ಲೋಕಸಭಾ ಅಭ್ಯರ್ಥಿಗಳ ಬಹಿರಂಗ ಪ್ರಚಾರಕ್ಕೆ ತೆರೆ

| Published : Apr 25 2024, 01:02 AM IST / Updated: Apr 25 2024, 01:03 AM IST

ಸಾರಾಂಶ

ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರು ನಗರದ ಕಾರೇಮನೆ ಗೇಟ್‌ನಿಂದ ಪ್ರಚಾರ ರ್‍ಯಾಲಿ ಆರಂಭಿಸಿ ಜೆ.ಸಿ.ವೃತ್ತದ ಮೂಲಕ ನೂರಡಿ ರಸ್ತೆ ತಲುಪಿ ಹೊಸಹಳ್ಳಿ ವೃತ್ತದಲ್ಲಿ ರ್‍ಯಾಲಿಯನ್ನು ಅಂತ್ಯಗೊಳಿಸಿದರು. ಅದೇ ರೀತಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ವಿಶ್ವವಿದ್ಯಾಲಯದ ಆವರಣದಿಂದ ರ್‍ಯಾಲಿ ಆರಂಭಿಸಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಅಂತ್ಯಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಬಹಿರಂಗ ಪ್ರಚಾರ ಬುಧವಾರ ಸಂಜೆ ೬ ಗಂಟೆಗೆ ಅಂತ್ಯಗೊಂಡಿದೆ. ಕೊನೆಯ ದಿನ ಮಂಡ್ಯ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ಸಹಸ್ರಾರು ಕಾರ್ಯಕರ್ತರೊಂದಿಗೆ ರ್‍ಯಾಲಿ ನಡೆಸಿ ಮತಯಾಚಿಸುವುದರೊಂದಿಗೆ ಪ್ರಚಾರವನ್ನು ಕೊನೆಗೊಳಿಸಿದರು.

ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ಅವರು ನಗರದ ಕಾರೇಮನೆ ಗೇಟ್‌ನಿಂದ ಪ್ರಚಾರ ರ್‍ಯಾಲಿ ಆರಂಭಿಸಿ ಜೆ.ಸಿ.ವೃತ್ತದ ಮೂಲಕ ನೂರಡಿ ರಸ್ತೆ ತಲುಪಿ ಹೊಸಹಳ್ಳಿ ವೃತ್ತದಲ್ಲಿ ರ್‍ಯಾಲಿಯನ್ನು ಅಂತ್ಯಗೊಳಿಸಿದರು. ಅದೇ ರೀತಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ವಿಶ್ವವಿದ್ಯಾಲಯದ ಆವರಣದಿಂದ ರ್‍ಯಾಲಿ ಆರಂಭಿಸಿ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಅಂತ್ಯಗೊಳಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಮುಖಂಡರು, ಕಾರ್ಯಕರ್ತರು, ಸ್ಟಾರ್ ಕ್ಯಾಂಪೇನರ್ಸ್‌ಗಳು, ಮೆರವಣಿಗೆ ಆಯೋಜಕರು ಸೇರಿದಂತೆ ಮತ್ತಿತರರು ಸಂಜೆ ೬ ಗಂಟೆಯೊಳಗೆ ಕ್ಷೇತ್ರ ಬಿಡುವಂತೆ ಸೂಚಿಸಲಾಗಿದೆ. ಒಬ್ಬ ಅಭ್ಯರ್ಥಿ ಮೂರು ವಾಹನಗಳ ಬಳಕೆಗೆ ಅವಕಾಶವಿರುತ್ತದೆ. ಅಭ್ಯರ್ಥಿ ಅನುಪಸ್ಥಿತಿಯಲ್ಲಿ ಇತರರು ವಾಹನವನ್ನು ಉಪಯೋಗಿಸುವಂತಿಲ್ಲ. ಪ್ರಚಾರಕ್ಕೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಮನೆ ಮನೆಗೆ ತೆರಳಿ ಪ್ರಚಾರ ಮಾಡುವುದಕ್ಕೆ ಅವಕಾಶವಿರುತ್ತದೆ.

ಅನುಮತಿಸಿದ ವಾಹನಗಳಲ್ಲಿ ಐದು ಜನರಿಗಿಂತ ಹೆಚ್ಚು ಜನರು ಪ್ರಯಾಣಿಸತಕ್ಕದ್ದಲ್ಲ. ಈ ಅವಧಿಯಲ್ಲಿ ಐದು ಜನರಿಗಿಂತ ಹೆಚ್ಚುಜನ ಸೇರದಂತೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಮತಗಟ್ಟೆಯಿಂದ ೨೦೦ ಮೀ. ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಟೆಂಟ್‌ಗಳನ್ನು ತೆರೆಯುವಂತಿಲ್ಲ. ತಾತ್ಕಾಲಿಕ ಬೂತ್ ತೆರೆಯಲು ಬಯಸಿದರೆ ಸಹಾಯಕ ಚುನಾವಣಾಧಿಕಾರಿಗಳಿಂದ ಅನುಮತಿ ಕಡ್ಡಾಯವಾಗಿರುತ್ತದೆ. ಏ.೨೪ರಂದು ಸಂಜೆ ೫ ಗಂಟೆಯಿಂದ ಏ.೨೬ರ ಮಧ್ಯರಾತ್ರಿ ೧೨ರವರೆಗೆ ಜಿಲ್ಲಾದ್ಯಂತ ಮದ್ಯಮಾರಾಟ ಹಾಗೂ ಸರಬರಾಜನ್ನು ನಿಷೇಧಿಸಲಾಗಿರುತ್ತದೆ.