ಶಸಾಪ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಸಿದ್ದರಾಮ ಬೆಲ್ದಾಳ ಆಯ್ಕೆ

| Published : Dec 28 2024, 12:47 AM IST

ಶಸಾಪ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಸಿದ್ದರಾಮ ಬೆಲ್ದಾಳ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸುತ್ತೂರಿನ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳಿಂದ ಆಯ್ಕೆ ಪ್ರಕಟ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗದ ಬೃಹನ್ಮಠದ ಅನುಭವ ಮಂಟಪದಲ್ಲಿ ನಡೆಯಲಿರುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 13ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಸಿದ್ದರಾಮ ಬೆಲ್ದಾಳ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ.ಸೋಮೇಶೇಖರ್ ತಿಳಿಸಿದರು.ನಗರದ ಬೃಹನ್ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಸುತ್ತೂರಿನ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳು ಡಾ.ಸಿದ್ದರಾಮ ಬೆಲ್ದಾಳ್‍ರವರ ಆಯ್ಕೆಯನ್ನು ಪ್ರಕಟಿಸಿದ್ದಾರೆ. ಧರ್ಮಾಂಧತೆ, ಕೋಮುಗಲಭೆ, ಭಯೋತ್ತಾದನೆಗಳ ನಿರ್ಮೂಲನೆಗೆ ಆಸಕ್ತಿ ವಹಿಸಿ ಮಾನವೀಯ ಏಕತೆ ಉದ್ದೇಶದಿಂದ ಏಕತಾ ಪರಿಷತ್ತನ್ನು ಸ್ಥಾಪಿಸುವುದರ ಮೂಲಕ ಶರಣರು ಪ್ರತಿಪಾದಿಸಿದ ಸಮಾನತೆಯ ಸಮಾಜದ ನಿರ್ಮಾಣದ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ನಿರ್ವಹಿಸುತ್ತ ಬಂದಿದ್ಧಾರೆ.

ಔಪಚಾರಿಕ ಶಿಕ್ಷಣ ಹೆಚ್ಚು ಪಡೆಯದೇ ಇದ್ದರೂ ಆಧ್ಯಾತ್ಮಿಕ ಶಿಕ್ಷಣದಲ್ಲಿ ಬಹುದೊಡ್ಡ ಸಾಧನೆ ಮಾಡಿರುವವರು. ಶರಣ ಸಾಹಿತ್ಯಕ್ಕೆ ಸಂಬಂದಿಸಿದಂತೆ ಹಲವು ಮೌಲಿಕ ಕೃತಿಗಳನ್ನು ರಚಿಸುವ ಮೂಲಕ ಶರಣ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ವಚನ ತತ್ವಸಾರ, ಇಷ್ಟಲಿಂಗಾರ್ಚನೆ ವಿಧಾನ, ಷಟ್‌ಸ್ಥಳ ಸಂಪತ್ತು, ವಚನ ತತ್ವಾನುಭವ, ಬಸವ ತತ್ವ ಪ್ರದೀಪಿಕೆ, ಶಿವಯೋಗ ಸುಖ, ಶರಣರ ಬೆಡಗಿನ ಬೆಳಕು, ಚನ್ನಬಸವಣ್ಣನವರ ವಚನ ವ್ಯಾಖ್ಯಾನ, ಶೂನ್ಯ ಸಂಪಾದನೆಯ ರಹಸ್ಯದ ಬಗ್ಗೆ ಬೃಹತ್‌ಗ್ರಂಥ ರಚನೆ, ಅಕ್ಕಮಹಾದೇವಿ-ಯೋಗಾಂಗ ತ್ರಿವಿಧಿಯ ತವನಿಧಿ, ವಚನಗಳಲ್ಲಿ ಶಿವಯೋಗ, ಮುಂತಾದ ಅತ್ಯಂತ ಶ್ರೇಷ್ಠ ಕೃತಿಗಳನ್ನು ಶರಣ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದು ನುಡಿದರು.

ಇವರ ಸಾಹಿತ್ಯ ಮತ್ತು ಸಮಾಜ ಸೇವೆ ಗುರುತಿಸಿ ನಾಡಿನ ಅನೇಕ ಪ್ರತಿಷ್ಠಿತ ಸಂಸ್ಥೆಗಳು ಮತ್ತು ಸರ್ಕಾರ ಅವರಿಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಚಿತ್ರದುರ್ಗ ಮಠದಿಂದ ನೀಡುವ ಬಸವ ಶ್ರೀ ಪ್ರಶಸ್ತಿ, ಕುಮಾರ ಕಕ್ಕಯ್ಯ ಪ್ರಶಸ್ತಿ, ಕಂಬಳೇ ಬಾಬಾ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬೀದರ್ ಜಿಲ್ಲಾ ಪ್ರಶಸ್ತಿ, ಅನುಭವ ಮಂಟಪ ಪ್ರಶಸ್ತಿ, ಕಾಯಕ ಪ್ರಶಸ್ತಿ, ಸುವರ್ಣ ಸಿರಿ. ಹಳಕಟ್ಟಿ ಪ್ರಶಸ್ತಿ, ಮೃತ್ಯುಂಜಯ ಪ್ರಶಸ್ತಿ, ಮುಂತಾದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ ಅವರಿಗೆ ಕಲಬುರಗಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ಮುರುಘಾರಾಜೇಂದ್ರ ಬೃಹನ್ಮಠದ ಸದಸ್ಯರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಗೌರವ ಸಲಹೆಗಾರರಾದ ಡಾ.ಬಸವಕುಮಾರ ಶ್ರೀಗಳು, ಗುರುಮಠಕಲ್ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮೀಜಿ, ಶರಣ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷರು ಹಾಗೂ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಕೆ.ಎಂ.ವೀರೇಶ್, ಡಾ.ಹೊನ್ನಲಿಂಗಯ್ಯ, ಖಜಾoಚಿ ಎಸ್.ಷಣ್ಮುಖಪ್ಪ, ಹಂಪಯ್ಯ ಸಾರಂಗಮಠ, ಅಪ್ಪರಾವ್ ಅಕ್ಕೂಣಿ ಷಡಾಕ್ಷರಯ್ಯ, ರುದ್ರಮುನಿ, ಗಣೇಶಯ್ಯ ಹಾಜರಿದ್ದರು.