- ಪರ್ಸನಲ್ ಟ್ರೈನರ್ ಹೆಸರಲ್ಲಿ ಮೊಬೈಲ್, ಹಿಡನ್ ಕ್ಯಾಮೆರಾ, ಸಿಸಿ ಕ್ಯಾಮೆರಾದಲ್ಲಿ ಚಿತ್ರ ಸೆರೆ

- ದಾವಣಗೆರೆ ಪೊಲೀಸ್ ಠಾಣೆಯೊಂದರ ಪ್ರಕರಣದಿಂದ ಬೆಳಕಿಗೆ ಬಂದ ಹಲವು ಕಹಿ ಸಂಗತಿ

- - -

ಲೋಗೋ: (ಜಿಮ್‌-ಫಿಟ್ನೆಸ್ ಸೆಂಟರ್ ದುಶ್ಯಾಸನರು!)

- - -


* ಬ್ಲರ್ಬ್‌:

(ಜಿಮ್, ಫಿಟ್ನೆಸ್ ಸೆಂಟರ್‌ಗಳು, ಡ್ಯಾನ್ಸ್ ತರಗತಿಗಳ ಹೆಸರಿನಲ್ಲಿ ಹೆಣ್ಣುಮಕ್ಕಳು, ವಿಶೇಷವಾಗಿ ವಿವಾಹಿತರು, ಶ್ರೀಮಂತ ಕುಟುಂಬದ ಹಿನ್ನೆಲೆಯ ವಿವಾಹಿತೆಯರು, ದೂರದ ಊರಿನಲ್ಲಿ ಕೆಲಸ ಮಾಡುವ ಪತಿ, ವಿಚ್ಛೇದಿತರು, ವಿಧವೆಯರೇ ಇಂತಹ ಜಿಮ್‌ ಮತ್ತು ಫಿಟ್ನೆಸ್ ಸೆಂಟರ್‌ಗಳ ಮಾಲೀಕರು, ಕೋಚ್‌ಗಳು, ಪರ್ಸನಲ್‌ ಟ್ರೈನರ್ (ಪಿಟಿ)ಗಳ ಟಾರ್ಗೆಟ್ ಆಗುತ್ತಿದ್ದಾರೆ. ಅಂತಹ ಹಲವಾರು ಪ್ರಕರಣಗಳ ಬಗ್ಗೆ ಕನ್ನಡಪ್ರಭ ಇಂದಿನಿಂದ ಸರಣಿ ವರದಿ ಮೂಲಕ ದಾವಣಗೆರೆ ನಗರದ ಜನರನ್ನು ವಿಶೇಷವಾಗಿ ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು, ಕುಟುಂಬ ವರ್ಗವನ್ನು ಎಚ್ಚರಿಸುವ ಕೆಲಸ ಮಾಡಲಿದೆ.)

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಯುವತಿಯರು, ಗೃಹಿಣಿಯರ ಪಾಲಿಗೆ ಜಿಮ್ ಮತ್ತು ಫಿಟ್‌ನೆಸ್‌ ಸೆಂಟರ್‌ಗಳ ಕೆಲವು ಮಾಲೀಕರು, ತರಬೇತುದಾರರು, ಖಾಸಗಿ ತರಬೇತುದಾರರು ಆಧುನಿಕ ದುಶ್ಯಾಸನರಾಗಿ ಪರಿಣಮಿಸುತ್ತಿದ್ದಾರೆ. ವಿದ್ಯಾನಗರಿ ದಾವಣಗೆರೆ ಮಹಾ ನಗರವೊಂದರಲ್ಲೇ ಇಂತಹ ಕೆಲವು ಜಿಮ್ ಮತ್ತು ಫಿಟ್‌ನೆಸ್‌ ಸೆಂಟರ್‌ಗಳ ಕೆಲವೇ ಕೆಲವು ಮಾಲೀಕರು, ಕೋಚ್‌ ಮುಖವಾಡ ಧರಿಸಿದವರ ನಯವಂಚನೆ ಜಾಲಕ್ಕೆ ಸಿಲುಕಿ ಅದೆಷ್ಟೋ ಹೆಣ್ಣುಮಕ್ಕಳು, ಕುಟುಂಬಗಳ ಬಾಳೇ ನರಕವಾಗುತ್ತಿದೆ!

ಉತ್ತಮ ಆರೋಗ್ಯ, ಮಾನಸಿಕ ಏಕಾಗ್ರತೆ, ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು, ದೈಹಿಕ ಕ್ಷಮತೆ ಕಾಪಾಡಿಕೊಳ್ಳಲೆಂದು ಸಹಜವಾಗಿಯೇ ಯೋಗ, ಧ್ಯಾನ, ಜಿಮ್, ಫಿಟ್ನೆಸ್ ಕೇಂದ್ರಗಳಿಗೆ ಜನರು ಹೋಗುತ್ತಾರೆ. ಅದೇ ರೀತಿ ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರೂ ಹೋಗುತ್ತಾರೆ. ಹೀಗೆ ಜಿಮ್‌, ಫಿಟ್ನೆಸ್ ಅಂತಾ ಒಬ್ಬಂಟಿಯಾಗಿ ಹೋದ ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರಿಗೆ ಗಾಳ ಹಾಕುವುದು, ಅಂತಹವರ ಖಾಸಗಿ ಫೋಟೋ, ವೀಡಿಯೋಗಳನ್ನು ಹಿಡನ್ ಕ್ಯಾಮೆರಾ, ಸಿಸಿ ಕ್ಯಾಮೆರಾ, ಮೊಬೈಲ್‌ನಲ್ಲಿ ಸೆರೆಹಿಡಿದು, ಹಣಕ್ಕೆ ಪೀಡಿಸುವುದು, ತಮ್ಮ ಮನಸ್ಸಿಗೆ ಬೇಕಾದಂತೆ ಬಳಸಿಕೊಳ್ಳುವ ಪ್ರಕರಣ ಆಗಾಗ ಬೆಳಕಿಗೆ ಬಂದರೂ, ಕೇಸ್ ಆಗದೇ ಅಲ್ಲಿಯೇ ಮುಚ್ಚಿ ಹೋಗುತ್ತಿವೆ.

ದಾವಣಗೆರೆ ಠಾಣೆಯೊಂದರ ವ್ಯಾಪ್ತಿಯ ಜಿಮ್‌ನಲ್ಲಿ ಫಿಟ್ನೆಸ್ ತರಬೇತಿಗೆ ಹೋಗುವ ಮಹಿಳೆಯೊಬ್ಬರ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದ ಪ್ರಕರಣ ವರದಿಯಾಗಿದೆ. ಯಾವುದೇ ದೂರು ದಾಖಲಾಗಿಲ್ಲವೆಂಬ ಕಾರಣಕ್ಕೆ ಪೊಲೀಸರು ಇಡೀ ಪ್ರಕರಣದಲ್ಲಿ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ನೊಂದವರೇ ದೂರು ಕೊಡದಿದ್ದರೆ ನಾವೇನು ಮಾಡಲು ಸಾಧ್ಯ ಎಂಬ ಇಲಾಖೆ ಅಸಹಾಯಕತೆಯಿಂದ ಇಂತಹ ಪ್ರಕರಣದ ಮತ್ತಷ್ಟು ಮರುಕಳಿಸಲು ಅನುವು ಮಾಡಿಕೊಟ್ಟಂತೆ ಆಗುತ್ತದೆಂಬುದು ಸುಳ್ಳಲ್ಲ.

ಮಹಿಳೆಯರ ಸುರಕ್ಷತೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಅನೇಕ ಕ್ರಮ ಕೈಗೊಂಡರೂ, ಇಂತಹ ಪ್ರಕರಣದಲ್ಲಿ ಮಹಿಳೆಯರ ರಕ್ಷಣೆ ಹಿತದೃಷ್ಟಿಯಿಂದ ಸ್ವಯಂಪ್ರೇರಿತ ದೂರು ದಾಖಲಿಸಿ, ಕ್ರಮ ಕೈಗೊಳ್ಳಬೇಕಿದ್ದ ಇಲಾಖೆ ಅಧಿಕಾರಿಗಳು ತಮ್ಮ ಠಾಣೆ ವ್ಯಾಪ್ತಿಯ ಜಿಮ್ ಖಾಲಿ ಮಾಡಲು ಸೂಚಿಸಿದ್ದಾರೆನ್ನಲಾಗಿದೆ. ಜಿಮ್‌ ಮಾಲೀಕ -ಕೋಚ್‌ ಮೊಬೈಲ್, ಜಿಮ್‌ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ, ಹಿಡನ್ ಕ್ಯಾಮೆರಾ ಜಪ್ತಿ ಮಾಡಿ, ಹಾರ್ಡ್ ಡಿಸ್ಕ್, ಮೊಬೈಲ್ ತಪಾಸಣೆ ಮಾಡಿದ್ದರೆ ಎಷ್ಟು ಸತ್ಯ, ಎಷ್ಟು ಸುಳ್ಳು ಎಂಬುದು ಬಯಲಾಗುತ್ತಿತ್ತು. ಆದರೆ, ಅಂತಹ ಆಳಕ್ಕೆ ಇಳಿಯಲು ದೂರು ದಾಖಲಾಗಬೇಕೆಂದು ಇಲಾಖೆ ಹೇಳುತ್ತಿದೆ.

ಇದು ಕೇವಲ ಒಂದು ಠಾಣೆ ವ್ಯಾಪ್ತಿಯ ಪ್ರಕರಣವಲ್ಲ. ಜಿಮ್, ಫಿಟ್ನೆಸ್ ಸೆಂಟರ್‌ಗಳು, ಡ್ಯಾನ್ಸ್ ತರಗತಿಗಳ ಹೆಸರಿನಲ್ಲಿ ಹೆಣ್ಣುಮಕ್ಕಳು, ವಿಶೇಷವಾಗಿ ವಿವಾಹಿತರು, ಶ್ರೀಮಂತ ಕುಟುಂಬದ ಹಿನ್ನೆಲೆಯ ವಿವಾಹಿತೆಯರು, ದೂರದ ಊರಿನಲ್ಲಿ ಕೆಲಸ ಮಾಡುವ ಪತಿ, ವಿಚ್ಛೇದಿತರು, ವಿಧವೆಯರೇ ಇಂತಹ ಜಿಮ್‌ ಮತ್ತು ಫಿಟ್ನೆಸ್ ಸೆಂಟರ್‌ಗಳ ಮಾಲೀಕರು, ಕೋಚ್‌ಗಳು, ಪರ್ಸನಲ್‌ ಟ್ರೈನರ್ (ಪಿಟಿ)ಗಳ ಟಾರ್ಗೆಟ್ ಆಗುತ್ತಿದ್ದಾರೆ. ಅಂತಹ ಹಲವಾರು ಪ್ರಕರಣಗಳ ಬಗ್ಗೆ ಕನ್ನಡಪ್ರಭ ಇಂದಿನಿಂದ ಸರಣಿ ವರದಿ ಮೂಲಕ ದಾವಣಗೆರೆ ನಗರದ ಜನರನ್ನು ವಿಶೇಷವಾಗಿ ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು, ಕುಟುಂಬ ವರ್ಗವನ್ನು ಎಚ್ಚರಿಸುವ ಕೆಲಸ ಮಾಡಲಿದೆ.

- - -

* ಎಲ್ಲ ಜಿಮ್ ಮಾಲೀಕ- ಟ್ರೈನರ್ ಹಾಗೇ ಇಲ್ಲ:

ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು, ಉದ್ಯೋಗಸ್ಥ ಮಹಿಳೆಯರು ತಮ್ಮ ಬಿಡುವಿಲ್ಲದ ಕಾರ್ಯದೊತ್ತಡದ ಮಧ್ಯೆ ಆರೋಗ್ಯದ ಕಡೆ, ಫಿಟ್‌ನೆಸ್ ಕಡೆಗೆ ಗಮನ ಹರಿಸಲು ಬೆಳಗ್ಗೆ ಅಥವಾ ಸಂಜೆ ಜಿಮ್, ಫಿಟ್‌ನೆಸ್‌ ಸೆಂಟರ್‌ಗೆ ತೆರಳುತ್ತಾರೆ. ಹೀಗೆ ಎಲ್ಲ ಜಿಮ್‌ ಮತ್ತು ಫಿಟ್‌ನೆಸ್‌ ಸೆಂಟರ್‌ಗಳಲ್ಲಿ ಮಹಿಳೆಯರ ಶೋಷಣೆ ಆಗುತ್ತದೆಂದಲ್ಲ ಅಥವಾ ಎಲ್ಲ ಜಿಮ್‌, ಫಿಟ್‌ನೆಸ್ ಸೆಂಟರ್ ಮಾಲೀಕರು, ತರಬೇತುದಾರರು, ಪ್ರೈವೇಟ್ ಟ್ರೈನರ್‌ ದುರ್ನಡತೆ ತೋರುತ್ತಾರೆ, ಹೆಣ್ಣುಮಕ್ಕಳಿಗೆ ಶೋಷಣೆ ಮಾಡುತ್ತಾರೆಂದಲ್ಲ. ಕೆಲವರು ಇಂದಿಗೂ ಮಹಿಳೆಯರ ಸುರಕ್ಷತೆಗೆ, ರಕ್ಷಣೆಗೆ, ಭದ್ರತೆಗೆ ಒತ್ತು ನೀಡುತ್ತಾರೆ. ಆದರೆ, ಎಲ್ಲರೂ ಹಾಗೆ ಇಲ್ಲಿದ್ದಾರೆ ಎನ್ನುವುದಕ್ಕೂ ಆಗಿಲ್ಲವೆಂಬುದೂ ಅಷ್ಟೇ ಸತ್ಯ.

ಜಿಮ್‌, ಫಿಟ್ನೆಸ್‌ ತರಬೇತಿಗೆಂದು ಬರುವವರ ಬಗ್ಗೆ ‍7ರಿಂದ 15 ದಿನಗಳ ಕಾಲ ಸೂಕ್ಷ್ಮವಾಗಿ ಗಮನಿಸುವ ಜಿಮ್‌-ಫಿಟ್ನೆಸ್ ಕೇಂದ್ರಗಳ ದುಶ್ಯಾಸನರು ನಿಧಾನವಾಗಿ ಆಪ್ತರಂತೆ ಮಾತು ಶುರು ಮಾಡುತ್ತಾರೆ. ವಿದ್ಯಾರ್ಥಿನಿಯರು, ಯುವತಿಯರು, ಗೃಹಿಣಿಯರು, ವಿಧವೆಯರು, ವಿಚ್ಛೇದಿತರ ಕುಟುಂಬ ಹಿನ್ನೆಲೆ, ಸ್ಥಿತಿಗತಿ ಎಲ್ಲ ಮಾಹಿತಿ ಕಲೆ ಹಾಕಿ, ಸಲುಗೆಯ ಮಾತುಗಳನ್ನು ಆರಂಭಿಸಿ, ಕೊನೆಗೆ ತಮ್ಮ ಗಾಳಕ್ಕೆ ಬೀಳಿಸಿಕೊಳ್ಳುತ್ತಾರೆ. ಈ ಹಿಂದೆ ಕೆಲ ಜಿಮ್ ಮಾಲೀಕರು, ಮಾಲೀಕ ಕಂ ತರಬೇತುದಾರ, ಪರ್ಸನಲ್ ಟ್ರೈನರ್‌, ಟ್ರೈನರ್‌ಗಳನ್ನು ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ್ದು, ಇನ್ನು ಕೆಲ ಪ್ರಕರಣಗಳಲ್ಲಿ ಇಂತಹವರು ಹೆಣ್ಣು ಮಕ್ಕಳ ಕಡೆಯವರಿಂದ ಹಿಗ್ಗಾಮುಗ್ಗ ಒದೆ ತಿಂದ ನಿದರ್ಶನಗಳೂ ಇವೆ.

ಮಹಿಳೆಯರ ಪಾಲಿನ ಆಧುನಿಕ ದುಶ್ಯಾಸನರಂತೆ ಕಾಡುತ್ತಿರುವ ಇಂತಹವರಿಗೆ ಮಟ್ಟ ಹಾಕುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕಿದೆ. ಆದರೆ, ಯಾರಾದರೂ ದೂರು ನೀಡದೆ ಇಲಾಖೆ ಸಹ ಏನು ಮಾಡಲು ಸಾಧ್ಯವಿಲ್ಲವೆಂಬ ಪ್ರಶ್ನೆ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಹೆಣ್ಣುಮಕ್ಕಳ ಗೌರವದ ಪ್ರಶ್ನೆಯಾದ್ದರಿಂದ ಮನೆ ಹಿರಿಯರು ಕೇಸ್‌, ಕೋರ್ಟ್ ಕಚೇರಿ ಸಹವಾಸ ಬೇಡ ವೆಂದು ನೋವು, ಸಂಕಟ, ಅವಮಾನವನ್ನೆಲ್ಲಾ ನುಂಗಿಕೊಳ್ಳುತ್ತಾರೆ. ದೂರು ದಾಖಲಾಗದೇ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳದ ಕಾರಣಕ್ಕೆ ಜಿಮ್-ಫಿಟ್ನೆಸ್ ಸೆಂಟರ್‌ಗಳ ಕೆಲವು ಮಾಲೀಕರು, ಮಾಲೀಕ ಕಂ ಟ್ರೈನರ್, ಟ್ರೈನರ್‌, ಪರ್ಸನಲ್ ಟ್ರೈನರ್‌ ರೂಪದ ಆಧುನಿಕ ದುಶ್ಯಾಸನರ ಹಾವಳಿ ಬೆಳಕಿಗೆ ಬರದಂತಾಗಿದೆ. ಇನ್ನಾದರೂ ಇಲಾಖೆ ಇಂತಹವರನ್ನು ಮಟ್ಟ ಹಾಕುವ ಕೆಲಸ ಮಾಡಬೇಕಿದೆ.

- - -

(ಸಾಂದರ್ಭಿಕ ಚಿತ್ರ)