31ರಂದು ರಾಜ್ಯಾದ್ಯಂತ ಸಾರಿಗೆ ನಿಗಮ ಕಾರ್ಮಿಕರ ಮುಷ್ಕರ

| Published : Dec 28 2024, 12:47 AM IST

31ರಂದು ರಾಜ್ಯಾದ್ಯಂತ ಸಾರಿಗೆ ನಿಗಮ ಕಾರ್ಮಿಕರ ಮುಷ್ಕರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಡಿ.31ರಂದು ಬೆಳಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಸಮಿತಿಯ ದಾವಣಗೆರೆ ವಿಭಾಗದ ಅಧ್ಯಕ್ಷ ಎಚ್.ಜಿ. ಉಮೇಶ್ ಆವರಗೆರೆ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ: ಅಧ್ಯಕ್ಷ ಉಮೇಶ್ ಆವರಗೆರೆ ಮಾಹಿತಿ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಡಿ.31ರಂದು ಬೆಳಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಸಮಿತಿಯ ದಾವಣಗೆರೆ ವಿಭಾಗದ ಅಧ್ಯಕ್ಷ ಎಚ್.ಜಿ. ಉಮೇಶ್ ಆವರಗೆರೆ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ 2024ರ ಜ.25ರಂದು ಸಾರಿಗೆ ನಿಗಮಗಳ ಸಮಸ್ತ ನೌಕರರ ಪರವಾಗಿ ಬೇಡಿಕೆಗಳ ಪಟ್ಟಿಯನ್ನು ಸಾರಿಗೆ ನಿಗಮಗಳ ಆಡಳಿತ ವರ್ಗ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ತದನಂತರ ಹಲವಾರು ಬಾರಿ ಆಡಳಿತ ವರ್ಗ ಮತ್ತು ಸಾರಿಗೆ ಸಚಿವರಿಗೆ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯ ಮಾಡಿದೆ ಎಂದರು.

ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಹಲವಾರು ಪತ್ರಗಳನ್ನು ಬರೆಯಲಾಗಿದೆ. ಆದರೂ ಈವರೆಗೂ ಸರ್ಕಾರದಿಂದಾಗಲೀ ಅಥವಾ ಸಾರಿಗೆ ನಿಗಮಗಳ ಆಡಳಿತ ವರ್ಗದಿಂದಾಗಲೀ ಯಾವುದೇ ಸ್ಪಂದನೆ ಇಲ್ಲ. ಇದು ಕಾರ್ಮಿಕರಿಗೆ ಅತೀವ ನಿರಾಶೆ ತಂದಿದೆ ಎಂದು ಹೇಳಿದರು.

ಸಾರಿಗೆ ನಿಗಮಗಳ ವಿದ್ಯುತ್ ಬಸ್‌ಗಳಲ್ಲಿ ಸಂಸ್ಥೆಯ ಚಾಲಕರನ್ನೇ ಚಾಲನಾ ಕೆಲಸಕ್ಕೆ ನಿಯೋಜಿಸಬೇಕು. ಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡಿರುವ ಚಾಲಕ, ತಾಂತ್ರಿಕ ಸಿಬ್ಬಂದಿಯನ್ನು ಸಂಸ್ಥೆ ನೌಕರರನ್ನಾಗಿ ನೇಮಿಸಿಕೋಳ್ಳಬೇಕು. ಸಾರಿಗೆ ನಿಗಮಗಳಲ್ಲಿ ಸಿಬ್ಬಂದಿ ನೇಮಕಾತಿಯನ್ನು ಬೇಗ ಮುಗಿಸಿ, ಎಲ್ಲ ನಿಗಮಗಳಲ್ಲೂ ನೌಕರರ ಮುಂಬಡ್ತಿಗೆ ಕ್ರಮ ತೆಗೆದುಕೊಳ್ಳಬೇಕು. ಶಕ್ತಿ ಯೋಜನೆಯಿಂದ ಚಾಲಕ, ನಿರ್ವಾಹಕರಿಗೆ ಆಗುತ್ತಿರುವ ಶಿಕ್ಷೆ ಮತ್ತು ಕಿರುಕುಳಗಳ ಬಗ್ಗೆ ಟಿಪ್ಪಣಿ ಕೊಡುತ್ತಿದ್ದೇವೆ. ಆಡಳಿತ ವರ್ಗಕ್ಕೆ ಸಲ್ಲಿಸಿರುವ ಎಲ್ಲ ಬೇಡಿಕೆಗಳನ್ನು ಜಂಟಿ ಸಮಿತಿಯಲ್ಲಿ ಚರ್ಚಿಸಿ ಪರಿಹರಿಸಬೇಕು. ಒಟ್ಟಾರೆ ನಮ್ಮ ಎಲ್ಲ ಬೇಡಿಕೆಗಳನ್ನು ರಾಜ್ಯ ಸರ್ಕಾರ ಹಾಗೂ ಸಾರಿಗೆ ಆಡಳಿತ ವರ್ಗ ಕೂಡಲೇ ಜಂಟಿ ಕ್ರಿಯಾ ಸಮಿತಿಯೊಂದಿಗೆ ಮಾತುಕತೆ ನಡೆಸಿ, ಈಡೇರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಮಿರ್ಜಾ ರಹಮತ್ ಉಲ್ಲಾ, ಆರೀಫ್‌ಭಾಷಾ ಕೆ.ಜಯಣ್ಣ ಇದ್ದರು.

- - -

ಬಾಕ್ಸ್* ಬೇಡಿಕೆಗಳೇನೇನು? - ಸರ್ಕಾರ ಈ ಕೂಡಲೇ ಮೂಲ ವೇತನದ ಶೇ.25ರಷ್ಟು ಹೆಚ್ಚಳ ಮಾಡಿ, ವೇತನ ಶ್ರೇಣಿಗಳನ್ನು ಸಿದ್ಧಪಡಿಸಬೇಕು

- ಶೇ.15 ವೇತನ ಹೆಚ್ಚಳದ 38 ತಿಂಗಳ ಬಾಕಿ ಹಣ ವಿಳಂಬವಿಲ್ಲದೇ ಪಾವತಿಸಬೇಕು

- ವಾರ್ಷಿಕ ವೇತನ ಬಡ್ತಿ ಹಾಗೂ ಉನ್ನತ ಶ್ರೇಣಿಗಳ ವಾರ್ಷಿಕ ವೇತನ ಬಡ್ತಿಯೂ ಆಯಾಯ ವೇತನ ಶ್ರೇಣಿಯ ಮೂಲ ವೇತನದ ಶೇ.4ರಷ್ಟು ನೀಡಬೇಕು

- ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾ ಅವಧಿಯ ಪ್ರತಿ 10 ವರ್ಷಕ್ಕೆ ಒಮ್ಮೆ ನೀಡಬೇಕು - ಶಕ್ತಿ ಯೋಜನೆಯ ಸಂಪೂರ್ಣ ಅನುದಾನವನ್ನು ರಾಜ್ಯ ನಾಲ್ಕೂ ಸಾರಿಗೆ ನಿಗಮಗಳಿಗೆ ಕೂಡಲೇ ಪಾವತಿಸಬೇಕು

- ನೌಕರರು ಪಡೆಯುತ್ತಿರುವ ವಿವಿಧ ಭತ್ಯೆಗಳನ್ನು ಐದು ಪಟ್ಟು ಹೆಚ್ಚಳ ಮಾಡಬೇಕು

- ಎಲ್ಲ ನೌಕರರಿಗೂ ಪ್ರತಿ ತಿಂಗಳೂ ಹೊರರೋಗಿ ಚಿಕಿತ್ಸೆ ವೆಚ್ಚಕ್ಕಾಗಿ ₹2 ಸಾವಿರ ನೀಡಬೇಕು

- ನೌಕರರಿಂದ ಶೇ.05 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಈ ಮೂಲಕ ಸಾರಿಗೆ ನೌಕರರಿಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಬೇಕು

- - - -27ಕೆಡಿವಿಜಿ32:

ದಾವಣಗೆರೆಯಲ್ಲಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಸಮಿತಿಯಿಂದ ಮುಷ್ಕರ ಹಮ್ಮಿಕೊಂಡಿರುವ ಕುರಿತು ಎಚ್.ಜಿ.ಉಮೇಶ್ ಆವರಗೆರೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.