ಸಾರಾಂಶ
ಲಿಂಗನಮಕ್ಕಿ ಅಣೆಕಟ್ಟಿನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಅಲ್ಲಿಂದ ಹೊನ್ನಾವರದ ವರೆಗೆ ಶರಾವತಿ ಸೇರುವ ಎಲ್ಲ ಹೊಳೆ, ಹಳ್ಳಗಳು ತುಂಬಿ ಹರಿಯುತ್ತಿದೆ.
ಹೊನ್ನಾವರ: ಲಿಂಗನಮಕ್ಕಿ ಅಣೆಕಟ್ಟು ಭರ್ತಿಯಾಗಲು ಕೇವಲ 3 ಅಡಿ ಬಾಕಿ ಇದ್ದು, 11 ಗೇಟ್ ಮೂಲಕ ನೀರು ಹೊರಬಿಡಲಾಗಿದೆ. ಗೇರುಸೊಪ್ಪ ಜಲಾಶಯದಿಂದಲು ಸಹ 5 ಗೇಟ್‌ಗಳ ಮೂಲಕ 50 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗಿದೆ.
ಲಿಂಗನಮಕ್ಕಿ ಜಲಾಶಯದಿಂದ ಹೊರಬಿಟ್ಟ ನೀರು ಗೇರುಸೊಪ್ಪಾ ಅಣೆಕಟ್ಟಿಗೆ ತಲುಪಿ, ಅಲ್ಲಿಂದ 54,719 ಕ್ಯುಸೆಕ್ ನೀರು ಹೊರಬಂದಿದೆ. ಗುರುವಾರ ರಾತ್ರಿ ಗೇರುಸೊಪ್ಪಾ ಜಲಾಶಯದಿಂದ 5000 ಸಾವಿರ ಕ್ಯುಸೆಕ್ ನೀರು ಬಿಡಲಾಗಿತ್ತು. ಶರಾವತಿ ಕೊಳ್ಳದ ಪಾತಳಿಗೆ ಸಮಾನಾಗಿ ನೀರು ಹರಿಯುತ್ತಿದೆ.ಲಿಂಗನಮಕ್ಕಿ ಅಣೆಕಟ್ಟಿನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಅಲ್ಲಿಂದ ಹೊನ್ನಾವರದ ವರೆಗೆ ಶರಾವತಿ ಸೇರುವ ಎಲ್ಲ ಹೊಳೆ, ಹಳ್ಳಗಳು ತುಂಬಿ ಹರಿಯುತ್ತಿದೆ. ಹೊನ್ನಾವರ, ಸಾಗರ ತಾಲೂಕಿನಲ್ಲೂ ಮಳೆ ಇದೆ. ಲಿಂಗನಮಕ್ಕಿ ತುಂಬಿದ ಮೇಲೆ ಹೆಚ್ಚುವರಿ ಪೂರ್ತಿ ನೀರನ್ನು ಗೇರುಸೊಪ್ಪಾ ಅಣೆಕಟ್ಟು ಮುಖಾಂತರ ಬಿಡುಗಡೆ ಮಾಡುವುದು ಅನಿವಾರ್ಯವಾಗುತ್ತದೆ. ಕೆಪಿಸಿ ಎಷ್ಟೇ ಕಾಳಜಿ ವಹಿಸಿದರೂ, ಮಳೆ ಇರುವುದರಿಂದ ಪ್ರವಾಹದ ಲೆಕ್ಕಾಚಾರ ತಪ್ಪಿ ನೆರೆ ಬರುವ ಸಂಭವ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ತಗ್ಗು ಪ್ರದೇಶದ ಜನ ಸುರಕ್ಷಿತ ಸ್ಥಳ ಸೇರಿಕೊಳ್ಳುವುದು ಉತ್ತಮ ಎನ್ನುವುದು ಈ ವರೆಗಿನ ನೆರೆಹಾವಳಿಯ ಕಂಡವರ ಅಭಿಪ್ರಾಯವಾಗಿದೆ.
ಶರಾವತಿ ಬಲದಂಡೆ ಭಾಗದ ಅಳ್ಳಂಕಿ ಗಾಬಿತ ಕೇರಿಗೆ ಜಲಾಶಯದಿಂದ ಹೊರಬಿಟ್ಟ ನೀರು ನುಗ್ಗಿದ್ದು, ಅಲ್ಲಿನ ಜನರು ಕಾಳಜಿ ಕೇಂದ್ರದತ್ತ ತೆರಳುತ್ತಿರುವ ದೃಶ್ಯ ಕಂಡುಬಂತು. ಇನ್ನು ಗುಂಡಬಾಳ ನದಿ ಪ್ರವಾಹ ಗುರುವಾರ ರಾತ್ರಿ ತಗ್ಗಿತ್ತು. ರಾತ್ರಿ ಗೇರುಸೊಪ್ಪಾ ಜಲಾಶಯದಿಂದ ನೀರು ಹೊರಬಿಟ್ಟ ಪರಿಣಾಮ ಶರಾವತಿ ಸಂಗಮದಲ್ಲಿ ನೀರು ಹರಿವಿನ ಒತ್ತಡ ಉಂಟಾಗಿದೆ. ಏತನ್ಮಧ್ಯೆ ಹೊನ್ನಾವರ ಹಾಗೂ ಸಿದ್ದಾಪುರದಲ್ಲಿಯು ವ್ಯಾಪಕ ಮಳೆ ಮುಂದುವರಿದಿದೆ. ಮತ್ತೆ ನದಿ ನೀರಿನ ಪ್ರಮಾಣ ಏರುಗತಿಯಲ್ಲಿದೆ. ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ತಗ್ಗು ಪ್ರದೇಶಗಳಲ್ಲಿ ನೀರು ಆವರಿಸಿರುವುದು ಕಂಡುಬಂತು.