ಸಾರಾಂಶ
ಸಂಡೂರು: ತಾಲೂಕಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ (ಕೆಐಒಸಿಎಲ್)ಯ ದೇವದಾರಿ ಮೈನಿಂಗ್ಸ್ ಅದಿರು ಸಾಗಾಣಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಅಪ್ರೋಚ್ ರಸ್ತೆ ನಿರ್ಮಾಣಕ್ಕಾಗಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಶುಕ್ರವಾರ ನಡೆದಿದ್ದ ಜಂಟಿ ಸರ್ವೇ ಕಾರ್ಯಕ್ಕೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ವೆ ಕಾರ್ಯ ಸ್ಥಗಿತಗೊಳಿಸಲಾಯಿತು.
ತಾಲೂಕಿನ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ೪೦೧ ಹೆಕ್ಟೇರ್ ಪ್ರದೇಶದಲ್ಲಿ ಕೆಐಒಸಿಎಲ್ ಕಂಪನಿಗೆ ಗಣಿಗಾರಿಕೆಗೆ ಅನುಮತಿ ದೊರೆತಿದೆ. ಈ ಗಣಿ ಪ್ರದೇಶದಿಂದ ವಾರ್ಷಿಕ ೨೦ ಲಕ್ಷ ಟನ್ ಅದಿರು ಸಾಗಾಣಿಕೆ ಮಾಡುವ ಉದ್ದೇಶವಿದೆ. ಇದರಿಂದ ಈ ಪ್ರದೇಶದಲ್ಲಿನ ೯೯,೩೩೦ ಮರಗಳಿಗೆ ಕುತ್ತು ಬರಲಿದೆ. ಅಲ್ಲದೆ ಇಲ್ಲಿ ಗಣಿಗಾರಿಕೆ ಆರಂಭವಾದರೆ, ಅಲ್ಲಿ ಉಂಟಾಗುವ ಅರಣ್ಯ ನಾಶದಿಂದ ಸುತ್ತಲಿನ ಪರಿಸರದ, ಜನಜೀವನ, ವನ್ಯಜೀವಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬ ಆತಂಕ ಪರಿಸರವಾದಿಗಳದ್ದಾಗಿದೆ.ಈ ಹಿನ್ನೆಲೆಯಲ್ಲಿ ಶುಕ್ರವಾರ ಜನ ಸಂಗ್ರಾಮ ಪರಿಷತ್, ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಾಷ್ಟ್ರ ಸಮಿತಿ ಮುಖಂಡರಾದ ಶ್ರೀಶೈಲ ಆಲ್ದಳ್ಳಿ, ಮೂಲೆಮನೆ ಈರಣ್ಣ, ಎಂ.ಎಲ್.ಕೆ. ನಾಯ್ಡು, ಕಾಡಪ್ಪ, ಹನುಮಂತಪ್ಪ, ಮಂಜುನಾಥ, ಅಚ್ಯುತ್, ಮೌನೇಶ, ಟಿ.ಕೆ. ಮಂಜುನಾಥ, ಜಿ.ಕೆ. ನಾಗರಾಜ, ಗೌಳಿ ಮಂಜುನಾಥ, ನಾಗರಾಜ್ ಅವರು ಜಂಟಿ ಸರ್ವೆ ನಡೆಯುವ ಸ್ಥಳಕ್ಕೆ ತೆರಳಿ, ಅಪ್ರೋಚ್ ರಸ್ತೆ ನಿರ್ಮಾಣಕ್ಕಾಗಿ ಜಂಟಿ ಸರ್ವೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು.
ಪರಿಸರವಾದಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ಕಾರ್ಯವನ್ನು ಸ್ಥಗಿತಗೊಳಿಸಿದರು. ಕೆಐಒಸಿಎಲ್ ಕಂಪನಿಯ ಮ್ಯಾನೇಜರ್ ವಿಶ್ವಜಿತ್, ಸಿಬ್ಬಂದಿ ಕೊಟ್ರೇಶ್, ಸುರೇಶ, ನಾರಾಯಣ, ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಗುರುಸ್ವಾಮಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.ಈ ಕುರಿತು ''''ಕನ್ನಡಪ್ರಭ''''ದೊಂದಿಗೆ ಮಾತನಾಡಿದ ಜನ ಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ ಅಲ್ದಳ್ಳಿ, ಸ್ವಾಮಿಮಲೈ ಅರಣ್ಯ ವಲಯದ ದೇವದಾರಿ ಅರಣ್ಯ ಪ್ರದೇಶದಲ್ಲಿ ಕೆಐಒಸಿಎಲ್ ಕಂಪನಿಗೆ ಗಣಿಗಾರಿಕೆಗೆ ಅವಕಾಶ ಕಲ್ಪಿಸುವುದಕ್ಕೆ ಅರಣ್ಯ ಇಲಾಖೆಯೇ ವಿರೋಧ ವ್ಯಕ್ತಪಡಿಸಿತ್ತು. ಇಲ್ಲಿ ಗಣಿಗಾರಿಕೆ ನಡೆದರೆ, ಸುಮಾರು ಒಂದು ಲಕ್ಷ ಮರಗಳನ್ನು ಕಡಿಯಬೇಕಲ್ಲದೆ, ಪರಿಸರದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂದು ತಿಳಿಸಲಾಗಿತ್ತು.
ಅರಣ್ಯ ಇಲಾಖೆಯ ವಿರೋಧದ ನಡುವೆಯೂ ಈಗ ಕೆಐಒಸಿಎಲ್ ಕಂಪನಿಗೆ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಈ ಕಂಪನಿಯವರು ಎನ್‌ಎಂಡಿಸಿಯಿಂದ ಅದಿರನ್ನು ಖರೀದಿಸಿ ತಮ್ಮ ಉಕ್ಕು ಕಾರ್ಖಾನೆಗೆ ಬಳಸಿಕೊಳ್ಳಬಹುದಿತ್ತು. ಈ ಕಾರ್ಯಕ್ಕೆ ಕಂಪನಿ ಮುಂದಾಗುತ್ತಿಲ್ಲ. ಇದು ಪರಿಸರದ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ. ಪರಿಸರ ಸಂರಕ್ಷಣೆಯ ಉದ್ದೇಶದೊಂದಿಗೆ ನಾವು ಈ ಗಣಿ ಕಂಪನಿಗೆ ಅಪ್ರೋಚ್ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದೇವೆ ಎಂದರು.ದಕ್ಷಿಣ ವಲಯ ಅರಣ್ಯಾಧಿಕಾರಿ ಸೈಯ್ಯದ್ ದಾದಾಖಲಂದರ್ ಅವರು ಈ ಕುರಿತು ಪ್ರತಿಕ್ರಿಯಿಸಿ, ದೇವದಾರಿ ಅರಣ್ಯ ಪ್ರದೇಶದಲ್ಲಿ ಅಪ್ರೋಚ್ ರಸ್ತೆ ನಿರ್ಮಾಣಕ್ಕಾಗಿ ನಡೆಯುತ್ತಿದ್ದ ಜಂಟಿ ಸರ್ವೆ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ. ಮೇಲಧಿಕಾರಿಗಳ ಸೂಚನೆಯಂತೆ ಕ್ರಮಕೈಗೊಳ್ಳಲಾಗುವುದು ಎಂದರು.
ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಪರಿಸರವಾದಿಗಳ ವಿರೋಧದ ನಡುವೆ ಸರ್ಕಾರ ಕೆಐಒಸಿಎಲ್ ಕಂಪನಿಗೆ ಗಣಿಗಾರಿಕೆಗೆ ಅವಕಾಶ ಕಲ್ಪಿಸಿರುವುದಕ್ಕೆ ಪರಿಸರವಾದಿಗಳು ಹಾಗೂ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಅರಣ್ಯ ಇಲಾಖೆ ವಿರೋಧಿಸಿದ್ದ ಯೋಜನೆಗೆ ಇದೀಗ ಅನುಮತಿ ನೀಡುತ್ತಿರುವುದು ಎಷ್ಟು ಸರಿ ಎಂಬ ಆರೋಪ ಈ ಭಾಗದಲ್ಲಿ ಕೇಳಿ ಬರುತ್ತಿದೆ.