ಹಾಲು ಉತ್ಪಾದನೆಯಲ್ಲಿ ಕರ್ನಾಟಕದ ಹೈನುಗಾರಿಕೆ ಉತ್ತಮವಾಗಿ ಸಾಗುತ್ತಿದೆ. ಹೈನುಗಾರಿಕಾ ವಲಯ ಗ್ರಾಮೀಣ ಪ್ರದೇಶಗಳ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿದೆ.
ನರಗುಂದ: ಧಾರವಾಡ ಹಾಲು ಒಕ್ಕೂಟದಿಂದ 120 ತರಹದ ಹಾಲು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ವಿಶ್ವದಲ್ಲಿಯೇ ಭಾರತವು ಹೈನುಗಾರಿಕೆ ಕ್ಷೇತ್ರದಲ್ಲಿ ಗಮನಾರ್ಹವಾದ ಸಾಧನೆ ಮಾಡಿದೆ. ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ತಿಳಿಸಿದರು.
ತಾಲೂಕಿನ ಖಾನಾಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ನಡೆದ ಪಶುಗಳಿಗೆ ಹಾಗೂ ಸದಸ್ಯರಿಗೆ ಉಚಿತ ಆರೋಗ್ಯ ಶಿಬಿರ, ವಿವಿಧ ತಳಿಯ ರಾಸುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಾಲು ಉತ್ಪಾದನೆಯಲ್ಲಿ ಕರ್ನಾಟಕದ ಹೈನುಗಾರಿಕೆ ಉತ್ತಮವಾಗಿ ಸಾಗುತ್ತಿದೆ. ಹೈನುಗಾರಿಕಾ ವಲಯ ಗ್ರಾಮೀಣ ಪ್ರದೇಶಗಳ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿದೆ. ಆದ್ದರಿಂದ ದೇಶದ ಆರ್ಥಿಕತೆಗೆ ಪೂರಕವಾಗಿ ಒತ್ತು ನೀಡಲು ಗ್ರಾಮೀಣ ಪ್ರದೇಶದ ಹೈನುಗಾರಿಕೆ ಮತ್ತು ಗ್ರಾಮೀಣ ಗುಡಿ ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡಬೇಕಾಗಿದೆ. ಹಾಲು ಉತ್ಪಾದಕರು ಹೆಚ್ಚಿನ ಮಟ್ಟದಲ್ಲಿ ಆರ್ಥಿಕವಾಗಿ ಸದೃಢವಾಗಬೇಕಾದರೆ, ಹಾಲು ಉತ್ಪಾದನೆ ಹೆಚ್ಚಾಗಬೇಕು ಅದರಿಂದ ಸಂಘವು ಹೆಚ್ಚಿನ ಲಾಭ ಹೊಂದಲು ಸಾಧ್ಯವಾಗುತ್ತದೆ. ಈ ಆಯಾಮಗಳಲ್ಲಿ ಹೊಸ ಯೋಜನೆಗಳನ್ನು ಕೈಗೊಳ್ಳಬೇಕಾಗಿದೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಎಚ್. ತಿಮ್ಮನಗೌಡ್ರ ಮಾತನಾಡಿ, ಖಾನಾಪುರ ಗ್ರಾಮದ ಹಾಲಿನ ಸಂಘವು 41 ವರ್ಷ ಪೂರ್ಣಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶದಲ್ಲಿನ ಪಶುಪಾಲನೆಯಿಂದ ಆರಂಭವಾಗುವ ಹೈನೋದ್ಯಮದ ಕಾರ್ಯವ್ಯಾಪ್ತಿಯು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅಗತ್ಯವಿರುವ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವವರೆಗೆ ವಿಸ್ತಾರಗೊಂಡಿದೆ ಎಂದರು.ಧಾರವಾಡ ಹಾಲು ಒಕ್ಕೂಟ ಗದಗ ಉಪವಿಭಾಗದ ಮುಖ್ಯಸ್ಥ ಡಾ. ಪ್ರಸನ್ ಪಟ್ಟೇದ, ಜಿಲ್ಲಾ ಸಹಕಾರ ಯುನಿಯನ್ ಉಪಾಧ್ಯಕ್ಷ ವೈ.ಎಫ್. ಪಾಟೀಲ, ಪರವೀನ್‌ಬೇಗಂ ನದಾಫ್ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹನುಮಂತಗೌಡ ಹೊಸಮನಿ ಮಾತನಾಡಿದರು.
ಜಿಲ್ಲಾ ಸಹಕಾರ ಯುನಿಯನ್ ಉಪಾಧ್ಯಕ್ಷ ವೈ.ಎಫ್. ಪಾಟೀಲ, ಶಂಕರಗೌಡ ಎನ್. ಕಗದಾಳ, ಅನಿತಾ ವೀರನಗೌಡ್ರ, ಶಿವಾನಂದ ಫಸಲಾದಿ, ಶೋಭಾ ನಾಯಕ, ಸೀಮಾ ಆಲೂರ, ಗೀತಾ ಹುಳ್ಯಾಳ, ರತ್ನಾ ತಳವಾರ, ಮಂಜುಳಾ ನಿಂಬಣ್ಣವರ ಸೇರಿದಂತೆ ಇತರರು ಇದ್ದರು. ಚಂದ್ರಶೇಖರ ಎಸ್. ಕರಿಯಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಎಸ್. ನದಾಫ ಸ್ವಾಗತಿಸಿದರು, ಡಿ.ಐ. ನದಾಫ ನಿರೂಪಿಸಿದರು. ರಶಿದಾಬಾನು ಯಲಿಗಾರ ವಂದಿಸಿದರು.