ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ದಶಕಗಳ ಹಿಂದೆ ಸಂಗಟಿ ಸಾರಿನೊಂದಿಗೆ ಸಮಾಪ್ತಿಯಾಗುತ್ತಿದ್ದ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀಅವಧೂತ ಶುಖಮುನಿ ತಾತನ ಜಾತ್ರೆಯು ಇತ್ತೀಚಿಗೆ ವರ್ಷದಿಂದ ವರ್ಷಕ್ಕೆ ದಾಸೋಹದಲ್ಲಿ ವೈಭವ ಕಾಣುತ್ತಿದ್ದು, ಈ ವರ್ಷ ಸುಮಾರು 10 ಕ್ವಿಂಟಲ್ ರವೆ ಉಂಡಿ, ಕರದಂಟು, 5 ಕ್ವಿಂಟಲ್ ಮಿರ್ಚಿ ಭಜ್ಜಿ ಮಾಡಿಸಲು ಯುವಕರು ಮುಂದಾಗಿದ್ದಾರೆ.

ಹೌದು. ತಾಲೂಕಿನ ದೋಟಿಹಾಳ ಗ್ರಾಮದ ಯುವಕರ ಗುಂಪೊಂದು ಶುಖಮುನಿ ತಾತನ ಜಾತ್ರೆಯಲ್ಲಿ ದಾಸೋಹ ವೈಭವ ಹೆಚ್ಚಿಸಬೇಕು ಎಂಬ ದೃಷ್ಟಿಕೋನ ಇಟ್ಟುಕೊಂಡು ಎಂಟು ದಿನಗಳ ಕಾಲ ನಡೆಯುವ ಅನ್ನದಾಸೋಹ ಕಾರ್ಯಕ್ರಮದಲ್ಲಿ ರವೆ ಉಂಡಿ, ಕರದಂಟು ಇದರ ಜತೆಗೆ ಮಿರ್ಚಿ ಭಜ್ಜಿ ನೀಡಬೇಕು ಎಂಬ ನಿರ್ಣಯ ಕೈಗೊಂಡು ಎರಡು ದಿನಗಳಿಂದ ಕಾರ್ಯ ಪ್ರವೃತ್ತರಾಗಿದ್ದಾರೆ.

ಕಳೆದ ವರ್ಷ ರಾಘವೇಂದ್ರ ಕುಂಬಾರ ಎಂಬುವವರು ಮಿರ್ಚಿ ಭಜ್ಜಿ ಮಾಡಿಸುವ ಮೂಲಕ ವಿಶೇಷ ಸೇವೆ ಗೈದಿದ್ದರು. ಅದರಂತೆ ಶಾಲಾ ವಿದ್ಯಾರ್ಥಿಗಳು ಹೋಳಿಗೆ ಮಾಡಿಸುವ ಮೂಲಕ ವಿಶೇಷ ದಾಸೋಹ ವ್ಯವಸ್ಥೆ ಮಾಡಿದ್ದರು. ಈ ವರ್ಷ ಮತ್ತಷ್ಟು ಮೆರುಗು ತರಬೇಕೆಂಬ ಉದ್ದೇಶದಿಂದ ರವೆಉಂಡಿ, ಕರದಂಟು ಹಾಗೂ ಮಿರ್ಚಿ ಭಜ್ಜಿ ಮಾಡಿಸಲು ಮುಂದಾಗಿರುವ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೇವೆ ನಿರಂತರ: ಜಾತ್ರೆಯು ಎಂಟು ದಿನಗಳ ಕಾಲ ನಡೆಯುತ್ತಿದ್ದು, ಈ ಹತ್ತು ದಿನಗಳ ದಾಸೋಹ ವ್ಯವಸ್ತೆಯಲ್ಲಿ ರವೆ ಉಂಡಿ, ಕರದಂಟು ಹಾಗೂ ಮಿರ್ಚಿ ಇರಲಿದ್ದು, ಇದಕ್ಕೆ ಬೇಕಾಗುವ ರವೆ. ಸಕ್ಕರೆ, ಎಣ್ಣೆ, ತುಪ್ಪ, ದ್ರಾಕ್ಷಿ, ಗಸಗಸೆ, ಗೋಡಂಬಿ, ಗೇರುಬೀಜ ಸೇರಿದಂತೆ ಬೇಕಾಗುವ ಸಾಮಗ್ರಿಗಳು ಸಿದ್ಧವಾಗಿದ್ದು, ಈಗಾಗಲೆ ಕೆಲಸ ಕಾರ್ಯಗಳು ಭರದಿಂದ ಸಾಗಿದ್ದು ಸುಮಾರು ಎಂಟು ಜನರು ಈ ಸೇವೆಯಲ್ಲಿ ಭಾಗಿಯಾಗಿದ್ದಾರೆ.


ಅವಧೂತ ಗೆಳೆಯರ ಬಳಗದಿಂದ ರೆಡಿಯಾಗುತ್ತಿರುವ ರವೆ ಉಂಡಿ, ಕರದಂಟು ಹಾಗೂ ಮಿರ್ಚಿ ಸೇವೆಯಲ್ಲಿ ರಾಘವೇಂದ್ರ ಕುಂಬಾರ, ಈರಪ್ಪ ಉಳ್ಳಿ, ಶರಣಗೌಡ ಪೋಲಿಸಪಾಟೀಲ, ಮೈಬುಸಾಬ್‌, ಪರಶುರಾಮ, ಹನಮಂತ, ಪ್ರಕಾಶ ಅಂಗಡಿ, ಅಶೋಕ ಮೆದಿಕೇರಿ ಸೇರಿದಂತೆ ಅನೇಕರು ಈ ಮಹತ್ಕಾರ್ಯದಲ್ಲಿ ಭಾಗಿಯಾಗಿದ್ದಾರೆ.

ಕೊಪ್ಪಳ ಗವಿಮಠ ಜಾತ್ರೆ ಮಾದರಿಯಲ್ಲಿ ಅಚ್ಚುಕಟ್ಟಾದ ಅನ್ನದಾಸೋಹ ನಡೆಸಬೇಕು ಎಂದು ನಮ್ಮ ತಂಡದಲ್ಲಿ ನಿರ್ಣಯಿಸಿರುವ ಹಿನ್ನೆಲೆಯಲ್ಲಿ ಈ ವರ್ಷ ರವೆ ಉಂಡಿ, ಕರದಂಟು ಹಾಗೂ ಮಿರ್ಚಿ ಸೇವೆ ಮಾಡುತ್ತಿದ್ದೇವೆ. ಈ ಸೇವೆಯೂ ಜಾತ್ರೆ ಸಮಾಪ್ತಿಯವರೆಗೂ ಇರಲಿದೆ ಎಂದು ಅವಧೂತ ಗೆಳೆಯರ ಬಳಗದ ಶರಣಗೌಡ ಪೋಲಿಸಪಾಟೀಲ ತಿಳಿಸಿದ್ದಾರೆ.

ದೋಟಿಹಾಳ ಶುಖಮುನಿ ತಾತನ ಜಾತ್ರೆಯಲ್ಲಿ ಈ ವರ್ಷ ವಿಶಿಷ್ಟವಾಗಿ ಅವಧೂತ ಗೆಳೆಯರ ಬಳಗದ ಯುವಕರು 10 ಕ್ವಿಂಟಲ್ ರವೆ ಉಂಡಿ, ಕರದಂಟು ಜತೆಗೆ 5ಕ್ವಿಂಟಲ್ ಮಿರ್ಚಿ ನೀಡುತ್ತಿರುವದು ಶ್ಲಾಘನೀಯ ಕಾರ್ಯವಾಗಿದೆ ಎಂದು ದಾಸೋಹ ಉಸ್ತುವಾರಿ ಬಾಲಾಜಿ ಭೋವಿ ತಿಳಿಸಿದ್ದಾರೆ.