ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಹಲವು ವರ್ಷಗಳಿಂದ ಸ್ಥಳೀಯ ವಕೀಲರು ಹಾಗೂ ಸಾರ್ವಜನಿಕರು ವ್ಯಕ್ತಪಡಿಸಿದ್ದ ಬೇಡಿಕೆಗೆ ಸ್ಪಂದಿಸಿ, ಬನಹಟ್ಟಿಯಲ್ಲಿ 1ನೇ ಹೆಚ್ಚುವರಿ ದಿವಾಣಿ ಹಾಗೂ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸೋಮವಾರ ಅಧಿಕೃತ ಚಾಲನೆ ದೊರಕಿತು.

ಈ ಮೂಲಕ ಈ ಭಾಗದ ಜನರಿಗೆ ನ್ಯಾಯಸೇವೆ ಮತ್ತಷ್ಟು ಸುಲಭವಾಗಿ ಹಾಗೂ ವೇಗವಾಗಿ ಲಭ್ಯವಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನ್ಯಾಯಾಧೀಶೆ ಸೌಮ್ಯ ಹೂಲಿ, ಈ ಭಾಗದಲ್ಲಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ನ್ಯಾಯಾಲಯದ ಅಗತ್ಯತೆ ಬಹಳ ಹಿಂದಿನಿಂದಲೇ ಇತ್ತು. ಇದೀಗ ಸರ್ಕಾರ ಜನರ ಬೇಡಿಕೆಗೆ ಸ್ಪಂದಿಸಿ ನ್ಯಾಯಾಲಯ ಆರಂಭಿಸಿರುವುದು ಸಂತಸದ ವಿಷಯ ಎಂದರು.

ನೂತನವಾಗಿ ನೇಮಕಗೊಂಡಿರುವ ನ್ಯಾಯಾಧೀಶೆ ಮಾಫ್ರೀದ್ ಡಿಯಾಸ್ ಮಾತನಾಡಿ, ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಸಹಕಾರದೊಂದಿಗೆ ಸಾರ್ವಜನಿಕರಿಗೆ ತ್ವರಿತ ಮತ್ತು ಗುಣಮಟ್ಟದ ನ್ಯಾಯಸೇವೆ ಒದಗಿಸಲು ಬದ್ಧವಾಗಿರುವುದಾಗಿ ತಿಳಿಸಿದರು.

ಹಿರಿಯ ವಕೀಲ ಈಶ್ವರಚಂದ್ರ ಭೂತಿ ಮಾತನಾಡಿ, ಸ್ಥಳೀಯ ವಕೀಲರ ಸಂಘ ಹಲವು ವರ್ಷಗಳಿಂದ ನಡೆಸಿಕೊಂಡು ಬಂದ ನಿರಂತರ ಪ್ರಯತ್ನಕ್ಕೆ ಫಲವಾಗಿ ಹೆಚ್ಚುವರಿ ನ್ಯಾಯಾಲಯ ಮಂಜೂರಾಗಿದೆ. ಇದು ಈ ಭಾಗದ ಜನರಿಗೆ ಅತ್ಯಂತ ಉಪಯುಕ್ತವಾಗಲಿದ್ದು, ಪ್ರಕರಣಗಳ ತ್ವರಿತ ವಿಲೇವಾರಿಗೆ ಸಹಕಾರಿಯಾಗಲಿದೆ ಎಂದರು.


ಕಾರ್ಯಕ್ರಮದಲ್ಲಿ ವಕೀಲರ ಸಂಘದ ಮಾಜಿ ರಾಜ್ಯಾಧ್ಯಕ್ಷ ಎಸ್.ಎಸ್.ಮಿತ್ತಲಕೋಡ, ರವೀಂದ್ರ ಸಂಪಗಾಂವಿ, ಆರ್.ಡಿ.ಸರಿಕರ, ಎಂ.ಜಿ.ಕೆರೂರ, ಐ.ಬಿ. ಯಕ್ಸಂಬಿ, ವರ್ಧಮಾನ ಕೋರಿ, ಸುರೇಶ ಗೊಳಸಂಗಿ, ಎಸ್.ಎಂ.ಫಕೀರಪುರ, ಡಿ.ಸಿ.ಮೂರಾಬಟ್ಟೆ, ಕೆ.ಡಿ.ತುಬಚಿ, ಸುಜಾತಾ ನಿಡೋಣಿ, ಬಿ.ಎಂ.ಕಾರ್ವೇಕರ, ಬಿ.ಎನ್.ಗುರವ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.