ನ. 14ರಂದು ಸೇವಾಭಾರತಿ ಕಟ್ಟಡಕ್ಕೆ ಭೂಮಿ ಪೂಜೆ

| Published : Nov 11 2024, 11:51 PM IST

ಸಾರಾಂಶ

ಸೇವಾಭಾರತಿ ಕನ್ಯಾಡಿ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ಚೇತನದ ಮೂಲಕ ಅವರ ಬಾಳಿಗೆ ಬೆಳಕಾದ ಸೇವಾ ಸಂಸ್ಥೆಯಾಗಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಸೇವಾ ಸಂಸ್ಥೆಯ ನೂತನ ಕಟ್ಟಡದ ಭೂಮಿ ಪೂಜೆ ನ.14ರಂದು ಧರ್ಮಸ್ಥಳ ಗ್ರಾಮದ ಕನ್ಯಾಡಿ ಸೇವಾಭಾರತಿಯಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಕಳೆದ 20 ವರ್ಷಗಳಿಂದ ಸಾಮಾಜಿಕ ಸೇವಾ ಕ್ಷೇತ್ರ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸರ್ಕಾರೇತರ ಸೇವಾ ಸಂಸ್ಥೆ ಸೇವಾಭಾರತಿ ಕನ್ಯಾಡಿ, ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಪುನಶ್ಚೇತನದ ಮೂಲಕ ಅವರ ಬಾಳಿಗೆ ಬೆಳಕಾದ ಸೇವಾ ಸಂಸ್ಥೆಯಾಗಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಸೇವಾ ಸಂಸ್ಥೆಯ ನೂತನ ಕಟ್ಟಡದ ಭೂಮಿ ಪೂಜೆ ನ.14ರಂದು ಧರ್ಮಸ್ಥಳ ಗ್ರಾಮದ ಕನ್ಯಾಡಿ ಸೇವಾಭಾರತಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕರು ಹಾಗೂ ಪ್ರಸ್ತುತ ಸಂಸ್ಥೆಯ ಖಜಾಂಚಿಯಾಗಿರುವ ಕೆ. ವಿನಾಯಕ ರಾವ್‌ ಹೇಳಿದರು.

ಅವರು ಬೆಳ್ತಂಗಡಿಯಲ್ಲಿ ಸುದ್ದಗೋಷ್ಠಿಯಲ್ಲಿ ಮಾತನಾಡಿ, ಶಿಲಾನ್ಯಾಸವನ್ನು ಶ್ರೀರಾಮ ಕ್ಷೇತ್ರದ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ರಾ.ಸ್ವ.ಸೇ. ಸಂಘದ ದಕ್ಷಿಣ ಮಧ್ಯಕ್ಷೇತ್ರಿಯ ಕಾರ್ಯವಾಹಕ ತಿಪ್ಪೇಸ್ವಾಮಿ ನೆರವೇರಿಸಲಿದ್ದಾರೆ. ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಹರೀಶ್ ಪೂಂಜ, ಅಶೋಕ್‌ ಕುಮಾರ್ ರೈ, ಗುರುರಾಜ ಶೆಟ್ಟಿ ಗಂಟಿಹೊಳೆ, ಪ್ರತಾಪಸಿಂಹ ನಾಯಕ್, ಕಿಶೋರ್ ಕುಮಾ‌ರ್ ಪುತ್ತೂರು, ಉಜಿರೆ ಜನಾರ್ದನ ದೇವಸ್ಥಾನದ ಮೊಕ್ತೇಸರ ಶರತ್‌ಕೃಷ್ಣ ಪಡ್ಡೆಟ್ನಾಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾಮಾಜಿಕ ಸೇವಾ ಕ್ಷೇತ್ರದ ಸಾಧಕರಾದ ಬೆಳ್ಳಣ್ ಹ್ಯುಮಾನಿಟಿ ಟ್ರಸ್ಟ್ ಸಂಸ್ಥಾಪಕ ರೋಷನ್ ಬೆಳ್ಳಣ್ ಹಾಗೂ ಮಂಗಳೂರಿನ ಸೇವ್ ಲೈಫ್‌ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ಇವರನ್ನು ಗೌರವಿಸಲಾಗುವುದು ಎಂದು ತಿಳಿಸಿದರು.ಈಗಾಗಲೇ 688 ಬೆನ್ನುಹುರಿ ಅಪಘಾತಕ್ಕೊಳಗಾದವರನ್ನು ಗುರುತಿಸಿ, ಕೇಂದ್ರದ ಮುಖಾಂತರ ಸುಮಾರು 220 ಮಂದಿ ಪುನಶ್ಚೆತನವನ್ನು ಪಡೆದುಕೊಂಡಿರುತ್ತಾರೆ ಎಂದು ವಿನಾಯಕ ರಾವ್ ವಿವರಿಸಿದರು.

* ಬೈಂದೂರಿನಲ್ಲಿ 2ನೇ ಕೇಂದ್ರ:

ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ವಿಸ್ತರಿತ ಸೇವೆಗಾಗಿ ಸೇವಾಭಾರತಿಯ 20ನೇ ವರ್ಷದ ಸಂಭ್ರಮದಲ್ಲಿ ಎರಡು ಮಹತ್ವದ ಕಾರ್ಯಗಳನ್ನು ಆಯೋಜಿಸಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್‌ ಗಂಟಿಹೊಳೆ ಅವರ ನೇತೃತ್ವದಲ್ಲಿ ಒತ್ತಡಗಾಯ ನಿರ್ವಹಣೆ ಮತ್ತು ಪುನಶ್ಚೇತನ 2ನೇ ಕೇಂದ್ರವನ್ನು ಬೈಂದೂರಿನಲ್ಲಿ ಆರಂಭಿಸಲಾಗುವುದು.

ಸುದ್ದಿಗೋಷ್ಠಿಯಲ್ಲಿ ಸೇವಾ ಭಾರತಿ ಅಧ್ಯಕ್ಷೆ ಸ್ವರ್ಣ ಗೌರಿ, ಕಾರ್ಯದರ್ಶಿ ಬಾಲಕೃಷ್ಣ ನೈಮಿಷ, ದ.ಕ. ಹಾಗೂ ಕೊಡಗು ಕ್ಷೇತ್ರ ಸಂಯೋಜಕ ಕುಸುಮಾಧ‌ರ್ ಉಪಸ್ಥಿತರಿದ್ದರು.