ಪ್ರೊ ಕಬಡ್ಡಿಗೆ ಹಳಿಯಾಳದ ಸುಶೀಲ್ ಕಾಂಬ್ರೆಕರ್ ಆಯ್ಕೆ

| Published : Aug 03 2024, 12:44 AM IST

ಪ್ರೊ ಕಬಡ್ಡಿಗೆ ಹಳಿಯಾಳದ ಸುಶೀಲ್ ಕಾಂಬ್ರೆಕರ್ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲಿನಿಂದಲೇ ಸುಶೀಲ್ ಅವರಿಗೆ ಕ್ರೀಡೆಯಲ್ಲಿ ಆಸಕ್ತಿ. ಕೀಡಾ ರಂಗದಲ್ಲಿ ಸಾಧನೆ ಮಾಡುವ ಕನಸನ್ನು ಕಂಡಿದ್ದರು. ಉಜಿರೆಯಲ್ಲಿದ್ದಾಗ ಅಲ್ಲಿನ ಸ್ಪೋಟ್ಸ್ ಕ್ಲಬ್ ಸೇರಿಕೊಂಡ ಸುಶೀಲ್ ಕಬಡ್ಡಿಯಲ್ಲಿ ಯಶಸ್ಸು ಕಂಡರು.

ಹಳಿಯಾಳ: ತಾಲೂಕಿನ ಗಾಡಗೇರಾ ಗ್ರಾಮದ ಬುಡಕಟ್ಟು ಸಿದ್ದಿ ಸಮುದಾಯದ ಯುವ ಕ್ರೀಡಾಪ್ರತಿಭೆ ಸುಶೀಲ್ ಕಾಂಬ್ರೆಕರ್ ಅವರು ಪ್ರೊ ಕಬಡ್ಡಿಯಲ್ಲಿ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಆಯ್ಕೆಯಾಗಿದ್ದು, ಆ ತಂಡದ ಪರ ಆಡುವ ಏಕೈಕ ಕನ್ನಡಿಗ ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ.ಆ. 20ರಿಂದ 40 ದಿನಗಳ ಕಬಡ್ಡಿ ತರಬೇತಿ ಆರಂಭಗೊಳ್ಳಲಿದೆ. ಅಕ್ಟೋಬರ್‌ನಲ್ಲಿ ಆರಂಭಗೊಳ್ಳಲಿರುವ ಪ್ರೊ ಕಬಡ್ಡಿಗೆ ಸಕಲ ಸಿದ್ಧತೆಯನ್ನು ಆರಂಭಿಸಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಯಲ್ಲಾಪುರದ ಹೋಲಿ ರೋಜರಿಯಲ್ಲಿ ಮುಗಿಸಿರುವ ಸುಶೀಲ್ ಅವರು, ನಂತರ ಪದವಿಪೂರ್ವ ಶಿಕ್ಷಣವನ್ನು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪೂರೈಸಿದ್ದಾರೆ. ಸುಶೀಲ್ ಕಾಂಬ್ರೆಕರ್ ಅವರದು ಬಡಕುಟುಂಬ. ತಂದೆ ಮೋತೆಸ್ ಹಾಗೂ ತಾಯಿ ರೇಷ್ಮಾ ಕಾಂಬ್ರೆಕರ್ ಅವರು ಬೇಸಾಯ ಮಾಡುತ್ತಿದ್ದಾರೆ. ಸುಶೀಲ್ ಹಿರಿಯ ಮಗ. ಸಹೋದರಿ ಅರ್ಪಿತಾ ಮುಂಡಗೋಡಿನ ಲೋಯೋಲಾ ಕಾಲೇಜಿನಲ್ಲಿ ಪದವಿಪೂರ್ವ ವ್ಯಾಸಂಗ ಮಾಡುತ್ತಿದ್ದಾರೆ. ಸಹೋದರ ವಿಲ್ಸನ್ ಯಲ್ಲಾಪುರದ ಹೋಲಿ ರೋಜರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಂಗಿ ಹಾಗೂ ತಮ್ಮನ ಓದಿನ ಜವಾಬ್ದಾರಿಯು ಸುಶೀಲ್ ಹೆಗಲೇರಿದೆ.

ಮೊದಲಿನಿಂದಲೇ ಸುಶೀಲ್ ಅವರಿಗೆ ಕ್ರೀಡೆಯಲ್ಲಿ ಆಸಕ್ತಿ. ಕೀಡಾ ರಂಗದಲ್ಲಿ ಸಾಧನೆ ಮಾಡುವ ಕನಸನ್ನು ಕಂಡಿದ್ದರು. ಉಜಿರೆಯಲ್ಲಿದ್ದಾಗ ಅಲ್ಲಿನ ಸ್ಪೋಟ್ಸ್ ಕ್ಲಬ್ ಸೇರಿಕೊಂಡ ಸುಶೀಲ್ ಕಬಡ್ಡಿಯಲ್ಲಿ ಯಶಸ್ಸು ಕಂಡರು. ಸುಶೀಲ್ ಕಾಂಬ್ರೆಕರ್ ಅವರು ಉತ್ತಮ ರೈಡರ್. ಎದುರಾಳಿ ತಂಡದ ಮೇಲೆ ಮಾಡುವ ಆಕ್ರಮಣಕಾರಿ ರೈಡಿಂಗ್ ಶೈಲಿಯು ಕ್ರೀಡಾಪ್ರೇಮಿಗಳ ಮನವನ್ನು ಸೂರೆಗೊಳಿಸುವಂತಿದೆ.ಬೆಂಗಾಲ್ ತಂಡಕ್ಕೆ ಆಯ್ಕೆ: ಪ್ರಸ್ತುತ ಮಹಾರಾಷ್ಟ್ರದ ರಾಯಗಢದಲ್ಲಿನ ಮಿಡ್‌ಲೈನ್ ಆಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಕಬಡ್ಡಿ ಕ್ಲಿಪಿಂಗ್ ನೋಡಿದ ಕ್ರೀಡಾ ಆಯ್ಕೆದಾರರು ಇವರಿಗೆ ಕರೆ ನೀಡಿದರು. ಚೆನ್ನೈಯಲ್ಲಿ ಆದ ಆಯ್ಕೆ ಟ್ರಯಲ್ಸ್‌ನಲ್ಲಿ ಸುಶೀಲ್ ಆಡಿದ ಅದ್ಭುತ ಆಟವು ಆಯ್ಕೆದಾರರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಎರಡು ವರ್ಷದ ಗುತ್ತಿಗೆಗೆ ಸಹಿ ಹಾಕಿರುವ ಸುಶೀಲ್ ಅವರು ಸೀಜನ್ 11 ಮತ್ತು ಸೀಜನ್ 12ರಲ್ಲಿ ತಂಡದ ಪರವಾಗಿ ಆಡಲಿದ್ದಾರೆ.

ಚಿಂತನೆ ನಡೆಸಲಿ: ಕ್ರೀಡಾ ಕ್ಷೇತ್ರದಲ್ಲಿ ಬುಡಕಟ್ಟು ಸಿದ್ದಿ ಸಮುದಾಯದವರು ವಿಶೇಷ ಪ್ರತಿಭೆಯನ್ನು ಹೊಂದಿದ್ದು, ಅವರಿಗೆ ಸೂಕ್ತ ತರಬೇತಿಯನ್ನು ನೀಡಿದರೆ ಕ್ರೀಡೆಯಲ್ಲಿ ದೇಶಕ್ಕೆ ಪದಕಗಳ ಸರಮಾಲೆಯನ್ನು ತರಬಲ್ಲರು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ದಿಸೆಯಲ್ಲಿ ಚಿಂತನೆಯನ್ನು ನಡೆಸಲಿ ಎಂದು ಕಬಡ್ಡಿ ಆಟಗಾರ ಸುಶೀಲ್ ಮೋತೆಸ್ ಕಾಂಬ್ರೆಕರ್ ತಿಳಿಸಿದರು.