ರಾಜ್ಯಾದ್ಯಂತ ಭಾರತೀಯ ಅಯ್ಯಪ್ಪ ಸೇವಾ ಸಂಘವನ್ನು ಬೆಳವಣಿಗೆ ಮಾಡಿ ಶಬರಿ ಮಲೆಯಲ್ಲಿ ರಾಜ್ಯದ ಛಾಪು ಮೂಡಿಸಬೇಕಾಗಿದೆ. ಶಬರಿ ಮಲೆಯಲ್ಲಿ ಕರ್ನಾಟಕ ಭವನ ನಿರ್ಮಿಸಲು ಶ್ರಮಿಸುತ್ತಿದ್ದೇವೆ. ಇದಕ್ಕೆಎಲ್ಲ ಮಾಲಾಧಾರಿಗಳಿಗೆ ಸಹಕಾರ ಬೇಕಾಗಿದೆ ರಾಮುಕರಾಂಡ ಗುರುಸ್ವಾಮಿ ಕೋರಿದ್ದಾರೆ.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಅಯ್ಯಪ್ಪ ಸ್ವಾಮಿಯ ವ್ರತಾಚರಣೆ, ನಿಯಮ, ಪರಂಪರೆ ಐತಿಹಾಸಿಕವಾದದ್ದು. ಕರ್ನಾಟಕದಿಂದ ಪ್ರತಿವರ್ಷ ಕೋಟ್ಯಂತರ ಮಾಲಾಧಾರಿಗಳು ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ ಎಂದು ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಜ್ಯಾಧ್ಯಕ್ಷ ರಾಮುಕರಾಂಡ ಗುರುಸ್ವಾಮೀಜಿ ಹೇಳಿದರು.

ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆದ ಮಹಾಪೂಜೆ ಹಾಗೂ ಪಡಿಪೂಜೆ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಅವರು ಮಾತನಾಡಿದರು.

ಮಂಡಲ ಕಾಲ ವೃತಾಚರಣೆ ಮಾಡುವುದರಿಂದ ನಮ್ಮ ದೇಹ, ಮನಸ್ಸು ಪರಿಶುದ್ಧವಾಗುತ್ತದೆ. ಮನಸ್ಸಿಗೆ ನೆಮ್ಮದಿ, ಆನಂದ, ಸಂತೋಷ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಅಯ್ಯಪ್ಪ ಅಂದರೆ ಕಲಿಯುಗದ ವರ. ಬೇಡಿದ ವರಗಳನ್ನು ತಕ್ಷಣ ನೀಡುವ ದೇವರು. ಹಾಗಾಗೀ ಕೋಟ್ಯಂತರ ಜನ ನಂಬಿ ಅವರ ಮೊರೆ ಹೋಗಿ, ತಮ್ಮನ್ನು ತಾವು ಸಮರ್ಪಣೆ ಮಾಡಿಕೊಂಡು ಶರಣಾಗುತ್ತಾರೆ ಎಂದರು.

ಸತತ 32ನೇ ವರ್ಷದ ಮಾಲಾಧಾರಿ ಶಿವು ಕಿರಶ್ಯಾಳ ಗುರುಸ್ವಾಮಿ ಮಾತನಾಡಿ, ಕಳೆದ 17 ವರ್ಷಗಳಿಂದ ಈ ಆವರಣದಲ್ಲಿ ಮಹಾಪೂಜೆ ನೆರವೇರಿಸುತ್ತ ಬರುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಪೂಜೆ ಶ್ರದ್ಧೆ, ಭಕ್ತಿ ಮತ್ತು ಸಂಯಮದ ಪ್ರತೀಕ. ಈ ಪೂಜೆಯ ಮೂಲಕ ಮಾಲಾಧಾರಿಗಳ ಸಮೇತ ಪಟ್ಟಣದ ಸದ್ಭಕ್ತರು ಮನಸ್ಸಿನ ಅಶಾಂತಿ ತೊರೆದು ಆತ್ಮ ಶುದ್ಧಿ ಪಡೆಯುತ್ತಾರೆ ಎಂದರು.

ಬಾಗೇವಾಡಿಯ ಚಂದ್ರು ಗುರುಸ್ವಾಮಿ ಮಾತನಾಡಿ, ಸ್ವಾಮಿ ಅಯ್ಯಪ್ಪನ ಕೃಪೆಯಿಂದ ಸಕಲ ವಿಘ್ನಗಳು ದೂರವಾಗಿ ಜೀವನದಲ್ಲಿ ಶಾಂತಿ ಹಾಗೂ ಸದ್ಭಾವನೆ ನೆಲೆಸುತ್ತದೆ. ಸ್ವಾಮಿ ಶರಣಂ ಅಯ್ಯಪ್ಪ ಎಂಬ ನಾಮಸ್ಮರಣೆಯೇ ಭಕ್ತರ ಹೃದಯದಲ್ಲಿ ಧರ್ಮ ಮತ್ತು ಸಮಾನತೆಯ ಸಂದೇಶ ಸಾರುತ್ತದೆ ಎಂದರು.

ಇದೇ ವೇಳೆ ಬೆಳಗ್ಗೆ ಸಕಲ ವಾದ್ಯ ವೈಭವಗಳೊಂದಿಗೆ ಪಟ್ಟಣದ ಕಿಲ್ಲಾಗಲ್ಲಿಯಲ್ಲಿರುವ ಕಾಳಿಕಾದೇವಿ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವ ಹಾಗೂ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ಸಂಜೆ ಮಣಿಕಂಠನ ವಿಶೇಷ ಹಾಡುಗಳು, ಭರತನಾಟ್ಯ, ಮಹಾಭಿಷೇಕ, ಮಹಾಪೂಜೆ ಮತ್ತು ಪಡಿಪೂಜೆ ನಡೆದವು. ಅಸ್ಕಿ ಫೌಂಡೇಶನ್‌ ಅಧ್ಯಕ್ಷ ಸಿ.ಬಿ ಅಸ್ಕಿ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಕಾರ್ಯದರ್ಶಿ ಶ್ರೀಶೈಲ ಮೇಟಿ ಪೂಜಾ ವಿಧಾನಗಳಲ್ಲಿ ಭಾಗಿಯಾಗಿದ್ದರು. ಪ್ರಥಮ ಮಾಲಾಧಾರಿ ಬಸವರಾಜ ಪವಾಡಶೆಟ್ಟಿ ಗುರುಸ್ವಾಮಿ, ಹಿರಿಯರಾದ ಗಿರಿಯಪ್ಪ ಬಡಿಗೇರ ಗುರುಸ್ವಾಮಿ, ಸನ್ನಿಧಿ ಮೂಲ ಅರ್ಚಕರಾದ ರುದ್ರಯ್ಯ ಹಿರೇಮಠಗುರುಸ್ವಾಮಿ, ಅಡಕಿ ಗುರುಸ್ವಾಮಿಗಳು, ವಿಕ್ರಂ ಬಿರಾದಾರಗುರು ಸ್ವಾಮಿ ಸೇರಿದಂತೆ ಜಿಲ್ಲೆಯ ಹಲವು ಗುರುಸ್ವಾಮಿಗಳು, ಮಾಲಾಧಾರಿಗಳು ಇದ್ದರು. ಸಮಿತಿ ಅಧ್ಯಕ್ಷ ಸುನೀಲ ಇಲ್ಲೂರ, ಸದಸ್ಯರಾದ ಟಿ.ಭಾಸ್ಕರ, ಅಶೋಕ ಚಟ್ಟೇರ, ಭೀಮಣ್ಣದಾಸರ ಪೂಜೆಯ ಯಶಸ್ಸಿಗೆ ಶ್ರಮಿಸಿದರು. ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಮಾಜಿ ಸದಸ್ಯ ಮುತ್ತು ರಾಯಗೊಂಡ ಸೇರಿದಂತೆ ಅನೇಕ ಭಕ್ತರಿದ್ದರು. ಯಲಗೂರದ ಅಪ್ಪಾಜಿ ಮೆಲೊಡೀಸ್ ಸಂಗೀತ ಸೇವೆ ನೀಡಿತು.