ಕನ್ನಡಪ್ರಭ ವಾರ್ತೆ ಮಂಡ್ಯ
ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಅಣೆಕಟ್ಟೆಯಲ್ಲಿ ನೀರಿದ್ದೂ ರೈತರ ಪಾಲಿಗೆ ಇಲ್ಲವಾಗಿದೆ. ಸರ್ಕಾರದ ನಿಲುವುಗಳನ್ನು ಪ್ರಶ್ನಿಸುವವರೇ ಇಲ್ಲದೆ ರೈತರ ಸ್ಥಿತಿ ಅಯೋಮಯವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ರೈತ ಪರವಾದ ಧ್ವನಿಯನ್ನೇ ಕಳೆದುಕೊಂಡಿದ್ದರೆ, ರೈತಸಂಘ ಒಡೆದು ಹೋಳಾಗಿ ನಾಮಕಾವಸ್ಥೆ ಸಂಘಟನೆಗಳಾಗಷ್ಟೇ ಉಳಿದುಕೊಂಡಿವೆ.ಜಿಲ್ಲೆಯ ೩೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದುನಿಂತಿರುವ ಕಬ್ಬಿದೆ. ಮಳೆ ಕೊರತೆಯಿಂದ ನೀರಿಗೆ ತೀವ್ರ ಅಭಾವ ಎದುರಾಗಿದೆ. ಕಬ್ಬು ಬೆಳೆ ಗದ್ದೆಯಲ್ಲೇ ಒಣಗಿ ಉರುವಲಾಗುತ್ತಿದೆ. ನೀರು ಸಿಗದೆ ಕಬ್ಬಿನ ಇಳುವರಿ ಕುಸಿತಗೊಂಡು ಬೆಳೆ ನಷ್ಟದ ಆತಂಕವನ್ನು ರೈತರು ಎದುರಿಸುತ್ತಿದ್ದಾರೆ. ಪರಿಸ್ಥಿತಿ ಕಠೋರ ಸನ್ನಿವೇಶ ತಲುಪಿದ್ದರೂ ಜೆಡಿಎಸ್-ಬಿಜೆಪಿ ಪಕ್ಷದ ಯಾರೊಬ್ಬರೂ ಸರ್ಕಾರದ ನಿಲುವನ್ನು ಪ್ರಶ್ನಿಸುವ ಶಕ್ತಿಯನ್ನೇ ಕಳೆದುಕೊಂಡಂತೆ ವರ್ತಿಸುತ್ತಿವೆ.
ಹಿಂದೆ ಜಿಲ್ಲೆಯ ರೈತರು ರಸ್ತೆಗಿಳಿದರೆ ವಿಧಾನಸೌಧವೇ ನಡುಗುತ್ತಿತ್ತು. ಕಾಂಗ್ರೆಸ್ ಪಕ್ಷಕ್ಕೆ ಎದೆಗೆ ಎದೆ ಕೊಟ್ಟು ನಿಲ್ಲುವ ಧೈರ್ಯವನ್ನು ಜೆಡಿಎಸ್ ಪ್ರದರ್ಶಿಸುತ್ತಿತ್ತು. ಈಗ ಆ ಶಕ್ತಿ-ಚೈತನ್ಯವನ್ನು ಜೆಡಿಎಸ್ ಕಳೆದುಕೊಂಡಿರುವಂತೆ ಭಾಸವಾಗುತ್ತಿದೆ. ಜೆಡಿಎಸ್ ತನ್ನ ಮಿತ್ರಪಕ್ಷವಾದ ಬಿಜೆಪಿಯನ್ನು ಜೊತೆಗೂಡಿಸಿಕೊಂಡು ರೈತರ ಪರವಾದ ನಿಲುವನ್ನು ಪ್ರಕಟಿಸಬೇಕಿತ್ತು. ಆದರೆ, ವಿಪಕ್ಷದ ಯಾರೊಬ್ಬರೂ ಅದರ ಕಡೆ ಗಮನವನ್ನೇ ಹರಿಸದೆ ರೈತರನ್ನು ಸಂಪೂರ್ಣವಾಗಿ ಕೈಬಿಟ್ಟು ಮೌನಕ್ಕೆ ಶರಣಾಗಿದ್ದಾರೆ.ಜಿಲ್ಲೆಯಲ್ಲಿ ಕಾಂಗ್ರೆಸ್‌ನ ನೇರ ಎದುರಾಳಿ ಜೆಡಿಎಸ್ ಆಗಿದೆ. ಆದರೂ ಕೈ ನಾಯಕರ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತಿ ಮಾತನಾಡುವ ಧೈರ್ಯವನ್ನು ದಳಪತಿಗಳು ಪ್ರದರ್ಶಿಸುತ್ತಿಲ್ಲ. ಕೇವಲ ರಾಜಕೀಯ ಕಾರಣಿಗಳಿಗಾಗಿ ಒಬ್ಬರ ಮೇಲೊಬ್ಬರು ಆರೋಪ ಮಾಡುವರೇ ಹೊರತು ಅಭಿವೃದ್ಧಿ, ರೈತರ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿ ಮಾತನಾಡುತ್ತಿಲ್ಲ. ಜಿಲ್ಲೆಯ ದಳಪತಿಗಳು ಕಳೆದ ಚುನಾವಣಾ ಸೋಲಿನಿಂದ ಇನ್ನೂ ಹೊರಬಂದಿಲ್ಲವೆಂಬಂತೆ ತೋರುತ್ತಿದ್ದರೆ, ಮುಂದೆ ಜಿಲ್ಲೆಯಲ್ಲಿ ಯುವ ನಾಯಕರಾಗಿ ಬೆಳೆಯಬೇಕೆಂಬ ಆಕಾಂಕ್ಷೆಯಲ್ಲಿರುವ ಬಿಜೆಪಿಗರೂ ರೈತಪರ ಹೋರಾಟಕ್ಕೆ ಆಸಕ್ತಿಯನ್ನು ತೋರಿಸದೆ ದೂರವೇ ಉಳಿದುಕೊಂಡಿದ್ದಾರೆ.
ಜೆಡಿಎಸ್-ಬಿಜೆಪಿ ನಾಯಕರ ಈ ಮೌನ ಕಾಂಗ್ರೆಸ್ ಶಾಸಕರಿಗೆ ವರದಾನವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಅವರನ್ನು ಪ್ರಶ್ನಿಸುವವರೇ ಇಲ್ಲದಂತಾಗಿದ್ದಾರೆ. ಹೀಗಾಗಿ ಅವರಿಗೆ ತೋಚಿದಂತೆ ಕ್ಷೇತ್ರದಲ್ಲಿ ಅಧಿಕಾರ ನಡೆಸಿಕೊಂಡು ಮುನ್ನಡೆಯುತ್ತಿದ್ದಾರೆ.
ಹಿಂದೆಂದಿಗಿಂತಲೂ ಜೆಡಿಎಸ್ ಈ ಬಾರಿ ಕಾಂಗ್ರೆಸ್ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಘಟಾನುಘಟಿ ನಾಯಕರಿದ್ದರೂ ಜನ-ರೈತಪರ ಹೋರಾಟ ಮನೋಭಾವ ದೂರವಾಗಿದೆ. ಇದನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಳ್ಳುತ್ತಾ ಪಕ್ಷಕ್ಕೆ ಯಾರಿಂದಲೂ ಹಾನಿ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಿದೆ.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕುಗ್ಗಿಹೋಗಿದೆ. ಸಮಿತಿ ಪುನಾರಚನೆಯಾದರೂ ಬಲವರ್ಧನೆಗೊಳ್ಳಲಿಲ್ಲ. ರೈತ ಸಂಘಟನೆಗಳಲ್ಲಿ ಒಗ್ಗಟ್ಟು ಇಲ್ಲವಾಗಿದೆ. ಬಣಗಳಿಂದ ತುಂಬಿಹೋಗಿ ಅವೂ ಕೂಡ ರೈತಪರ ನಿರ್ಣಾಯಕ ಹೋರಾಟ ನಡೆಸುವ ಶಕ್ತಿಯನ್ನು ಕಳೆದುಕೊಂಡಿದೆ. ಕೆ.ಎಸ್.ಪುಟ್ಟಣ್ಣಯ್ಯ ನಂತರದಲ್ಲಿ ಜಿಲ್ಲೆಯೊಳಗೆ ರೈತಪರವಾದ ಮತ್ತೊಂದು ಧ್ವನಿ ಏಳುವುದಕ್ಕೆ ಸಾಧ್ಯವಾಗಿಲ್ಲ. ಇಂದು ನಡೆಯುವ ಹೋರಾಟಗಳು ನಾಮ್‌ಕೆವಾಸ್ತೆ ಹೋರಾಟಗಳಾಗಿರುವುದರಿಂದ ಅವುಗಳಿಗೆ ಯಾರೂ ಹೆದರದಂತಹ ಪರಿಸ್ಥಿತಿ ನೆಲೆಸಿದೆ.ಸಂಕೋಚ ಆಗುತ್ತದೆ. ಎಲ್ಲಿದೆ ವಿಪಕ್ಷ. ನಾನು ಒಂದು ಪಕ್ಷದಲ್ಲಿದ್ದು ಮಾತನಾಡುತ್ತಿದ್ದೇನೆ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದು ಸಾಕು. ರಾಜೀನಾಮೆ ಕೊಟ್ಟು ರಾಜ್ಯಕ್ಕೆ ಬನ್ನಿ ಎಂದು ತಗ್ಗಹಳ್ಳಿಗೆ ಬಂದಾಗ ಹೇಳಿದ್ದೇನೆ. ರಾಜ್ಯದ ಸಮಸ್ಯೆಗಳು ಸಾಕಷ್ಟಿವೆ. ತತ್‌ಕ್ಷಣವೇ ಬನ್ನಿ ಎಂದಿದ್ದೇನೆ. ಹಿಂದೆ ವಿಪಕ್ಷ ಎಂದರೆ ಒಂದು ಭಯ ಇತ್ತು. ಈಗ ಅದು ಇದೆಯಾ. ಯಾವುದೇ ವಿಪಕ್ಷಗಳು ಜನರಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ನಿಂತಿಲ್ಲ. ಅದಕ್ಕೆ ಕಾಂಗ್ರೆಸ್‌ನವರು ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಎಲ್ಲರೂ ರಿಯಲ್ ಎಸ್ಟೇಟ್ ಮೇಲೆ ನಿಂತಿದ್ದಾರೆ. ಎಂಎಲ್‌ಎಗಳ ಪೊಲೀಸ್ ರೆಕಾರ್ಡ್ ತೆಗೆದು ನೋಡಿದರೆ ಅವರ ಯೋಗ್ಯತೆ ತಿಳಿಯುತ್ತದೆ. ವಿಪಕ್ಷ ಕೆಲಸವನ್ನು ಯಾರೂ ಕೂಡ ಮಾಡುತ್ತಿಲ್ಲ. ಕುಮಾರಸ್ವಾಮಿ ಬಂದು ಜನರ ಪರ ಹೋರಾಟ ಮಾಡಿದರಷ್ಟೇ ಉಳಿಯಲು ಸಾಧ್ಯ.- ರವೀಂದ್ರ ಶ್ರೀಕಂಠಯ್ಯ, ಮಾಜಿ ಶಾಸಕರು, ಶ್ರೀರಂಗಪಟ್ಟಣ ಕ್ಷೇತ್ರ