28 ರಂದು ದಾವಣಗೆರೆಯಲ್ಲಿ ಬೆಣ್ಣೆ ನಗರಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ : ಅಧ್ಯಕ್ಷ ರಾಜಪ್ಪ ಮಾಹಿತಿ

| Published : Jul 20 2024, 01:49 AM IST / Updated: Jul 20 2024, 05:58 AM IST

ಸಾರಾಂಶ

ರಾಜ್ಯ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ ಚಿತ್ರದುರ್ಗ, ಜಿಲ್ಲಾ ಕರುನಾಡ ಹಣತೆ ಕವಿ ಬಳಗದ ವತಿಯಿಂದ ಜು.28ರಂದು ಬೆಣ್ಣೆನಗರಿ ಸಾಹಿತ್ಯ ಸಂಭ್ರಮ-2024 ಕಾರ್ಯಕ್ರಮವನ್ನು ನಗರದ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ  

ದಾವಣಗೆರೆ: ರಾಜ್ಯ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ ಚಿತ್ರದುರ್ಗ, ಜಿಲ್ಲಾ ಕರುನಾಡ ಹಣತೆ ಕವಿ ಬಳಗದ ವತಿಯಿಂದ ಜು.28ರಂದು ಬೆಣ್ಣೆನಗರಿ ಸಾಹಿತ್ಯ ಸಂಭ್ರಮ-2024 ಕಾರ್ಯಕ್ರಮವನ್ನು ನಗರದ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಳಿಚೋಡು ಹೋಬಳಿ ಕಸಾಪ ಘಟಕ ಅಧ್ಯಕ್ಷ ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9 ಗಂಟೆಗೆ ದಾವಣಗೆರೆ ಜಿಲ್ಲಾ ಘಟಕ ಉದ್ಘಾಟನೆ, ಜಿಲ್ಲಾ ಸಮ್ಮೇಳನ, ಪುಸ್ತಕ ಲೋಕಾರ್ಪಣೆ, ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ 150 ಕವಿಗಳಿಂದ ಸ್ಥಳದಲ್ಲೇ ದಾಖಲೆ ಬರಹ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಸಮ್ಮೇಳನವನ್ನು ವೈಚಾರಿಕ ಚಿಂತಕ ಡಾ.ಗಂಗಾಧರ ವ.ಮ.ಆತ್ರೇಯ ಸಾಗರ ಉದ್ಘಾಟಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಡಾ.ಶ್ರೀದೇವಿ ಸೂರ್ಯ ಸುವರ್ಣಖಂಡಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಭಾರತೀಯ ಸಂಸ್ಕೃತಿ ಪ್ರತಿಪಾದಕ ಮಹೇಂದ್ರ ಮುನೋತ್, ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ, ಸಾಹಿತಿ ಎನ್.ಟಿ. ಎರ್ರಿಸ್ವಾಮಿ ಇತರರು ಭಾಗವಹಿಸುವರು ಎಂದರು.

ಸಾಹಿತಿ ಎಸ್.ವಿ. ಶಾಂತಕುಮಾರ್ ಅವರ "ಕನಸು ಚಿಗುರೊಡೆಯಿತು " ಕೃತಿಯನ್ನು ಸಾಹಿತಿ ಕೆ.ಶಾಂತ ಬಸವರಾಜ ಬಿಡುಗಡೆ ಮಾಡಲಿದ್ದಾರೆ. ಸಾಹಿತಿ ಡಾ.ಶ್ರೀದೇವಿ ಸೂರ್ಯ ಸುವರ್ಣಖಂಡಿ ಅವರು "ಶ್ರಾವ್ಯ " ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.

ಸಾಹಿತಿಗಳಾದ ಎಚ್.ಸುಂದರಮ್ಮ, ವಿದ್ಯಾಶ್ರೀ ಎಂ. ಕುಡಗುಂಟಿ, ಟಿ.ಸಿ. ದಾಕ್ಷಾಯಣಿ, ಶಿಲ್ಪಾವತಿ, ಶರಣರೆಡ್ಡಿ ಎಸ್.ಕೋಡ್ಲಾ, ಡಾ.ವಿಜಯಲಕ್ಷ್ಮೀ ನಾಯಕ, ಹನುಮಂತೋಜಿ ರಾವ್, ಮಂಜುಳಾದೇವಿ ಸೇರಿದಂತೆ 60ಕ್ಕೂ ಸಾಧಕರಿಗೆ ಸನ್ಮಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಲಾತಂಡದ ಸಂಸ್ಥಾಪಕ ಅಧ್ಯಕ್ಷ ಕನಕ ಪ್ರೀತೀಶ್, ಸಾಹಿತಿ ಎಸ್.ವಿ. ಶಾಂತಕುಮಾರ್, ಗದಿಗೆಪ್ಪ ಹಾವೇರಿ ಇದ್ದರು.