ಹಾನಗಲ್ಲ: ಫೆ. ೧೪ರಂದು ಹಾವೇರಿ ಜಿಲ್ಲೆಯ ಇತಿಹಾಸದಲ್ಲಿಯೇ ಒಂದು ಐತಿಹಾಸಿಕ ಸಮಾವೇಶಕ್ಕೆ ಸಾಕ್ಷಿಯಾಗುತ್ತಿದ್ದು, ರಾಜ್ಯ ಸರ್ಕಾರ ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ ಪೂರೈಸುತ್ತಿರುವ ಸಂದರ್ಭದಲ್ಲಿ ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಫಲಾನುಭವಿಗಳ ಸಂಖ್ಯೆ ಹಾನಗಲ್ಲ ತಾಲೂಕಿನಲ್ಲಿ ಹೆಚ್ಚು ಇರುವುದರಿಂದ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಸಮಾವೇಶದ ಯಶಸ್ಸಿಗೆ ಮುಂದಾಗಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಫೆ. ೧೪ರಂದು ಹಾವೇರಿಯಲ್ಲಿ ನಡೆಯಲಿರುವ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶದ ಹಿನ್ನೆಲೆಯಲ್ಲಿ ನಡೆದ ತಾಲೂಕಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಳೆದ ವರ್ಷ ಹೊಸಪೇಟೆಯಲ್ಲಿ ಒಂದು ಲಕ್ಷ ೧೧ ಸಾವಿರಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿತ್ತು. ಈ ಬಾರಿ ೨ನೇ ಹಂತದಲ್ಲಿ ಹಾವೇರಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಮತ್ತೆ ಒಂದು ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ದಾಖಲೆ ಇಲ್ಲದೆ ಕಳೆದ ೩೦-೪೦ ವರ್ಷಗಳಿಂದ ಸರ್ಕಾರಿ ಮತ್ತು ಖಾಸಗಿ ಜಮೀನುಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಶಾಶ್ವತವಾಗಿ ದಾಖಲೆ ಒದಗಿಸಲಾಗುತ್ತಿದೆ. ಕನಿಷ್ಠ ೮ರಿಂದ ೧೦ ಲಕ್ಷ ರು. ಬೆಲೆಬಾಳುವ ಆಸ್ತಿ ನೋಂದಣಿ ಮಾಡಿ, ಇಸ್ವತ್ತು ಹಾಗೂ ಹಕ್ಕುಪತ್ರದೊಂದಿಗೆ ಶಾಶ್ವತ ದಾಖಲೆ ಒದಗಿಸಲಾಗುತ್ತಿದೆ. ಸಾವಿರಾರು ಕುಟುಂಬಗಳನ್ನು ಸ್ವತಂತ್ರಗೊಳಿಸುವ ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ. ಹಾವೇರಿಯ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳನ್ನು ನಮ್ಮ ತಾಲೂಕಿನಿಂದ ಕರೆದೊಯ್ಯಬೇಕು. ಯಾರಿಗೂ ತೊಂದರೆ ಆಗದಂತೆ, ಗೊಂದಲಗಳಿಗೆ ಅವಕಾಶ ನೀಡದಂತೆ ಗಮನ ಹರಿಸಬೇಕು ಎಂದು ಸೂಚಿಸಿದರು. ತಹಸೀಲ್ದಾರ್ ರೇಣುಕಾ ಎಸ್. ಮಾತನಾಡಿ, ಫೆ. ೧೪ರಂದು ಬೆಳಗ್ಗೆ ೬ ಗಂಟೆಗೆ ಸರಿಯಾಗಿ ಬಸ್ಸುಗಳು ನಿಗದಿ ಪಡಿಸಿದ ಸ್ಥಳಕ್ಕೆ ಆಗಮಿಸಲಿವೆ. ಪ್ರತಿಯೊಂದು ಬಸ್ಸುಗಳಿಗೆ ರೂಟ್ ಆಫೀಸರ್ ನೇಮಕಗೊಳಿಸಿ ಸಮರ್ಪಕ ಮಾಹಿತಿ ಒದಗಿಸಬೇಕು. ನೋಡಲ್ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಪೂರ್ವಭಾವಿ ಸಭೆ ನಡೆಸಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಡಂಗುರ ಸಾರಿಸಿ, ಮನೆ ಮನೆಗೆ ಸಮಾವೇಶದ ಕುರಿತು ಪ್ರಚಾರ ಕೈಗೊಳ್ಳುವಂತೆ ಸೂಚಿಸಿ, ಮುಂದಿನ ಐದಾರು ದಿನಗಳ ಕಾಲ ಸಮಾವೇಶದ ಯಶಸ್ಸಿಗೆ ಶ್ರಮಿಸಬೇಕು ಎಂದರು. ತಾಪಂ ಇಒ ಡಾ. ಗಿರೀಶ ರೆಡ್ಡೇರ, ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ, ಟಿಎಚ್‌ಒ ಡಾ.ಲಿಂಗರಾಜ್ ಕೆ.ಜಿ., ಸಿಡಿಪಿಒ ರಾಮೂ ಬೈಲಸೀಮೆ ಇದ್ದರು.