ಮೊದಲು ಬಡವರ ಮತ್ತು ರೈತರ ಸಮಸ್ಯೆಗಳನ್ನು ಬಗೆಹರಿಸಿ, ನಂತರ ಬೇರೆ ಕೆಲಸಗಳನ್ನು ಮಾಡಿ. ಇಲ್ಲವಾದರೆ ಮುಂದೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿ ಸಮೂಹಕ್ಕೆ ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯಲ್ಲಿ ಬಡವರು ಹಾಗೂ ರೈತರ ಮೂಲಭೂತ ಸಮಸ್ಯೆಗಳು ವರ್ಷಗಳಿಂದ ಬಾಕಿ ಉಳಿಯುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ಶಾಸಕ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಸೋಮವಾರ ಹಾಸನ ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ತಹಸೀಲ್ದಾರ್ ಗೀತಾ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೋರವಂಗಲ ಕಾವಲು ಗ್ರಾಮದಲ್ಲಿ ಸುಮಾರು ೨೦೦ ರೈತರ ಭೂ ಸಾಗುವಳಿ ಸಮಸ್ಯೆ ೪೦ ವರ್ಷಗಳಿಂದ ಬಾಕಿಯಿದೆ. ಇನ್ನೂ ರೈತರಿಗೆ ಹಕ್ಕುಪತ್ರಗಳ ನೀಡಲು ಅರಣ್ಯ ಇಲಾಖೆಯ ಅನುಮತಿ ಬೇಕು ಎಂದು ಹೇಳುತ್ತೀರಾ? ಇಷ್ಟು ವರ್ಷಗಳಿಂದ ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಆಗಾಗ ಸಭೆ ನಡೆಸುವುದರಿಂದ ಪ್ರಯೋಜನವಿಲ್ಲ. ನೆಲಮಟ್ಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಮೊದಲು ನಿಮ್ಮ ಇಲಾಖೆಯ ಕೆಲಸಗಳನ್ನು ಸರಿಪಡಿಸಿ, ನಂತರ ಬೇರೆ ಇಲಾಖೆಗಳ ಕಡೆ ಗಮನ ಹರಿಸಿ ಎಂದು ಕಟುವಾಗಿ ಹೇಳಿದರು.ಸಭೆಯ ಮಧ್ಯೆ ರೈತನೊಬ್ಬ ನೇರವಾಗಿ ಬಂದು ಮನವಿ ಸಲ್ಲಿಸಿ, ತಾಲೂಕು ಕಚೇರಿಯಲ್ಲಿ ಬಡವರ ಯಾವುದೇ ಕೆಲಸವೂ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಭೆಗೆ ತೀವ್ರತೆಯನ್ನು ತಂದಿತು. ಎಷ್ಟು ಬಾರಿ ಬಂದರೂ ಕೆಲಸ ಆಗುವುದಿಲ್ಲ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಂಡು ಜನರನ್ನು ಅಲೆದಾಡಿಸುತ್ತಿದ್ದಾರೆ ಎಂಬ ರೈತನ ಮಾತುಗಳು ವ್ಯವಸ್ಥೆಯ ಮೇಲೆ ಸಾರ್ವಜನಿಕ ಅಸಮಾಧಾನವನ್ನು ಸ್ಪಷ್ಟಪಡಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ರೈತರ ಜೀವನ ಸುಲಭವಲ್ಲ. ಮಕ್ಕಳ ಮದುವೆ ಮಾಡಲು ಹಣವಿಲ್ಲದ ಪರಿಸ್ಥಿತಿ ಇದೆ. ಆದರೆ ಅಧಿಕಾರಿಗಳು ಸಂಬಳ ಪಡೆದು ಜನರನ್ನು ಸುತ್ತಿಸುತ್ತಿದ್ದಾರೆ. ಇದು ತಕ್ಷಣ ಬದಲಾಗಬೇಕು ಎಂದು ಗರಂ ಆಗಿ ಹೇಳಿದರು.ಜಿಲ್ಲೆಯಲ್ಲಿ ಬಾಕಿ ಇರುವ ಹಕ್ಕುಪತ್ರ ಅರ್ಜಿಗಳ ಪ್ರಮಾಣದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಹಾಸನದಲ್ಲಿ ಮಾತ್ರವೇ ಸುಮಾರು ೩೨೦೦ ಅರ್ಜಿಗಳು ಬಾಕಿ ಇವೆ. ದಂಡಿಗನ ಹೋಬಳಿಯಲ್ಲಿ ೧೨೦೦ ಅರ್ಜಿಗಳು ಬಾಕಿ ಉಳಿದಿವೆ. ಉದ್ದೂರು, ಮುದ್ದನಹಳ್ಳಿ ಸೇರಿದಂತೆ ಅನೇಕ ಕಡೆ ಜನ ೪೦ ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದರೂ ದಾಖಲೆ ಸಿಗುತ್ತಿಲ್ಲ. ಇದು ಆಡಳಿತದ ವಿಫಲತೆಯಲ್ಲವೇ ಎಂದು ಪ್ರಶ್ನಿಸಿದರು.
ರೈತರ ಜೀವ ತಿನ್ನಲು ಈ ಅಧಿಕಾರಿಗಳು ಇದ್ದಾರೆ ಹೊರತು ಇವರಿಗೆ ರೈತರ ಕಷ್ಟ- ಸುಖ ಗೊತ್ತಿಲ್ಲ ಎಂದು ಗುಡುಗಿ, ಸರ್ಕಾರ ಸಂಬಳ ಕೊಡುತ್ತದೆ. ಅಚ್ಚುಕಟ್ಟಾಗಿ ಸಂಬಳ ಪಡೆದು ರೈತರನ್ನು ತಿರುಗಿಸುತ್ತಾರೆ. ನಾನು ಜಿಲ್ಲಾಧಿಕಾರಿಗಳಿಗೆ, ಉಪವಿಭಾಗಧಿಕಾರಿಗಳು ಹಾಗೂ ತಹಸೀಲ್ದಾರ್ ಅವರಿಗೆ ಹೇಳುವುದೇನೆಂದರೆ ಮೊದಲು ಬಡವರ ಕೆಲಸ ಮಾಡಿಕೊಡಿ ಎಂದು ಖಡಕ್ ಎಚ್ಚರಿಕೆ ನೀಡಿದರು.ಹಾಸನ- ಬೇಲೂರು- ಚಿಕ್ಕಮಗಳೂರು ರೈಲು ಮಾರ್ಗ ಯೋಜನೆಗೂ ಸಂಬಂಧಿಸಿ ಮಾತನಾಡಿದ ರೇವಣ್ಣ ಅವರು, ೨೦೧೮ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ ಈ ಯೋಜನೆಗೆ ಅನುಮೋದನೆ ದೊರೆತಿತ್ತು. ಆದರೆ ೫೬೧ ಎಕರೆ ಭೂಮಿಯ ಸರ್ವೇ ಕಾರ್ಯ ೮ ವರ್ಷಗಳಾದರೂ ಪೂರ್ಣಗೊಂಡಿಲ್ಲ ಎಂದು ಜಿಲ್ಲಾಡಳಿತದ ಕೆಲಸದ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸಿದರು.
ಈ ಯೋಜನೆಗಾಗಿ ನಾವು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಕೇಂದ್ರ ನಾಯಕರನ್ನು ಭೇಟಿ ಮಾಡಿದ್ದೇವೆ. ಆದರೆ ನೆಲಮಟ್ಟದಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ ಎಂದು ಹೇಳಿದರು.ಬಡವರ ಕೆಲಸ ಬಿಟ್ಟು ಭೂ ಮಾಫಿಯಾ, ಕ್ರಷರ್ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಎಲ್ಲೆಂದರಲ್ಲಿ ಕಲ್ಲು ಒಡೆಯುವಿಕೆ ನಡೆಯುತ್ತಿದೆ. ಇದನ್ನು ನಿಯಂತ್ರಿಸುವ ಜವಾಬ್ದಾರಿ ಯಾರದ್ದು ಎಂದು ಪ್ರಶ್ನಿಸಿದರು.
ಕಾನೂನು ಬಿಟ್ಟು ಕೆಲಸ ಮಾಡಿದರೆ ಯಾರನ್ನೂ ಬಿಡಲ್ಲ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಜನರ ವಿಶ್ವಾಸ ಕಾಪಾಡಬೇಕು ಎಂದು ಸಲಹೆ ನೀಡಿದರು.ಮೊದಲು ಬಡವರ ಮತ್ತು ರೈತರ ಸಮಸ್ಯೆಗಳನ್ನು ಬಗೆಹರಿಸಿ, ನಂತರ ಬೇರೆ ಕೆಲಸಗಳನ್ನು ಮಾಡಿ. ಇಲ್ಲವಾದರೆ ಮುಂದೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿ ಸಮೂಹಕ್ಕೆ ಎಚ್ಚರಿಸಿದರು.
ಬೇಸಿಗೆ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆಯನ್ನೂ ಪ್ರಸ್ತಾಪಿಸಿದ ಅವರು, ಈಗಾಗಲೇ ಬಿಸಿಲು ತೀವ್ರವಾಗಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ತಕ್ಷಣ ಮಾಡಬೇಕು. ಇದು ಅಧಿಕಾರಿಗಳ ಮೊದಲ ಆದ್ಯತೆ ಆಗಬೇಕು ಎಂದು ಸೂಚಿಸಿದರು.ಸಭೆಯ ಅಂತ್ಯದಲ್ಲಿ ಅಧಿಕಾರಿಗಳಿಗೆ ೭ ರಿಂದ ೧೫ ದಿನಗಳ ಗಡುವು ನೀಡಿ, ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚಿಸಿದರು.