ಕನ್ನಡಪ್ರಭ ವಾರ್ತೆ ತರೀಕೆರೆ

ಒಲಂಪಿಯಾಡ್ ಪರೀಕ್ಷೆ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ತಾಲೂಕು ಯೋಜನಾಧಿಕಾರಿ ಸದಾಶಿವ ಗೌಡ ಹೇಳಿದರು.

ಸಮೀಪದ ಹುಣಸಗಟ್ಟ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ವತಿಯಿಂದ ಏರ್ಪಾಡಾಗಿದ್ದ ಒಲಂಪಿಯಾಡ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಲಂಪಿಯಾಡ್ ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಮಸ್ಯೆ ಪರಿಹರಿಸುವ ಕೌಶಲ್ಯ, ತಾರ್ಕಿಕ ಚಿಂತನೆ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತವೆ, ಇಂತಹ ಪರೀಕ್ಷೆಗಳು ಭವಿಷ್ಯದಲ್ಲಿ ಜೆಇಇ, ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭದ್ರ ಅಡಿಪಾಯವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಒಲಂಪಿಯಾಡ್ ಪರೀಕ್ಷೆಗಳಲ್ಲಿ ಭಾಗವಹಿಸಿ ತನ್ನ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ತಾಲೂಕು ಸಿ.ಎಸ್.ಸಿ. ನೋಡಲ್ ಅಧಿಕಾರಿ ಪಂಕಜಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ, ಗಣಿತೀಯ ಹಾಗೂ ತಾರ್ಕಿಕ ಕೌಶಲ್ಯಗಳನ್ನು ವೃದ್ಧಿಸುವ ಉದ್ದೇಶದಿಂದ ಒಲಂಪಿಯಾಡ್ ಪರೀಕ್ಷೆಗಳನ್ನು ಆಯೋಜಿಸಲಾಗುತ್ತಿದೆ, ಮೂರನೇ ತರಗತಿಯಿಂದ ಹನ್ನೆರಡನೇ ತರಗತಿವರೆಗಿನ ವಿದ್ಯಾರ್ಥಿಗಳು ಗಣಿತ, ವಿಜ್ಞಾನ, ಇಂಗ್ಲಿಷ್, ಕಂಪ್ಯೂಟರ್ ಹಾಗೂ ಸಾಮಾನ್ಯ ಜ್ಞಾನ ವಿಷಯಗಳಲ್ಲಿ ಸ್ಪರ್ಧಿಸಬಹುದಾಗಿದೆ, ಈ ಪರೀಕ್ಷೆಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಒದಗಿಸುತ್ತವೆ ಎಂದು ಅವರು ತಿಳಿಸಿದರು.


ಈ ಸಂದರ್ಭದಲ್ಲಿ ಕೃಷಿ ಮೇಲ್ವಿಚಾರಕ ಸಂತೋಷ್, ಸೇವಾಪ್ರತಿನಿಧಿ ನಾಗರತ್ನ, ಹರೀಶ, ಇತರರು ಹಾಜರಿದ್ದರು.