಕರು ಎಲ್ಲೆಂದರಲ್ಲಿ ವಾಹನ ನಿಲ್ಲಿಸದೇ, ಸುರಕ್ಷಿತವಾಗಿ ವಾಹನ ಚಾಲನೆ ಮಾಡಿದಲ್ಲಿ ಅಮೂಲ್ಯ ಜೀವಗಳ ರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಕೆಎಸ್ಆರ್‌ಟಿಸಿ ಬಸ್ ವಾಹನ ಚಾಲಕರು ನಿಲುಗಡೆ ಸ್ಥಳಗಳಲ್ಲಿಯೇ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕರೆದೊಯ್ಯುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿರುವ ಕಬ್ಬಿನ ಕಾರ್ಖಾನೆ ಮಾಲೀಕರು ಕೂಡ ತಮ್ಮ ಕಾರ್ಖಾನೆಗಳಿಗೆ ಬರುವ ಟ್ರ್ಯಾಕ್ಟರ್ ಮತ್ತು ಎತ್ತಿನ ಬಂಡಿಗಳು ರಸ್ತೆ ಬದಿ ಅಥವಾ ನಡು ರಸ್ತೆಯಲ್ಲಿ ನಿಲ್ಲಿಸದ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು. ವಿಮೆ ಮಾಡಿಸಿರುವ ಟ್ರ್ಯಾಕ್ಟರ್‌ಗಳಿಗೆ ಮಾತ್ರ ಒಳಗಡೆ ಪ್ರವೇಶ ಎಂಬ ನಿಯಮ ಪಾಲಿಸಿದಲ್ಲಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಸರಳವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ರಸ್ತೆ ಸುರಕ್ಷತಾ ನಿಯಮ ಪಾಲಿಸಲು ಸಕ್ಕರೆ ಕಾರ್ಖಾನೆಯವರು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು. ಪುರಸಭೆ, ನಗರಸಭೆ, ಸ್ಥಳೀಯ ಪ್ರಾಧಿಕಾರ ಅಧಿಕಾರಿಗಳು, ಚರಂಡಿ, ಒಳಚರಂಡಿ, ನಲ್ಲಿ ಸಂಪರ್ಕ ಇತ್ಯಾದಿ ಕಾಮಗಾರಿಗಳಿಗಾಗಿ ರಸ್ತೆ ಅಗೆದಿದ್ದಲ್ಲಿ ಅಂತಹ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಅಂತಹ ಕಾಮಗಾರಿಗಳಿಂದಾಗಿ ಅಪಘಾತಗಳು ಸಂಭವಿಸಿ ಜೀವ ಹಾನಿ ಆದಲ್ಲಿ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾತನಾಡಿ, ರಸ್ತೆ ಸುರಕ್ಷತೆ ನಿಯಮ ಪಾಲಿಸಿ ಎಂದು ಹೇಳುವುದು ಕೇವಲ ಪೊಲೀಸ್ ಇಲಾಖೆಯದ್ದು ಮಾತ್ರವಲ್ಲ, ಎಲ್ಲ ಇಲಾಖೆಗಳು ಮಾಡಬೇಕಾಗುತ್ತದೆ. ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮುಖ್ಯವಾಗಿ ಡಿಡಿಪಿಐ, ಡಿಡಿಪಿಯು ಹಾಗೂ ಪ್ರಥಮ ಪದವಿ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ಗಂಟೆ ರಸ್ತೆ ಸುರಕ್ಷತಾ ನಿಯಮ ಪಾಲಿಸುವ ಕುರಿತು 15 ದಿನಕೊಮ್ಮೆಯಾದರೂ ಪಾಠ ಬೋಧಿಸಿದಲ್ಲಿ ವಿದ್ಯಾರ್ಥಿಗಳಿಗೆ ಮನವರಿಕೆಯಾಗುತ್ತದೆ. ಆ ಮಕ್ಕಳು ಕೂಡ ಮನೆಯ ಸದಸ್ಯರು ಹಾಗೂ ಪಾಲಕರಿಗೆ ಹೇಳುವ ಮೂಲಕ ಅರಿವು ಮೂಡುತ್ತದೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಯವರು ರಸ್ತೆ ನಿಮಾಣಕ್ಕೆ ಆಸಕ್ತಿ ತೋರಿದಷ್ಟು ರಸ್ತೆ ಸುರಕ್ಷತೆಗೆ ಯಾವ ಯಾವ ಕ್ರಮ ಕೈಗೊಳ್ಳಬೇಕು ಎಂಬುದರತ್ತ ಕೂಡ ಅಷ್ಟೇ ಆಸಕ್ತಿ ವಹಿಸಬೇಕು. ಅಪಘಾತ ಸ್ಥಳಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ ಅಪಘಾತಗಳು ಸಂಭವಿಸದಂತೆ ಯಾವ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ವರದಿ ನೀಡಿ ಎಲ್ಲರೂ ತಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆ ಬಾಗಲಕೋಟ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಕೆ.ದುರ್ಗಾದಾಸ, ಜಿಲ್ಲಾ ಆರೋಗ್ಯಾಧಿರಿ ಡಾ,ಮಂಜುನಾಥ ಸೇರಿದಂತೆ ಇತರರು ಇದ್ದರು.