ಕನ್ನಡಪ್ರಭ ವಾರ್ತೆ ಶಿರಾ

ಕರ್ನಾಟಕದಲ್ಲಿ ೧ ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕರ್ನಾಟಕ ದೇಶದಲ್ಲಿ ಎರಡನೇ ಅತಿ ದೊಡ್ಡ ಹಾಲು ಉತ್ಪಾದನೆ ರಾಜ್ಯವಾಗಿದೆ. ದೇಶದ ಜಿಡಿಪಿಗೆ ಹೈನುಗಾರಿಕೆಯಿಂದ ಶೇ ೨೫ ರಷ್ಟು ಆದಾಯ ನೀಡುತ್ತಿದ್ದೇವೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಹೇಳಿದರು.

ಮಂಗಳವಾರ ನಗರದ ನಂದಿನಿ ಕ್ಷೀರ ಭವನದಲ್ಲಿ ತುಮಕೂರು ಹಾಲು ಒಕ್ಕೂಟದಿಂದ ಏರ್ಪಡಿಸಿದ್ದ ಡಾ.ವರ್ಗೀಸ್ ಕುರಿಯನ್ ಅವರ ಪುತ್ಥಳಿ ಅನಾವರಣ ಮತ್ತು ವಿವಿಧ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಣೆ ಹಾಗೂ ಎನ್.ಆರ್.ಎಲ್.ಎಂ. ಸಾಲ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೈನುಗಾರಿಕೆಯು ದೇಶದಲ್ಲಿ ಒಂದು ಕ್ರಾಂತಿಯನ್ನೇ ಸೃಷ್ಟಿಸಿದೆ. ಇಡೀ ದೇಶದಲ್ಲಿ ದಿನ ನಿತ್ಯ ಸುಮಾರು ೫ ಕೋಟಿ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆ ಆಗುತ್ತಿದೆ. ಶಿರಾ ತಾಲೂಕಿನಲ್ಲಿ ೧೪೦ ಹಾಲು ಉತ್ಪಾದಕರ ಸಂಘ ಇವೆ. ರೈತರು ಹೈನುಗಾರಿಕೆಯನ್ನು ಇನ್ನಷ್ಟು ಕ್ರಿಯಾಶೀಲರಾಗಿ ಮಾಡಬೇಕು. ಆಗ ಕುಟುಂಬಕ್ಕೆ ಆರ್ಥಿಕ ಶಕ್ತಿ ಬರುತ್ತದೆ. ಕೇಂದ್ರ ಸರಕಾರದ ಸ್ಟೆಪ್ ಯೋಜನೆಯಿಂದ ಮಹಿಳಾ ಹಾಲು ಉತ್ಪಾದಕ ಸಂಘಗಳಿಗೆ ೧೦ ಲಕ್ಷ ರುಗಳವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದರ ಜೊತೆಗೆ ಹೈನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ತುಮಕೂರು ಹಾಲು ಒಕ್ಕೂಟ ವಿವಿಧ ಯೋಜನೆಗಳು, ಪಶುವೈದ್ಯಕೀಯ ಸೇವೆಗಳು, ಜಾನುವಾರು ವಿಮೆ, ಜಾನುವಾರುಗಳು ಮೃತಪಟ್ಟರೆ ಪರಿಹಾರ, ಹೈನುಗಾರರು ಮೃತಪಟ್ಟರೆ ಪರಿಹಾರ ಸೇರಿದಂತೆ ಹಲವು ಸವಲತ್ತುಗಳನ್ನು ನೀಡುತ್ತಿದ್ದೇವೆ. ರಾಸುಗಳ ಮರಣ ಹೊಂದಿದ ಬಾಬ್ತು ವಿಮೆ ಹಣವನ್ನು ಮತ್ತೊಂದು ರಾಸು ತಂದು ಸಾಕಾಣಿಕೆ ಮಾಡಿ. ಬೇರೆ ಉದ್ದೇಶಕ್ಕೆ ಹಣವನ್ನು ಉಪಯೋಗಿಸಬೇಡಿ ಎಂದರು.

ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ರಾಸುಗಳ ಮರಣ ವಿಮೆ ೭೦ ಲಕ್ಷ ರೂ., ಹಾಲು ಉತ್ಪಾದಕರ ಸಂಘದ ಕಟ್ಟಡಕ್ಕೆ ಅನುದಾನ ೩೦ ಲಕ್ಷ ರು.ಮೃತಪಟ್ಟ ಹೈನುಗಾರರ ಕುಟುಂಬದವರಿಗೆ ಪರಿಹಾರ ೫ ಲಕ್ಷ ರು.ಗಳ ಚೆಕ್ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ದಿಶಾ ಸಮಿತಿ ಸದಸ್ಯ ಮದಲೂರು ಮೂರ್ತಿ ಮಾಸ್ಟರ್, ಮುಖಂಡ ಆರ್.ಉಗ್ರೇಶ್, ಸಮಾಜ ಸೇವಕರಾದ ಶ್ರೀರಾಮೇಗೌಡ, ಕಲ್ಕೆರೆ ರವಿಕುಮಾರ್, ಪಿ ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಅಜ್ಜಣ್ಣ, ತುಮಕೂರು ಹಾಲು ಒಕ್ಕೂಟದ ಜಿಲ್ಲಾ ವ್ಯವಸ್ಥಾಪಕ ಡಾ.ಟಿ.ವಿ.ಶ್ರೀನಿವಾಸ್, ತಾಲೂಕು ವ್ಯವಸ್ಥಾಪಕ ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ಸ್ಟೆಪ್ ಯೋಜನೆಯ ಮಧು, ಬಾಬಾ ಫಕೃದ್ದಿನ್, ಮದಲೂರು ಸಹಕಾರ ಸಂಘದ ಅಧ್ಯಕ್ಷ ನಾಗೇಗೌಡ, ಮಾಜಿ ಸೂಡಾ ಅಧ್ಯಕ್ಷ ಗುಮ್ಮನಹಳ್ಳಿ ಈರಣ್ಣ, ಮುದ್ದು ಗಣೇಶ್, ಭಾನುಪ್ರಕಾಶ್ ಸೇರಿದಂತೆ ಹಲವರು ಹಾಜರಿದ್ದರು.