ಶಶಿಕುಮಾರ ಪತಂಗೆಅಳ್ನಾವರ:

"ಯಪ್ಪಾ ಮಳಿ ಭಾಳ ಬರಾತೈತಿ, ಸ್ಟ್ಯಾಂಡಿನ್ಯಾಗ ಬಸ್ ನಿಂದ್ರಸೋ ಡ್ರೈವರ್‌ ಅಣ್ಣಾ... "

ಅಳ್ನಾವರ ಬಸ್ ನಿಲ್ದಾಣಕ್ಕೆ ಬರುವ ಬಸ್‌ಗಳ ಚಾಲಕ-ನಿರ್ವಾಹಕರಲ್ಲಿ ಪ್ರಯಾಣಿಕರು ಬೇಡಿಕೊಳ್ಳುವ ಸ್ಥಿತಿ ಇದು.

ಪಟ್ಟಣ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ನಿತ್ಯ ೧೪೭ ಸೆಡ್ಯೂಲ್‌ಗಳಲ್ಲಿ ಬಸ್‌ಗಳು ಪ್ರತಿ ಗ್ರಾಮ ಮತ್ತು ಅನ್ಯ ರಾಜ್ಯಗಳಿಗೂ ಸಂಚರಿಸುತ್ತವೆ. ಆದರೆ, ನಿಲ್ದಾಣಕ್ಕೆ ಬರುವ ಬಸ್‌ಗಳು ನಿಗದಿತ ಸ್ಥಳದ ಬದಲು ನಿಲ್ದಾಣದ ಮೂಲೆ, ಶೌಚಾಲಯಕ್ಕೆ ಹೋಗುವ ದಾರಿಗೆ ಅಡ್ಡಲಾಗಿ ನಿಲ್ಲುತ್ತಿವೆ. ಹೀಗಾಗಿ ಪ್ರಯಾಣಿಕರು ಆವರಣದ ತುಂಬಾ ಸಂಚರಿಸಿ ತಮ್ಮೂರಿನ ಬಸ್‌ ಹುಡುಕಿ ಬಸ್ ಏರಬೇಕಾಗುವ ಪರಿಸ್ಥಿತಿ ಎದುರಾಗಿದೆ.

ಮಳೆ ತಂದ ಸಂಕಷ್ಟ:


ನಿಗದಿತ ಸ್ಥಳದಲ್ಲಿ ಬಸ್‌ ನಿಲುಗಡೆ ಮಾಡದ ಪರಿಣಾಮ ವಿದ್ಯಾರ್ಥಿಗಳು ಮಳೆಯಲ್ಲಿಯೇ ನೆನೆದುಕೊಂಡು ತಮ್ಮೂರಿನ ಬಸ್‌ ಹುಡುಕುತ್ತಿದ್ದಾರೆ. ಇದರಿಂದ ಪಠ್ಯ ಸಾಮಗ್ರಿ ಸೇರಿದಂತೆ ತಾವು ಸಹ ಮಳೆಯಲ್ಲಿಯೇ ನೆನೆದುಕೊಳ್ಳುತ್ತಿದ್ದಾರೆ. ಮಕ್ಕಳನ್ನು ಕಂಕುಳದಲ್ಲಿ ಇಟ್ಟುಕೊಂಡು ಮಹಿಳೆಯರು, ವೃದ್ಧರು ಬಸ್‌ ಎಡತಾಕುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ನಿಗದಿತ ಸ್ಥಳದಲ್ಲಿ ಬಸ್‌ ನಿಲ್ಲಿಸಲು ಚಾಲಕರು ಹಾಗೂ ನಿರ್ವಾಹಕರಿಗೆ ಸೂಚಿಸಿಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ನಿಲ್ದಾಣಕ್ಕೆ ಬರುತ್ತಿಲ್ಲ ಬಸ್‌:

ಪಟ್ಟಣ ಸೇರಿದಂತೆ ತಾಲೂಕಿನ ನೂರಾರು ಜನರು ದುಡಿಮೆ ಅರಸಿ ಹಾಗೂ ನಿತ್ಯದ ಕೆಲಸಕ್ಕೆ ಗೋವಾಕ್ಕೆ ತೆರಳುತ್ತಾರೆ. ಸಂಜೆ ಮರಳಿ ಬರುವಾಗ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಪಟ್ಟಣದ ಬಸ್‌ ನಿಲ್ದಾಣಕ್ಕೆ ಬರುತ್ತಿಲ್ಲ. ಅಳ್ನಾವರ ಕ್ರಾಸ್‌ ಬಳಿಯೇ ಬಿಟ್ಟು ಧಾರವಾಡಕ್ಕೆ ಸಂಚರಿಸುತ್ತಿವೆ. ಬಸ್‌ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸಿ ಹೋಗಬೇಕೆಂಬ ನಿಯಮವಿದ್ದರೂ ಹೀಗೇಕೆ ಎಂದು ಪ್ರಶ್ನಿಸಿರುವ ಪ್ರಯಾಣಿಕರು, ನಿಲ್ದಾಣದ ನಿಯಂತ್ರಣಾಧಿಕಾರಿಗಳು ಏಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಖಾಸಗಿ ವಾಹನಗಳ ದರ್ಬಾರ್‌:

ಬಸ್‌ ನಿಲ್ದಾಣದ 100 ಮೀಟರ್‌ ದೂರದಲ್ಲಿ ಖಾಸಗಿ ವಾಹನ ನಿಲ್ಲಿಸಬೇಕೆಂಬ ನಿಯಮವಿದ್ದರೂ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಗಳ ಬಸ್‌ಗಳಿಗಿಂತ ಅವುಗಳ ಸಂಖ್ಯೆಯೇ ಹೆಚ್ಚಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದರಿಂದ ಅವರು ಬಸ್‌ಗಾಗಿ ಕಾಯ್ದರೆ, ಪುರುಷರು ಬಸ್‌ ದರಕ್ಕಿಂತ ಕಡಿಮೆ ದರ ಖಾಸಗಿ ವಾಹನಕ್ಕೆ ಇದ್ದು ಅವುಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತಿದ್ದರೂ ನಿಯಂತ್ರಣಾಧಿಕಾರಿ ಮೌನ ವಹಿಸಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ.

ತಿಂಗಳೊಳಗೆ ದುರ್ನಾತ:

ನಿಲ್ದಾಣದಲ್ಲಿ ನೂತನ ಶೌಚಾಲಯ ನಿರ್ಮಿಸಿ ಒಂದು ತಿಂಗಳು ಸಹ ಪೂರ್ಣಗೊಂಡಿಲ್ಲ. ನಿರ್ವಹಣೆ ಕೊರತೆಯಿಂದ ದುರ್ನಾತ ಬಿರುತ್ತಿದ್ದು ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಿಲ್ದಾಣದ ನಿಗದಿತ ಸ್ಥಳದಲ್ಲಿ ಬಸ್‌ ನಿಲ್ಲಿಸಲು ನಿಯಂತ್ರಣಾಧಿಕಾರಿಗಳು ಸೂಚಿಸಿಬೇಕು. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಖಾಸಗಿ ವಾಹನಗಳನ್ನು ನಿಲ್ದಾಣದಿಂದ ದೂರ ನಿಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ಪ್ರಯಾಣಿಕರೊಂದಿಗೆ ಹೋರಾಟ ನಡೆಸಲಾಗುವುದು.

ಪ್ರಶಾಂತ ಪವಾರ, ಸಾಮಾಜಿಕ ಹೋರಾಟಗಾರ