ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಪರ್ಯಾಯ ಇಂಧನಗಳು ಮತ್ತು ಕಚ್ಚಾ ವಸ್ತುಗಳ ತಯ್ಯಾರಿಕಾ ಘಟಕದ ಮೇಲೆ ಬುಧವಾರ ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ ಕಾರ್ಖಾನೆ ಯಲ್ಲಿ ನಡೆಯುತ್ತಿರುವ ಅನಧಿಕೃತ ಚಟುವಟಿಕೆಯನ್ನು ಬಯಲಿಗೆಳೆದಿದ್ದಾರೆ.

ಪಟ್ಟಣದ ಹೊರ ವಲಯದಲ್ಲಿರುವ ಕಾರ್ಖಾನೆಯೊಂದರಲ್ಲಿ ಅನಧಿಕೃತ ಜೆಸಿಪಿ ಬಳಿಸಿ ತ್ಯಾಜ್ಯವನ್ನು ಮುಚ್ಚುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ಪೊಲೀಸರಿಗೆ ದೂರು ಬಂದ ಹಿನ್ನೆಲೆಯಲ್ಲಿ ತಕ್ಷಣ ದಾಳಿ ನಡೆಸಿ ಕಾರ್ಖಾನೆಗೆ ಬೀಗ ಜಡಿಯಲಾಗಿದೆ ಎಂದು ಬೀದರಿನ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಪ್ರಾದೇಶಿಕ ಕಛೇರಿ ಮಾಹಿತಿ ನೀಡಿದೆ.

ಕೈಗಾರಿಕಾ ಪ್ರದೇಶದಲ್ಲಿರುವ ಮಾನವ ಜೀವಕ್ಕೆ ಅಪಾಯಕಾರಿಯಾದ ಸಿಮೆಂಟ್ ಕೈಗಾರಿಕೆಗೆ ಬಳಸುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಪರಿಸರಕ್ಕೆ ಹಾನಿ ಉಂಟು ಮಾಡುವ ತ್ಯಾಜ್ಯ ಸಂಗ್ರಹ ವಿಲೇವಾರಿ ಮಾಡದೆ ಇರುವ ಹಿನ್ನೆಲೆ ಕಾರ್ಖಾನೆಯ ಮಾಲಿಕ ಹಾಗೂ ಸಂಬಂಧಪಟ್ಟ ಇತರರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಪ್ರಾದೇಶಿಕ ಕಛೇರಿ ಬೀದರ್‌ನ ಸಹಾಯಕ ಪರಿಸರ ಅಧಿಕಾರಿಯಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಈ ಕುರಿತು ಹುಮನಾಬಾದ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಖಾನೆಯೊಂದರಲ್ಲಿ ಕಳೆದ 2024ರ ಜನವರಿ 21ರಂದು ಚಿಟಗುಪ್ಪ ತಾಲೂಕಿನ ವಡ್ಡನಕೇರಾ ಗ್ರಾಮದ ಶಾದಾಬ್ ಕುತುಬೋದ್ದಿನ್ ಹಾಗೂ ಮಧ್ಯ ಪ್ರದೇಶದ ಇಂದ್ರಜೀತ ಎನ್ನುವವರು ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಮೃತಪಟ್ಟಿದ್ದರು.


ಈ ಹಿನ್ನೆಲೆ ಹಾಗೂ ಸಮ್ಮತಿ ಪತ್ರದಲ್ಲಿರುವ ಷರತ್ತುಗಳನ್ನು ಉಲ್ಲಂಘಿಸಿ 25 ಜನವರಿ 2024ರಲ್ಲಿ ಕಾರ್ಖಾನೆ ಮುಚ್ಚಲು ಆದೇಶಿಸಲಾಗಿತ್ತು. ಬಳಿಕ ಕಾರ್ಖಾನೆ ಮಾಲಿಕರು ಕಾರ್ಖಾನೆಯಲ್ಲಿ ಶೇಖರಣೆಗೊಂಡಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಿದ ಹಿನ್ನೆಲೆ 28 ಮಾರ್ಚ್‌ 2025ರಲ್ಲಿ ವ್ಶೆಜ್ಞಾನಿಕವಾಗಿ ವಿಲೇವಾರಿಗೆ 30 ದಿನಗಳ ಕಾಲಾವಕಾಶ ನೀಡಿಲಾಗಿತ್ತು. ಇದೇ ಜುಲೈ 8 ರಂದು ಪರಿಸರ ಮಾಲಿನ್ಯ ಇಲಾಖೆಯಿಂದ ಪರಿವೀಕ್ಷಣೆ ಮಾಡುವ ಸಂದರ್ಭದಲ್ಲಿ ಕಾರ್ಖಾನೆಯ ಒಳಗಡೆ ತ್ಯಾಜ್ಯ ಸುರಕ್ಷತಾ ಕ್ರಮ ಕೈಕೊಳ್ಳದೆ ಹಾಗೆ ಸಂಗ್ರಹಿಸಿಟ್ಟಿರುವುದು ಹಾಗೂ ವ್ಶೆಜ್ಞಾನಿಕ ವಿಲೇವಾರಿ ಮಾಡದೆ ಕಾರ್ಖಾನೆ ಯ ಒಳಗಡೆ ನೆಲದ ಮೇಲೆ ಮಣ್ಣು ಸಿಂಪಡಿಸಿದ್ದು, ಮಣ್ಣಿನ ಕೆಳಗೆ ತ್ಯಾಜ್ಯ ವಸ್ತು ಇರುವ ಸಂಶಯ ಮೇರೆಗೆ ಸಹಾಯಕ ಪರಿಸರ ಮಾಲಿನ್ಯ ಅಧಿಕಾರಿ ಮಣ್ಣಿನಿಂದ ಮುಚ್ಚಿಟ್ಟಲ್ಲಿ ವಾತಾವರಣ ಹಾಳಾಗಿ ಅಕ್ಕಪಕ್ಕದಲ್ಲಿ ವಾಸವಿರುವ ಸಾರ್ವಜನಿಕರಿಗೆ ರೋಗ ಹರಡುವ ಸಂಭವ ಕಾರ್ಖಾನೆಯ ಮಾಲಿಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಹುಮನಾಬಾದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸ್ಥಳಕ್ಕೆ ಡಿ.ವೈಎಸ್ಪಿ ಮಡೋಳಪ್ಪ, ಸಿಪಿಐ ಸಂತೋಷ ಎಲ್.ಟಿ, ಪಿಎಸ್‌ಐ ಸುರೇಶಕುಮಾರ, ಬೀದರ್‌ನ ಸಹಾಯಕ ಪರಿಸರ ಅಧಿಕಾರಿ ಸಂತೋಷ ಭೇಟಿ ನೀಡಿದ್ದಾರೆ. ಸದ್ಯ ಪೊಲೀಸ್ ಇಲಾಖೆಯಿಂದ ಕಾರ್ಖಾನೆಗೆ ಬೀಗ ಜಡಿಯಲಾಗಿದೆ. --ಚಿತ್ರ 9ಬಿಡಿಆರ್55:ಹುಮನಾಬಾದ್‌ ಪಟ್ಟಣದ ಹೊರವಲಯದಲ್ಲಿ ಪರ್ಯಾಯ ಇಂಧನಗಳು ಮತ್ತು ಕಚ್ಚಾ ವಸ್ತುಗಳು ತಯ್ಯಾರಿಕಾ ಘಟಕದಲ್ಲಿ ತ್ಯಾಜ್ಯ ಮಣ್ಣಿನಲ್ಲಿ ಹಾಕಿರುವುದು.