ಚಾಲಕನ ದುರ್ವರ್ತನೆ: ಲಾರಿ ಹರಿದು ಕರ್ತವ್ಯನಿರತ ಪೇದೆ ಸಾವು

| Published : May 14 2025, 12:10 AM IST

ಚಾಲಕನ ದುರ್ವರ್ತನೆ: ಲಾರಿ ಹರಿದು ಕರ್ತವ್ಯನಿರತ ಪೇದೆ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಚಾಲಕನ ದುರ್ವರ್ತನೆಯಿಂದ ಡಿಎಆರ್ ಪೊಲೀಸ್‌ ಕಾನ್‌ಸ್ಟೇಬಲ್ ಮೇಲೆ ಲಾರಿ ಹರಿದು ಆತ ಮೃತಪಟ್ಟ ಘಟನೆ ದಾವಣಗೆರೆ ತಾಲೂಕಿನ ಹೆಬ್ಬಾಳ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ-48ರಲ್ಲಿರುವ ಟೋಲ್ ಬಳಿ ಮಂಗಳವಾರ ನಡೆದಿದೆ.

- ಹೆಬ್ಬಾಳ್ ಟೋಲ್ ಸಮೀಪದ ರಾ.ಹೆ.48ರಲ್ಲಿ ಘಟನೆ । ರಾಮಪ್ಪ ಮೃತ ವ್ಯಕ್ತಿ - ಲೈನ್ ಡಿಸಿಪ್ಲೀನ್‌ಗಾಗಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ದುರಂತ

- ಕಾಲು, ತಲೆ, ಹೊಟ್ಟೆಗೆ ತೀವ್ರ ಪೆಟ್ಟಾಗಿ ಚಿಕಿತ್ಸೆ ಫಲಿಸದೇ ಪೇದೆ ರಾಮಪ್ಪ ಸಾವು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಚಾಲಕನ ದುರ್ವರ್ತನೆಯಿಂದ ಡಿಎಆರ್ ಪೊಲೀಸ್‌ ಕಾನ್‌ಸ್ಟೇಬಲ್ ಮೇಲೆ ಲಾರಿ ಹರಿದು ಆತ ಮೃತಪಟ್ಟ ಘಟನೆ ದಾವಣಗೆರೆ ತಾಲೂಕಿನ ಹೆಬ್ಬಾಳ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ-48ರಲ್ಲಿರುವ ಟೋಲ್ ಬಳಿ ಮಂಗಳವಾರ ನಡೆದಿದೆ.

ದಾವಣಗೆರೆ ಡಿಎಆರ್‌ ಪೊಲೀಸ್ ಪೇದೆ ರಾಮಪ್ಪ ಪೂಜಾರಿ ಮೃತ ದುರ್ದೈವಿ. ಹೆಬ್ಬಾಳ್ ಟೋಲ್ ಬಳಿ ಲೈನ್ ಡಿಸಿಪ್ಲೀನ್‌ಗಾಗಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಪೇದೆ ರಾಮಪ್ಪ ಪೂಜಾರಿ ಹಾಗೂ ಅಧಿಕಾರಿ, ಸಿಬ್ಬಂದಿ ಹೆಬ್ಬಾಳ್ ಟೋಲ್ ಬಳಿ ಲೈನ್ ಡಿಸಿಪ್ಲೀನ್‌ಗಾಗಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಹೆದ್ದಾರಿಯಲ್ಲಿ ಅತಿ ವೇಗವಾಗಿ ವಾಹನಗಳು ಸಾಗುತ್ತಿದ್ದುದನ್ನು ತಡೆದು, ಚಾಲಕರಿಂದ ವಾಹನ ಚಾಲನಾ ಪರವಾನಗಿ, ಸೀಟ್ ಬೆಲ್ಟ್ ಸೇರಿದಂತೆ ಇತರೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದರು. ಆಗ ಲಾರಿಯೊಂದು ಬಂದಿದ್ದರಿಂದ ಲಾರಿ ನಿಲ್ಲಿಸುವಂತೆ ಪೇದೆ ರಾಮಪ್ಪ ಪೂಜಾರಿ ಕೈ ಮೂಲಕ ಸನ್ನೆ ಮಾಡಿದ್ದಾರೆ.

ಆದರೆ, ಚಾಲಕ ಲಾರಿಯನ್ನು ನಿಲ್ಲಿಸದೇ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ್ದಾನೆ. ಈ ವೇಳೆ ಲಾಡಿ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡ ರಾಮಪ್ಪ ಪೂಜಾರಿ ಕುಸಿದುಬಿದ್ದಿದ್ದಾರೆ. ಕಾಲು, ತಲೆ, ಹೊಟ್ಟೆಗೆ ತೀವ್ರ ಪೆಟ್ಟಾಗಿದ್ದರಿಂದ ತಕ್ಷಣವೇ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಪೇದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪೇದೆ ಮೇಲೆ ನುಗ್ಗಿಸಿದ ಲಾರಿಯನ್ನು ಸಂಚಾರ ಪೊಲೀಸರು ಸುಮಾರು ಅರ್ಧ ಕಿ.ಮೀ. ದೂರದವರೆಗೂ ಬೆನ್ನುಹತ್ತಿ ವಾಹನ ಸಮೇತ ಚಾಲಕನನ್ನು ಬಂಧಿಸಿದ್ದಾರೆ. ಚೆನ್ನೈ ಟು ಗೋವಾ ಎಕ್ಸ್‌ಪ್ರೆಸ್ ಎಂಬ ಫಲಕವಿದ್ದ ಕರ್ನಾಟಕ ನೋಂದಣಿಯ ಲಾರಿ ಇದಾಗಿದೆ. ಲಾರಿಯ ಮೇಲೆ ಶತ್ರುಗಳ ಆಶೀರ್ವಾದ ಎಂಬುದಾಗಿಯೂ ಬರೆಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- - -

-13ಕೆಡಿವಿಜಿ7:

ಚಾಲಕನ ದುರ್ವರ್ತನೆಯಿಂದಾಗಿ ಲಾರಿ ಹರಿದು ಗಂಭೀರ ಗಾಯಗೊಂಡ ಪೇದೆ ರಾಮಪ್ಪ ಪೂಜಾರಿ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವ ಸಂಚಾರಿ ಪೊಲೀಸರು.

- - -

-13ಕೆಡಿವಿಜಿ8:

ಪೇದೆ ಸಾವಿಗೆ ಕಾರಣವಾದ ಲಾರಿಯನ್ನು ಪೊಲೀಸರು ಜಪ್ತಿ ಮಾಡಿರುವುದು.