- ನಮ್ಮ ಪ್ರಶ್ನೆಗೆ ದುಗ್ಗಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರು, ಟ್ರಸ್ಟಿಗಳೇ ಉತ್ತರಿಸಬೇಕು - ತಾಯಿ ದುಗ್ಗಮ್ಮನಿಗೆ ಅಪಚಾರ ಅಲ್ಲ, ಟ್ರಸ್ಟ್‌ಗೆ ಭಕ್ತನಾಗಿ ಲೆಕ್ಕ ಕೇಳೋದು ತಪ್ಪಲ್ಲ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದ ಜಾಗದಲ್ಲಿ 34 ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ದೇವಸ್ಥಾನ ಟ್ರಸ್ಟ್‌ನ ಯಾವ ಸಭೆಯಲ್ಲಿ ನಿರ್ಧರಿಸಿದ್ದು, ಸಭೆಯ ನಿರ್ಣಯಗಳೇನು, ಯಾವ ಮಾನದಂಡದಲ್ಲಿ ಮಳಿಗೆ ನಿರ್ಮಿಸಿದ್ದೀರಿ ಎಂಬುದನ್ನು ದೇವಸ್ಥಾನ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಉತ್ತರ ಕೊಡಿ ಎಂದು ಬಿಜೆಪಿ ಹಿರಿಯ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಒತ್ತಾಯಿಸಿದ್ದಾರೆ.ಅಪಚಾರ ಅಲ್ಲ, ಅರಿಯಿರಿ:
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಮಂಗಳವಾರ, ಶುಕ್ರವಾರ, ವಿಶೇಷ ದಿನಗಳಂದು ತಾಯಿ ದುಗ್ಗಮ್ಮನ ದೇವಸ್ಥಾನಕ್ಕೆ ಹೋಗಿ, ದರ್ಶನ ಮಾಡದೇ ಬೇರಾವುದೇ ಕೆಲಸ ಮಾಡದ ಭಕ್ತ ನಾನು. ಶ್ರೀದೇವಿಯ ಭಕ್ತನಾಗಿ ನಾನು ಕೇಳಿರುವ ಪ್ರಶ್ನೆಗಳಿಗೆ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಸಮರ್ಪಕ ಉತ್ತರ ಕೊಡಿ. ಟ್ರಸ್ಟ್ ಬಗ್ಗೆ ಪ್ರಶ್ನಿಸಿದರೆ ಅದು ದೇವಸ್ಥಾನಕ್ಕೆ, ದುಗ್ಗಮ್ಮನಿಗೆ ಮಾಡುವ ಅಪಚಾರ ಅಲ್ಲ ಎಂಬುದನ್ನು ಟ್ರಸ್ಟಿಗಳು ಅರಿಯಿರಿ ಎಂದರು.
ಟ್ರಸ್ಟಿಗಳು ಸ್ಪಷ್ಟಪಡಿಸಲಿ:
ಟ್ರಸ್ಟ್ ರಚನೆ ನಂತರ ದೇವಸ್ಥಾನ ಅಭಿವೃದ್ಧಿಗೆ ಈವರೆಗೆ ಎಷ್ಟು ಸಭೆಯಾಗಿವೆ? ಸಭೆಯಲ್ಲಿ ಅಧ್ಯಕ್ಷರು, ಟ್ರಸ್ಟಿಗಳು ಚರ್ಚಿಸಿದ ವಿಷಯಗಳ ನಡವಳಿಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ. 34 ವಾಣಿಜ್ಯ ಮಳಿಗೆಗಳಿಗೆ ಒಟ್ಟು ಎಷ್ಟು ಹಣ ಖರ್ಚಾಗಿದೆ? ಕಾಮಗಾರಿಗೆ ಸಂಬಂಧಿಸಿದಂತೆ ಜಿಎಸ್‌ಟಿ ಪಾವತಿಸಿದ ದಾಖಲೆಗಳು, ರಸೀದಿಗಳು ಟ್ರಸ್ಟ್ ಬಳಿ ಇದ್ದರೆ ಅವುಗಳನ್ನು ಚರ್ಚೆಗೆ ಮುಂದೆ ಇಡಬೇಕು. ಟ್ರಸ್ಟ್‌ಗೆ ಡಾ.ಪ್ರಭಾ ಮಲ್ಲಿಕಾರ್ಜುನ, ಸಮರ್ಥ ಶಾಮನೂರುಗೆ ಏನು ಸಂಬಂಧ? ಸಂಬಂಧವಿದ್ದರೆ ಅದನ್ನು ಸಾರ್ವಜನಿಕವಾಗಿ ಟ್ರಸ್ಟಿಗಳು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.ಲೆಕ್ಕಪತ್ರ ವಿವರ ನೀಡಿ:
ದೇವಸ್ಥಾನದ ಕಾರ್ಯದರ್ಶಿಯಾಗಿದ್ದ ಸೊಪ್ಪಿನ ಮರಿಯಪ್ಪನವರು ನಿಧನರಾಗಿ 9 ವರ್ಷಗಳಾದವು. ಬೇರೊಬ್ಬರನ್ನು ಹಂಗಾಮಿ ಕಾರ್ಯದರ್ಶಿ ಮಾಡಿದ್ದರು, ಆ ವ್ಯಕ್ತಿಯೂ ನಿಧನರಾಗಿ 2 ವರ್ಷಗಳಾದವು. ಈವರೆಗೆ ಕಾರ್ಯದರ್ಶಿ ಹುದ್ದೆಗೆ ಯಾರನ್ನೂ ಆಯ್ಕೆ ಮಾಡಿಲ್ಲ ಏಕೆ? ದೇವಸ್ಥಾನಕ್ಕೆ ಭಕ್ತರಿಂದ ಕೋಟ್ಯಂತರ ರು. ಕಾಣಿಕೆ, ಹುಂಡಿ ಹಣ ಸಂಗ್ರಹವಾಗುತ್ತದೆ. ಅದರ ಲೆಕ್ಕಪತ್ರದ ವಿವರ ನೀಡಬೇಕು. ದೇವಸ್ಥಾನ ಸಮಿತಿ, ಟ್ರಸ್ಟ್‌ನಲ್ಲಿ ಒಂದೇ ಕುಟುಂಬದವರಿಗೆ 2 ಸ್ಥಾನಮಾನಗಳೇಕೆ? ಬೇರೆ ಯಾರೂ ಇಲ್ಲಿ ದುಗ್ಗಮ್ಮನ ಭಕ್ತರೆ ಇಲ್ಲವೇ? ಯಾವ ರೀತಿ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದೆಯೆಂಬುದಕ್ಕೆ ಕೈಗನ್ನಡಿ ಇದಾಗಿದೆ ಎಂದು ಅವರು ದೂರಿದರು.ಪ್ರತಿ ಮಂಗಳವಾರ, ಶುಕ್ರವಾರ ಅನ್ನ ದಾಸೋಹಕ್ಕೆ ₹7- ₹8 ಸಾವಿರ ದೇಣಿಗೆ ನೀಡುವವರಿಗೆ ಸಿಹಿಯೂಟ ಅದೂ ಗೋಧಿ ಹುಗ್ಗಿ ಮಾಡಿಸಲು ₹3- ₹4 ಸಾವಿರ ಹೆಚ್ಚಿಗೆ ಕೊಡಲು ಹೊರೆಯಾಗುತ್ತದೆಯೇ? ಮೃತಪಟ್ಟ ವ್ಯಕ್ತಿಗಳು, ಜೀವಂತ ವ್ಯಕ್ತಿಗಳ ಫೋಟೋ ಹಾಕಿದ ಫ್ಲೆಕ್ಸನ್ನು ದುಗ್ಗಮ್ಮನ ದೇವಸ್ಥಾನದೊಳಗೆ ದುಗ್ಗಮ್ಮನಿಗಿಂತ ಎತ್ತರದಲ್ಲಿ ಟ್ರಸ್ಟಿಗಳು ಹಾಕಿಸುತ್ತಾರೆಂದರೆ ಏನರ್ಥ? ಈ ಹಿಂದೆ ಮಹಿಳಾ ಉದ್ಯಮಿ, ರಾಜಕೀಯ ಮುಖಂಡರೂ ಆದ ಪ್ರೇಮಾ ಚನ್ನಪ್ಪನವರು ಇದೇ ದುಗ್ಗಮ್ಮನ ಗುಡಿ ಗರ್ಭಗುಡಿಗೆ ಬೆಳ್ಳಿ ಬಾಗಿಲು ಮಾಡಿಸಿ, ಭಕ್ತಿ ಸಮರ್ಪಿಸುವುದಾಗಿ ಹೇಳಿದಾಗ ಬೇಡ ಅಂದಿದ್ದು ಯಾರೆಂಬುದನ್ನೂ ಟ್ರಸ್ಟಿಗಳು ಉತ್ತರಿಸಬೇಕು ಎಂದು ಅವರು ತಾಕೀತು ಮಾಡಿದರು.
ಬೆಳ್ಳಿ ಇಟ್ಟಿಗೆ ಬಗ್ಗೆ ಅಪಪ್ರಚಾರ:ದೇವಿಗೆ ಅರ್ಪಿಸುವ ಉಡಿಯಕ್ಕಿ, ಸೀರೆ ಆಯಾ ದೇವಸ್ಥಾನಗಳ ಅರ್ಚಕರಿಗೆ ಸೇರುತ್ತದೆ. ಇದು ಜಗಜ್ಜಾಹೀರು ಸಂಗತಿ. ಅದನ್ನೇ ಟ್ರಸ್ಟಿಗಳು ದೊಡ್ಡ ಸತ್ಯ ಹೇಳುವವರಂತೆ ಹೇಳಿಕೆ ನೀಡಿದ್ದೇ ಹಾಸ್ಯಾಸ್ಪದವಾಗಿದೆ. ಇದು ಇನ್ನೂ ಆರಂಭ ಮಾತ್ರ, ಸ್ಯಾಂಪಲ್ ಮಾತ್ರ. ದುಗ್ಗಮ್ಮ ದೇವಿ ಸಾಮಾನ್ಯಳಲ್ಲ. ಆಕೆಗೆ ಅಪಚಾರವನ್ನು ನಾವ್ಯಾರೂ ಮಾಡುವುದಿಲ್ಲ. ರಾಮ ಮಂದಿರದ ಬೆಳ್ಳಿ ಇಟ್ಟಿಗೆ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಒಂದು ವೇಳೆ ಬೆಳ್ಳಿ ಇಟ್ಟಿಗೆ ವಿಚಾರದಲ್ಲಿ ಆರೋಪ ಮಾಡಿದವರು ಅದನ್ನು ಸಾಬೀತುಪಡಿಸಿದರೆ ಒಪ್ಪುತ್ತೇವೆ. ದುಗ್ಗಮ್ಮನ ಟ್ರಸ್ಟ್‌ನ ಲೆಕ್ಕಪತ್ರ ಪಿನ್ ಟು ಪಿನ್ ಕೊಡಬೇಕು. ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಕೆಲಸ ಮಾಡುವ ವ್ಯಕ್ತಿ ಟ್ರಸ್ಟ್‌ನಲ್ಲಿ ಟ್ರಸ್ಟಿಯಾಗಿದ್ದು, ಇಂತಹವರು ಟ್ರಸ್ಟ್‌ನಲ್ಲಿ ಪ್ರಶ್ನಿಸುತ್ತಾರೆ ಎಂದು ಅವರು ಕಿಡಿಕಾರಿದರು.
ರಶೀದಿ ಇದೆ- ಕಾಂಗ್ರೆಸ್‌ಗೆ ತಿರುಗೇಟು:ದುಗ್ಗಮ್ಮ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷರು, ಟ್ರಸ್ಟಿಗಳೇ ನಮ್ಮ ಪ್ರಶ್ನೆಗೆ ಉತ್ತರಿಸಬೇಕು. ರಾಮ ಮಂದಿರದ ಬೆಳ್ಳಿ ಇಟ್ಟಿಗೆ ಬಗ್ಗೆ ಟೀಕಿಸುವವರು ಕೋಟಿಗಟ್ಟಲೇ ದೇಣಿಗೆ ನೀಡಿದ್ದಾರಾ? ಶಾಮನೂರು ಕುಟುಂಬದಿಂದ ಇಷ್ಟು ಟನ್ ಚಿನ್ನ ಕೊಡಿಸಿದ್ದೇವೆಂದು ದಿನೇಶ ಕೆ. ಶೆಟ್ಟಿ ಹೇಳಲಿ. ನಾವು 20-25 ಜನ ಸೇರಿಕೊಂಡು ರಾಮ ಮಂದಿರ ಹೋರಾಟದಲ್ಲಿ ಹುತಾತ್ಮರಾದವರ ಹೆಸರು, ರಾಮ ಮಂದಿರದ ಚಿತ್ರದ ಬೆಳ್ಳಿ ಇಟ್ಟಿಗೆಗೆ ಉಡುಪಿಯ ಪೇಜಾವರ ಶ್ರೀಗಳಿಂದ ಪೂಜೆ ಮಾಡಿಸಿ, ಈಚೆಗೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಮಕ್ಷಮದಲ್ಲಿ ಅಯೋಧ್ಯೆ ರಾಮ ಮಂದಿರಕ್ಕೆ ಸಲ್ಲಿಸಿದ್ದೇವೆ. ದೇವಸ್ಥಾನ ಸಮಿತಿಯಿಂದ ರಸೀದಿ ಇದೆ ಎಂದು ಯಶವಂತ ರಾವ್ ಕಾಂಗ್ರೆಸ್ಸಿಗರ ಟೀಕೆಗೆ ತಿರುಗೇಟು ನೀಡಿದರು.
ಪಕ್ಷದ ಮುಖಂಡರಾದ ಬಿ.ರಮೇಶ ನಾಯ್ಕ, ಶಿವನಗೌಡ ಟಿ.ಪಾಟೀಲ, ಗುರುಶಾಂತ ಸೋಗಿ, ಟಿಂಕರ್ ಮಂಜಣ್ಣ, ಕಿಶೋರ ಕುಮಾರ ಮಡಿವಾಳ್, ಗೋವಿಂದರಾಜ, ಶಿವಾನಂದ ಇತರರು ಇದ್ದರು.- - -
(ಕೋಟ್) ರಾಜ್ಯದ ಪ್ರಸಿದ್ಧ, ದೊಡ್ಡ ಮಠಗಳಲ್ಲೊಂದಾದ ಚಿತ್ರದುರ್ಗ ಮುರುಘಾ ಮಠ, ದಾವಣಗೆರೆ ವಿರಕ್ತ ಮಠ ಹಾಗೂ ನಾಡಿನ ಪ್ರಮುಖ ಸಮಾಜದ ಗುರುಗಳಾದ ಶ್ರೀ ಬಸವಪ್ರಭು ಸ್ವಾಮೀಜಿಗಳನ್ನು ಅವರು ಯಾರೋ ಸ್ವಾಮೀಜಿ ಅಂತೆಲ್ಲಾ ಕಾಂಗ್ರೆಸ್ ಮುಖಂಡ ದಿನೇಶ ಕೆ. ಶೆಟ್ಟಿ ಅವಮಾನಿಸಿದ್ದು ಸರಿಯಲ್ಲ. ಅಯೋಧ್ಯೆ ರಾಮ ಮಂದಿರಕ್ಕೆ ಅದೇ ದಿನ ತಾಯಿಯ ಆಸೆಯಂತೆ ದರ್ಶನಕ್ಕೆ ಕರೆ ತಂದಿದ್ದ ಶ್ರೀ ಬಸವಪ್ರಭು ಸ್ವಾಮೀಜಿ ಸಮಕ್ಷಮದಲ್ಲೇ ಬೆಳ್ಳಿ ಇಟ್ಟಿಗೆಯನ್ನು ರಾಮ ಮಂದಿರದಲ್ಲೇ ನೀಡಿದ್ದೇವೆ. ಪೇಜಾವರ ಸ್ವಾಮೀಜಿ ಸಹ ಬೆಳ್ಳಿ ಇಟ್ಟಿಗೆಗೆ ಪೂಜೆ ಮಾಡಿ, ಮಂದಿರಕ್ಕೆ ಬೇಗ ಸಮರ್ಪಿಸುವಂತೆ ಸಲಹೆ ನೀಡಿದ್ದರು. ಅಂತಹ ಸ್ವಾಮೀಜಿ ಹೆಸರಿನಲ್ಲೂ ಕಾಂಗ್ರೆಸ್ ಮುಖಂಡ ಸುಳ್ಳು ಹೇಳಿದ್ದು ಸರಿಯಲ್ಲ.- ಯಶವಂತ ರಾವ್ ಜಾಧವ್, ಬಿಜೆಪಿ ಹಿರಿಯ ಮುಖಂಡ.
- - --9ಕೆಡಿವಿಜಿ1: ದಾವಣಗೆರೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಒಳಗಿನ ಫ್ಲೆಕ್ಸ್ ಪ್ರದರ್ಶಿಸಿದರು. -9ಕೆಡಿವಿಜಿ2: ದಾವಣಗೆರೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಿಸುವ ಮುನ್ನ ಪೇಜಾವರ ಶ್ರೀಗಳಿಂದ ಪೂಜೆ ಮಾಡಿಸಿದ ವೀಡಿಯೋ ಪ್ರದರ್ಶಿಸಿದರು.