ಸಾರಾಂಶ
ಸಿದ್ದಾಪುರ: ತಾಲೂಕು ಆಸ್ಪತ್ರೆಯಲ್ಲಿ ಹೆರಿಗೆ ನಂತರ ಹೊಸೂರಿನ ನಿವಾಸಿ ವಿನೋದಾ ನಾಯ್ಕ ಹಾಗೂ ಕೊಣೆಗದ್ದೆಯ ನಿವಾಸಿ ಜ್ಯೋತಿ ರವಿ ನಾಯ್ಕ ಹೆರಿಗೆ ನಂತರ ಮೃತಪಟ್ಟಿರುವುದು ಸಾರ್ವಜನಿಕರಿಗೆ ದುಃಖ ತಂದಿದೆ. ಇದು ಹೆರಿಗೆ ಮಾಡಿಸಿದ ವೈದ್ಯರ ನಿರ್ಲಕ್ಷ್ಯತನ ಮತ್ತು ಶಾಸಕರ ಬೇಜವಾಬ್ದಾರಿತನದಿಂದ ನಡೆದಿದೆ. ಆದ್ದರಿಂದ ಇದರ ನೇರ ಹೊಣೆಯನ್ನು ವೈದ್ಯರು ಮತ್ತು ಕ್ಷೇತ್ರದ ಶಾಸಕರೇ ಹೊರಬೇಕಾಗುತ್ತದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಂ.ಕೆ. ತಿಮ್ಮಪ್ಪ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸೂರಿನ ವಿನೋದ ನಾಯ್ಕ್ ನ. ೨೫ರಂದು ಹೆರಿಗೆಗೆ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಸೇರಿಯನ್ ಮೂಲಕ ಡಾ. ರವಿರಾಜ್ ಹೆರಿಗೆ ಮಾಡಿಸಿದ್ದಾರೆ. ನಂತರ ಅಧಿಕ ರಕ್ತಸ್ರಾವವಾದ್ದರಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನ. ೧ರಂದು ವಿನೋದಾ ಮೃತಪಟ್ಟಿದ್ದಾರೆ. ಮೊದಲ ಸಾವು ಸಂಭವಿಸಿದ ನಂತರ ಪಕ್ಷಾತೀತವಾಗಿ ತಾಲೂಕಿನ ಜನ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದರು. ಕ್ಷೇತ್ರದ ಶಾಸಕರು, ಆರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷರೂ ಆದ ಭೀಮಣ್ಣ ನಾಯ್ಕ ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೆ, ಬೇಜವಾಬ್ದಾರಿತನ ಪ್ರದರ್ಶಿಸಿರುವುದೇ ಎರಡನೆಯ ಘಟನೆಗೆ ಕಾರಣವಾಗಿದೆ ಎಂದರು. ಕೇವಲ ಏಳು ದಿನದ ಅಂತರದಲ್ಲಿ ಎರಡನೇ ಪ್ರಕರಣವಾದ ಜ್ಯೋತಿ ರವಿ ನಾಯ್ಕ ಅವರ ಸಾವು ಜನರಿಗೆ ಅತ್ಯಂತ ದುಃಖವನ್ನು ತಂದಿದ್ದು, ಅವರ ಕುಟುಂಬಸ್ಥರೇ ಶವವನ್ನು ಆಸ್ಪತ್ರೆಯ ಎದುರುಗಿಟ್ಟು ಪ್ರತಿಭಟಿಸಲು ಮುಂದಾಗಿದ್ದಾರೆ. ಪಕ್ಷಾತೀತವಾಗಿ ಎಲ್ಲ ಸಮಾಜದ ಮುಖಂಡರಿಗೆ, ರೈತ ಸಂಘದವರಿಗೆ, ಸ್ತ್ರೀಶಕ್ತಿ ಸಂಘಗಳಿಗೆ ಕರೆ ನೀಡಿ ಬೆಂಬಲ ನೀಡುವಂತೆ ಕೋರಿದ್ದಾರೆ. ಆದ್ದರಿಂದ ಪಕ್ಷಾತೀತವಾಗಿ ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಮೃತ ಹೆಣ್ಣುಮಗಳಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ನಾವೆಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆವು. ಆದರೆ ಕ್ಷೇತ್ರದ ಶಾಸಕರು ಪತ್ರಿಕಾಗೋಷ್ಠಿ ನಡೆಸಿ ಇದರ ಹಿಂದೆ ಬಿಜೆಪಿಯ ದುರುದ್ದೇಶವಿದೆ, ಶವದ ಮುಂದೆ ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ತಾಲೂಕು ಬಿಜೆಪಿ ಮಂಡಲ ತೀವ್ರವಾಗಿ ಖಂಡಿಸುತ್ತದೆ ಎಂದರು.
ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ನಿಕಟಪೂರ್ವ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ, ಪ್ರಮುಖರಾದ ಗುರುರಾಜ ಶಾನಭಾಗ, ವಿಜಯ ಹೆಗಡೆ, ನಂದನ ಬೋರಕರ, ಅಣ್ಣಪ್ಪ ನಾಯ್ಕ, ಎಸ್.ಕೆ. ಮೇಸ್ತ, ವೆಂಕಟೇಶ ಮುಂತಾದವರು ಇದ್ದರು.