ತುಮಕೂರು ನಗರದಲ್ಲಿ ಬರದ ಛಾಯೆ ಕಾಣುತ್ತಿದ್ದು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕೆಂದು ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ನಗರದಲ್ಲಿ ಬರದ ಛಾಯೆ ಕಾಣುತ್ತಿದ್ದು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕೆಂದು ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮನವಿ ಮಾಡಿದರು.

ಶಾಸಕರು ತುಮಕೂರು ಮಹಾನಗರಪಾಲಿಕೆ, ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ತುಮಕೂರು ನಗರದ ವಿವಿಧ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದು, ನೀರಿನ ಸಮಸ್ಯೆ ಬಗೆಹರಿಸುವಂತೆ ಶಾಸಕರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಸ್ತುತ ಬುಗುಡನಹಳ್ಳಿ ಕೆರೆಯಲ್ಲಿ ಶೇಖರಣೆಯಾಗಿರುವ ನೀರಿನ ಮಟ್ಟದ ಬಗ್ಗೆ ಮಾಹಿತಿ ಪಡೆದು, ಇಂದಿನ ನೀರಿನ ಮಟ್ಟ 200 ಎಂಸಿಎಫ್ ಟಿ ಇದ್ದು, ಅಕ್ಟೋಬರ್ ತಿಂಗಳ ಕೊನೆಯವರೆಗೂ ನೀರನ್ನು ಬಳಸಿಕೊಳ್ಳಬಹುದಾಗಿದೆ. ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ 3 ಓವರ್ ಹೆಡ್ ಟ್ಯಾಂಕ್‌ಗಳು ತಾಂತ್ರಿಕ ಕಾರಣದಿಂದ ನೀರು ಸರಬರಾಜು ಮಾಡಲಾಗುತ್ತಿಲ್ಲ. ಸದಾಶಿವನಗರದಲ್ಲಿರುವ ಓವರ್ ಹೆಡ್ ಟ್ಯಾಂಕ್‌ಗೆ ನೀರು ಸರಬರಾಜು ಆಗುತ್ತಿಲ್ಲ ಇದಕ್ಕೆ ಕಾರಣ ಇಸ್ರಾ ಶಾದಿ ಮಹಲ್ ಬಳಿ ಪೈಪ್ ಲೈನ್ ಹೊಡೆದು ಹೋಗಿದ್ದು, ಇದನ್ನು ಶೀಘ್ರವಾಗಿ ದುರಸ್ಥಿ ಮಾಡಿ, ಸದಾಶಿವನಗರದ ಪಾರ್ಕ್‌ನಲ್ಲಿ ಇರುವ ಬೋರ್‌ವೆಲ್‌ನ್ನು ತುರ್ತಾಗಿ ದುರಸ್ಥಿಗೊಳಿಸಿ, ಸಾರ್ವಜನಿಕರಿಗೆ ನೀರು ಸರಬರಾಜು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ತುಮಕೂರು ಮಹಾನಗರಪಾಲಿಕೆಯ ಒಳಚರಂಡಿ ವ್ಯವಸ್ಥೆ ಮತ್ತಷ್ಟು ಸುಧಾರಣೆ ಕಾಣಬೇಕಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕರ್ನಾಟಕ ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿ ಮತ್ತು ಮಹಾನಗರಪಾಲಿಕೆ ವತಿಯಿಂದ ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದು, ಮತ್ತಷ್ಟು ಅನುದಾನದ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಮಂಡಿಪೇಟೆಯ ಮುಖ್ಯರಸ್ತೆಯಲ್ಲಿ ಗುಂಡಿಗಳು ಬಿದ್ದು, ಸಾರ್ವಜನಿಕರು ಸಂಚಾರ ಮಾಡಲು ಬಹು ದಿನಗಳಿಂದ ತುಂಬಾ ತೊಂದರೆಯಾಗುತ್ತಿದ್ದು, ಹಲವು ಬಾರಿ ಅಧಿಕಾರಿಗಳಿಗೆ ಸಭೆಗಳಲ್ಲಿ ತಿಳಿಸಿದರು ಸಹ ರಸ್ತೆ ಅಭಿವೃದ್ಧಿ ಮಾಡಲು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಶಾಸಕರು ಸಭೆಯಲ್ಲಿ ಪ್ರಶ್ನಿಸಿದಾಗ, ಅಧಿಕಾರಿಗಳು ಸಂತೇಪೇಟೆಯ ಜಲಸಂಗ್ರಹಾರಕ್ಕೆ ಹೋಗುವ ನೀರಿನ ಪೈಪ್‌ಲೈನ್ ಶಿಥಿಲಗೊಂಡಿದ್ದು, ದುರಸ್ಥಿ ಕಾಮಗಾರಿ ಕೈಗೊಳ್ಳಬೇಕಾಗಿದೆ. ಆದ್ದರಿಂದ ಈ ರಸ್ತೆ ಅಭಿವೃದ್ಧಿ ಕಾಮಗಾರಿಯು ತಡವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಹಲವಾರು ವಾರ್ಡ್‌ಗಳಲ್ಲಿ ಕಸ ವಿಲೇವಾರಿಯು ಸಮರ್ಪಕವಾಗಿ ಆಗುತ್ತಿಲ್ಲವೆಂದು ಸಾರ್ವಜಕರ ದೂರು ಕೇಳಿ ಬಂದಿದ್ದು, ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡು ಅಧಿಕಾರಿಗಳು ಸಮರ್ಪಕವಾಗಿ ಕಸ ವಿಲೇವಾರಿ ಮಾಡಬೇಕೆಂದು ಶಾಸಕರು ಸಭೆಯಲ್ಲಿ ತಿಳಿಸಿದರು. ಈ ಸಭೆಯಲ್ಲಿ ಮಹಾನಗರಪಾಲಿಕೆಯ ಆಯುಕ್ತರಾದ ಶುಭ.ಬಿ, ಪಾಲಿಕೆ ಉಪ-ಆಯುಕ್ತರಾದ ಸುಪ್ರಿಯಾ ಬಣಗಾರ್, ಕಂದಾಯ ಉಪ-ಆಯುಕ್ತರಾದ ಮನು ಕುಮಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿಯಾದ ತಬಸ್ಸುಮ್ ಜಹೇರಾ, ಕಾರ್ಯಪಾಲಕ ಅಭಿಯಂತರರಾದ ವಿನಯ, ಸಂದೀಪ, ವಲಯ ಆಯುಕ್ತರಾದ ಶಿವಾನಂದ, ನಂದೀಶ್, ನಾಗರಾಜು, ಪರಿಸರ ಅಭಿಯಂತರರಾದ ಪೂರ್ಣಿಮಾ, ಕೌನ್ಸಿಲ್ ಕಾರ್ಯದರ್ಶಿಯಾದ ನಜ್ಮಾ, ಕುಡಿಯುವ ನೀರು ಹಾಗೂ ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರರಾದ ಅನಿಲ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.