ಸಾರಾಂಶ
ಅಫಜಲ್ಪುರದಲ್ಲಿ 1.20 ಲಕ್ಷ ಎಕರೆಯಲ್ಲಿ ತೊಗರಿ ಬಿತ್ತನೆ । ಒಂದೇ ದಿನಕ್ಕೆ 20 ರಿಂದ 50 ಎಕರೆವರೆಗೂ ಕಟಾವು ಮಾಡುವ ಯಂತ್ರಗಳ ಕಡೆ ರೈತರ ಒಲವು
ಬಿಂದುಮಾಧವ ಮಣ್ಣೂರ ಕನ್ನಡಪ್ರಭ ವಾರ್ತೆ ಅಫಜಲ್ಪುರತಾಲೂಕಿನ ಬಹುತೇಕ ಗ್ರಾಮಗಳಲ್ಲಿ ತೊಗರಿಯ ಕಟಾವು ನಡೆಸಿರೋ ದೃಶ್ಯಗಳು ಕಂಡು ಬರುತ್ತಿವೆ. ಕೆಲ ರೈತರು ಸಾಂಪ್ರದಾಯಿಕ ಪದ್ಧತಿಯಲ್ಲಿ ತೊಗರಿ ರಾಶಿ ನಡೆಸಿದ್ದರೆ, ಹೆಚ್ಚಿನ ರೈತರು ಯಂತ್ರಗಳ ಮೊರೆ ಹೋಗಿದ್ದಾರೆ. ತಾಲೂಕಿನಲ್ಲಿ 1.20 ಲಕ್ಷ ಎಕರೆ ಪ್ರದೇಶದಲ್ಲಿ ತೊಗರಿಯ ಬಿತ್ತನೆ ಮಾಡಲಾಗಿದೆ. ಮಳೆಯ ನಂತರದ ದಿನಗಳಲ್ಲಿ ತೇವಾಂಶದ ಕೊರತೆಯಿಂದ ತೊಗರಿ ಬೆಳೆ ಒಂದಷ್ಟು ನಲುಗಿ ಹೋಗಿತ್ತು. ಅಳಿದುಳಿದ ಬೆಳೆ ಕಟಾವಿನ ಹಂತಕ್ಕೆ ಬಂದಿದೆ.
ಬಹುತೇಕ ಕಡೆ ತೊಗರಿಯ ಕಟಾವು ಪ್ರಕ್ರಿಯೆ ಭರದಿಂದ ಸಾಗಿದೆ. ತೊಗರಿಯ ಕಟಾವು ಏಕಕಾಲಕ್ಕೆ ನಡೆದಿರೋದ್ರಿಂದಾಗಿ ಕೂಲಿ ಕಾರ್ಮಿಕರು ಸಿಗದಂತಾಗಿದ್ದಾರೆ. ಕಾರ್ಮಿಕರ ಕೂಲಿ ದರವೂ ಹೆಚ್ಚಾಗಿದ್ದು, ಹಲವಾರು ರೈತರು ಯಂತ್ರಗಳ ಮೊರೆ ಹೋಗಿದ್ದಾರೆ. ಕಾರ್ಮಿಕರು ಸಿಗದೇ ಇರೋದ್ರಿಂದ ಅನಿವಾರ್ಯವಾಗಿ ಪಂಜಾಬ ಮಷಿನ್ ಗಳ ಮೊರೆ ಹೋಗಬೇಕಾಗಿದೆ. ಯಂತ್ರಗಳಾದರೆ ಒಂದು ದಿನಕ್ಕೆ 20 ರಿಂದ 50 ಎಕರೆವರೆಗೂ ಕಟಾವು ಮಾಡುತ್ತವೆ. ನೋಡ ನೋಡುತ್ತಿದ್ದಂತೆಯೇ ತೊಗರಿ ರಾಶಿಯಾಗಿ ಬೀಳುತ್ತದೆ ಎನ್ನುತ್ತಾರೆ ರಾಮನಗರ ಗ್ರಾಮದ ರೈತ ಅಣ್ಣಪ್ಪ ಬಿಜಾಪುರ ಭೀಮಣ್ಣ ಹಡಲಗಿ ಸಾಯಬಣ್ಣ ಕರೂಟಿ.ಸಾಂಪ್ರದಾಯಿಕ ಪದ್ಧತಿಯಲ್ಲಾದರೆ ತಿಂಗಳಾನುಗಟ್ಟಲೆ ತೊಗರಿಯ ಕಣ ಮಾಡಬೇಕಾಗುತ್ತಿತ್ತು. ತೊಗರಿ ಹೊಲದಿಂದ ರಾಶಿಯಾಗಿ ಬರುವುದರೊಳಗಾಗಿ ದೊಡ್ಡ ಸಾಹಸವನ್ನೇ ಮಾಡಬೇಕಾಗುತ್ತಿತ್ತು. ಆದರೆ ಯಂತ್ರಗಳು ಬಂದ ನಂತರ ರಾಶಿ ಮಾಡುವುದು ಅತ್ಯಂತ ಸರಳ ಹಾಗೂ ಸುಲಭವಾಗಿದೆ. ಆದರೆ ಇದರಿಂದಾಗಿಯೂ ಹಲವಾರು ಅಡ್ಡ ಪರಿಣಾಮಗಳಿವೆ. ಒಂದಷ್ಟು ಭಾಗ ತೊಗರಿಯ ಧಾನ್ಯ ಚೆಲ್ಲಾಪಿಲ್ಲಿಯಾಗಿ ಹೊಲದಲ್ಲಿ ಚೆಲ್ಲಿ ಹೋಗುತ್ತಿದೆ. ಜಾನುವಾರುಗಳಿಗೆ ಮೇವು ಸಿಗದಂತಾಗುತ್ತದೆ. ಇದೆಲ್ಲವನ್ನೂ ಬದಿಗಿಟ್ಟಲ್ಲಿ ಯಂತ್ರಗಳಿಂದ ಅತ್ಯಂತ ಅನಕೂಲವಾಗಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.ಏಕಕಾಲಕ್ಕೆ ಹತ್ತಾರು ಎಕರೆ ಕಟಾವು ಮಾಡಬಲ್ಲ ದೊಡ್ಡ ಯಂತ್ರಗಳ ಜೊತೆಗೆ, ತೊಗರಿ ರಾಶಿಗೆ ಸಣ್ಣ ಯಂತ್ರಗಳೂ ಬಂದಿವೆ. ತೊಗರಿ ಗಿಡವನ್ನು ಕಟ್ಟಿಗೆಯಿಂದ ಬಡಿದು, ನಂತರ ಸಣ್ಣ ಗಾತ್ರದ ಯಂತ್ರಗಳಿಗೆ ಹಾಕಿ ರಾಶಿ ಮಾಡುವ ಮತ್ತೊಂದು ವಿಧಾನವನ್ನೂ ರೈತರು ಅನುಸರಿಸುತ್ತಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿದ್ದರೂ ಅತಿಯಾದ ಮಳೆಯಿಂದ ಹಾಗೂ ತೇವಾಂಶದ ಕೊರತೆಯಿಂದ ಶೇ. 80ರಷ್ಟು ಪ್ರದೇಶದಲ್ಲಿ ಹಾನಿಗೆ ತುತ್ತಾಗಿದೆ. ಇದ್ದ ಬೆಳೆಯಲ್ಲಿಯೂ ಸೂಕ್ತ ರೀತಿಯಲ್ಲಿ ಇಳುವರಿ ಬರುತ್ತಿಲ್ಲ. ಇದರಿಂದಾಗಿ ಈ ವರ್ಷ ನಷ್ಟ ಕಟ್ಟಿಟ್ಟ ಬುತ್ತಿ ಎಂದು ರೈತ ಮಹಿಳೆಯರಾದ ಮಲಕಮ್ಮ, ಬಿಜಾಪುರ ಯಮನವ್ವ, ಬಿಜಾಪುರ ರತ್ನಮ್ಮ, ಬಿಜಾಪುರ ಭೌರವ್ವ ತಮ್ಮ ಅಳಲು ತೋಡಿಕೊಂಡರು.ಒಟ್ಟಾರೆ ತಾಲೂಕಿನಾದ್ಯಂತ ತೊಗರಿ ಕಟಾವು ಪ್ರಕ್ರಿಯೆ ಚುರುಕು ಪಡೆದುಕೊಂಡಿದೆ. ಕಾರ್ಮಿಕರ ಕೊರತೆಯಿಂದಾಗಿ ಈ ವರ್ಷ ಹೆಚ್ಚಿನ ರೈತರು ಯಂತ್ರಗಳ ಮೊರೆ ಹೋಗಿದ್ದಾರೆ. ಚಿಕ್ಕ ಯಂತ್ರದಿಂದ ಹಿಡಿದು ಬೃಹತ್ ಗಾತ್ರದ ಯಂತ್ರಗಳ ನೆರವು ಪಡೆದು ತೊಗರಿಯ ರಾಶಿಯಲ್ಲಿ ರೈತರು ತೊಡಗಿಕೊಂಡಿದ್ದಾರೆ. ಹೀಗಾಗಿ ಈ ವರ್ಷ ಯಂತ್ರಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ.