ಸಾರಾಂಶ
ಬ್ಯಾಡಗಿ: ಹಾವೇರಿ ವಿಶ್ವವಿದ್ಯಾಲಯ ಉಳಿಸಿಕೊಂಡಿದ್ದರಿಂದಲೇ ನೂರಾರು ಕ್ರೀಡಾಪಟುಗಳು ಅಧಿಕೃತವಾಗಿ ಯುನಿವರ್ಸಿಟಿ ಸರ್ಟಿಫಿಕೆಟ್ ಪಡೆದುಕೊಳ್ಳುವ ಮೂಲಕ ಸರ್ಕಾರಿ ಕೆಲಸಕ್ಕೆ ಅರ್ಹತೆ ಪಡೆದಿದ್ದು, ಆ ಮೂಲಕ ಕಬಡ್ಡಿ ಕ್ರೀಡಾ ಸಾಧಕರಿಗೆ ಉದ್ಯೋಗಾವಕಾಶಗಳು ಹೆಚ್ಚು ಸಿಗಲಿವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆಶ್ರಯದಲ್ಲಿ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಹಾಗೂ ತೀರ್ಪುಗಾರರ ಮಂಡಳಿ ಸಹಯೋಗದೊಂದಿಗೆ ಎರಡು ದಿನಗಳ ಕಾಲ ನಡೆಯಲಿರುವ ಹಾವೇರಿ ವಿಶ್ವವಿದ್ಯಾಲಯ ಪುರುಷರ(ಬ್ಲೂ ಸೆಲೆಕ್ಷನ್) ತಂಡದ ಆಯ್ಕೆ ಪ್ರಕ್ರಿಯೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು.ಈ ಮೊದಲು ಧಾರವಾಡ ಕವಿವಿ ಹಂತದಲ್ಲಿ ವಿಶ್ವವಿದ್ಯಾಲಯ ತಂಡಕ್ಕೆ ಪ್ರತಿನಿಧಿಸುವುದೆಂದರೆ ಬಹಳ ಕಷ್ಟದ ಕೆಲಸವಾಗಿತ್ತು. ಅಂದೂ ನಮ್ಮ ಭಾಗದ ಕ್ರೀಡಾಪಟುಗಳಿಗೆ ಅವಕಾಶಗಳ ಕೊರತೆಯಿಂದ ಬಹುತೇಕ ಪ್ರತಿಭೆಗಳು ಬೆಳಕಿಗೆ ಬರದಂತಾಗಿದ್ದು, ಅದರೆ ಅಂಥದ್ದೊಂದು ಸಮಸ್ಯೆಯಿಂದ ಹೊರಗೆ ಬಂದಿದ್ದೇವೆ ಎಂದರು.
ಬ್ಯಾಡಗಿಗೆ ಪ್ರಾಶಸ್ತ್ಯ: ಕಳೆದ ಏಳೆಂಟು ದಶಕಗಳಿಂದ ಬ್ಯಾಡಗಿ ಪಟ್ಟಣ ಕಬಡ್ಡಿ ಕ್ರೀಡೆಗೆ ಅತ್ಯಂತ ಪ್ರಸಿದ್ಧವಾಗಿದೆ. ನವರಂಗ ಕಬಡ್ಡಿ ತಂಡ, ನ್ಯಾಷನಲ್ ಯುಥ್ ಕ್ಲಬ್ ಇನ್ನಿತರ ಸಂಘಗಳು ಕಬಡ್ಡಿಗಾಗಿ ಮೀಸಲಿದ್ದವು. ಬಳಿಕ 1999ರಿಂದ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಇವರು ಕಬಡ್ಡಿ ಮುಂದುವರಿಸುವ ಹೊಣೆಗಾರಿಕೆ ಪಡೆದು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅಷ್ಟಕ್ಕೂ ನಮ್ಮೆಲ್ಲರ ಸಹಕಾರ ಪಡೆದುಕೊಂಡ ಅವರು ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 40ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಕಬಡ್ಡಿ ಅಸೋಸಿಯೇಶನ್ ಇಂದಿಗೂ ತರಬೇತಿ ನೀಡುತ್ತಿದೆ ಎಂದರು.ಆಲ್ ಇಂಡಿಯಾ ಚಾಂಪಿಯನ್ ಆಗಲಿ: ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆಯ 42 ಕಾಲೇಜುಗಳಿಂದ ಸುಮಾರು170 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಹೀಗಾಗಿ ಹಾವೇರಿ ವಿಶ್ವವಿದ್ಯಾಲಯವು ಪುರುಷರ ಒಂದು ಉತ್ತಮ ಕಬಡ್ಡಿ ತಂಡವನ್ನು ಆಯ್ಕೆ ಮಾಡುವ ಮೂಲಕ ಆಲ್ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಲಿ ಎಂದು ಇದೇ ಸಂದರ್ಭದಲ್ಲಿ ಕ್ರೀಡಾಪಟುಗಳಿಗೆ ಶುಭ ಕೋರಿದರು.
ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಡ್ಡೀಪುಡಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ದಾನಪ್ಪ ಚೂರಿ, ಪುರಸಭೆ ಉಪಾಧ್ಯಕ್ಷ ಸುಭಾಸ್ ಮಾಳಗಿ, ಮಾಜಿ ಸದಸ್ಯ ದುರ್ಗೇಶ ಗೋಣೆಮ್ಮನವರ, ಹಾವೇರಿ ವಿವಿ ಕ್ರೀಡಾ ವಿಭಾಗದ ಮುಖ್ಯಸ್ಥ ಸಿ.ಎನ್. ಸೊರಟೂರು, ಬಿಇಎಸ್ಎಂ ಕಾಲೇಜು ಪ್ರಾಚಾರ್ಯ ಡಾ. ಎನ್.ಎಸ್. ಪ್ರಶಾಂತ, ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಡಾ. ಸಿ.ಜಿ. ಚಕ್ರಸಾಲಿ ಇತರರಿದ್ದರು. ಡಾ. ದೇವೇಂದ್ರಪ್ಪ ಸ್ವಾಗತಿಸಿದರು. ಎಚ್.ಜಿ. ಸಣ್ಣಗೌಡ್ರ ನಿರೂಪಿಸಿ, ವಂದಿಸಿದರು.