ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಕಳೆದ ಎರಡು ವರ್ಷದಿಂದ ಯಾವುದೇ ಅನುದಾನವಿಲ್ಲದಿದ್ದರೂ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿರುವ ಕೊಡಗು ವಿಶ್ವ ವಿದ್ಯಾಲಯ ಮುಚ್ಚುವ ಬಗ್ಗೆ ವದಂತಿ ಎದ್ದಿದ್ದು, ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ಕೊಡಗು ವಿಶ್ವ ವಿದ್ಯಾಲಯ ಯಥಾ ಸ್ಥಿತಿಯಲ್ಲಿ ಮುಂದುವರೆಸಬೇಕೆಂದು ಆಗ್ರಹಿಸಿದ್ದಾರೆ.
ಕಳೆದ ಬಿಜೆಪಿ ಸರ್ಕಾರದ ಕೊನೆಯ ಅವಧಿಯಲ್ಲಿ ಜಿಲ್ಲೆಗೊಂದರಂತೆ ಹತ್ತು ನೂತನ ವಿಶ್ವ ವಿದ್ಯಾಲಯಗಳನ್ನು ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ಎರಡು ವರ್ಷಗಳು ಯಾವುದೇ ಅನುದಾನವಿಲ್ಲದೆ ವಿವಿಗಳು ಸಂಕಷ್ಟದಲ್ಲೇ ಮುಂದುವರೆಯುತ್ತಿದೆ. ಈ ನಡುವೆ ಇದೀಗ ಕೊಡಗು ಸೇರಿದಂತೆ ರಾಜ್ಯದ ವಿವಿಧ 9 ವಿವಿಗಳನ್ನು ಮುಚ್ಚುವ ಬಗ್ಗೆ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ.ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ನಡೆದಿರುವ ಸಂಪುಟ ಉಪ ಸಮಿತಿ ಸಭೆಯ ನಿರ್ಧಾರಕ್ಕೆ ಕೊಡಗಿನಲ್ಲಿ ಇದೀಗ ವಿರೋಧ ಹೆಚ್ಚುತ್ತಿದೆ. ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಈಗಾಗಲೇ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೊಡಗು ವಿವಿಯನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕೆಂದು ಆಗ್ರಹಿಸಿದ್ದಾರೆ.
ಕೊಡಗು ವಿಶ್ವ ವಿದ್ಯಾಲಯ ಹಿತ ರಕ್ಷಣ ಬಳಗದಿಂದ ಭಾನುವಾರ ಸಂಜೆ 4.30 ಗಂಟೆಗೆ ಶ್ರೀ ಅಳುವಾರಮ್ಮ ದೇವಾಲಯ ಸಮಿತಿಯ ಆವರಣದಲ್ಲಿ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಸಾಹಿತಿಗಳು, ಚಿಂತಕರು ಹಾಗೂ ಈ ವಿಶ್ವವಿದ್ಯಾಲಯದ ಬಗ್ಗೆ ಅಭಿಮಾನ ಹೊಂದಿರುವ ವಿದ್ವಾಂಸರು ಹಾಗೂ ತೊರೆನೂರು, ಶಿರಂಗಾಲ, ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚುನಾಯಿತ ಜನಪ್ರತಿನಿಧಿಗಳು, ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಸದಸ್ಯರು ಹಾಗೂ ಕುಶಾಲನಗರ ತಾಲೂಕಿನ ಎಲ್ಲಾ ಪಕ್ಷದ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು ಹಾಗೂ ಮುಖಂಡರುಗಳು ಹಾಗೂ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ.ಕೊಡಗು ವಿವಿ ಕಳೆದ ಎರಡು ವರ್ಷಗಳಿಂದ ಯಾವುದೇ ಅನುದಾನ ಇಲ್ಲದಿದ್ದರೂ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಅಲ್ಲದೆ ಹಲವು ಪ್ರಮುಖ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಮುನ್ನಡೆಯುತ್ತಿದೆ. ಕುಲಪತಿಗಳು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈ ಸಮಯದಲ್ಲಿ ಕೊಡಗು ವಿವಿ ಮುಚ್ಚುವ ಪ್ರಸ್ತಾಪ ಬಂದಿರುವುದರಿಂದ ಪ್ರಮುಖರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಸಂಪುಟ ಸಮಿತಿ ತೆಗೆದುಕೊಂಡಿರುವ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡಬೇಕು ಎಂಬ ಆಗ್ರಹ ಹೆಚ್ಚುತ್ತಿದೆ.ಚಿಕ್ಕ ಅಳುವಾರದ ಜ್ಞಾನ ಕಾವೇರಿ ಕ್ಯಾಂಪಸ್ ನಲ್ಲಿರುವ ಕೊಡಗು ವಿವಿ ನೂರಾರು ಪ್ರದೇಶದ ಜಾಗವನ್ನು ಹೊಂದಿದೆ. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಇಲ್ಲಿನ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಮೈಸೂರು, ಬೆಂಗಳೂರು ಹಾಗೂ ಮಂಗಳೂರು ಕಡೆಗೆ ತೆರಳುವುದು ಕಡಿಮೆ. ಆದ್ದರಿಂದ ಜಿಲ್ಲೆಯ ವಿವಿಯನ್ನು ಮುಂದುವರೆಸಬೇಕು. ಈ ಬಗ್ಗೆ ಜಿಲ್ಲೆಯ ಶಾಸಕರು ಈ ಬಜೆಟ್ ಮುಂಚಿತವಾಗಿಯೇ ಸರ್ಕಾರಕ್ಕೆ ಒತ್ತಡ ಹೇರಬೇಕೆಂದು ಕೊಡಗು ವಿವಿ ಹಿತ ರಕ್ಷಣಾ ಬಳಗ ಆಗ್ರಹಿಸಿದೆ. ಮುಖ್ಯಮಂತ್ರಿ ಭೇಟಿಯಾಗಲಿರುವ ಶಾಸಕ ಡಾ. ಮಂತರ್!
ಕೊಡಗು ವಿವಿಯನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿರುವ ಸಂಪುಟ ಉಪ ಸಮಿತಿಯ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡುವಂತೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ. ಕೊಡಗಿಗೆ ಇರುವುದು ಒಂದೇ ಒಂದು ವಿಶ್ವ ವಿದ್ಯಾಲಯವಾಗಿದೆ. ಅಲ್ಲದೆ ಕೊಡಗಿನ ಜನರ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೊಡಗು ವಿವಿ ಮುಚ್ಚದಂತೆ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಯನ್ನು ಮಂತರ್ ಅವರು ಸದ್ಯದಲ್ಲಿಯೇ ಭೇಟಿಯಾಗಿ ಮನವಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. (ಚಿತ್ರ: ಮಂತರ್)ಇತರೆ ಹೊಸ ವಿಶ್ವ ವಿದ್ಯಾಲಯಕ್ಕೆ ಹೋಲಿಕೆ ಮಾಡಿದರೆ ಕೊಡಗು ವಿವಿ ಸರ್ಕಾರದ ಯಾವುದೇ ಅನುದಾನವಿಲ್ಲದೆ ಕೂಡ ಉತ್ತಮವಾಗಿ ಕೆಲಸ ಮಾಡುತ್ತಿದೆ. ಆದ್ದರಿಂದ ಕೊಡಗು ವಿವಿ ಮುಚ್ಚುವ ನಿರ್ಧಾರವನ್ನು ಸಂಪುಟ ಸಮಿತಿ ಹಿಂಪಡೆಯಬೇಕು. ಕೊಡಗು ಜಿಲ್ಲೆಗೆ ವಿಶ್ವ ವಿದ್ಯಾಲಯ ಅವಶ್ಯವಾಗಿದ್ದು, ಈ ಬಗ್ಗೆ ಜಿಲ್ಲೆಯ ಶಾಸಕರು ಬಜೆಟ್ ಮುಂಚಿತವಾಗಿ ಸರ್ಕಾರದ ಗಮನ ಸೆಳೆಯಬೇಕು. ಈ ನಿಟ್ಟಿನಲ್ಲಿ ನಾವು ಭಾನುವಾರ ಪ್ರಮುಖರ ಸಭೆ ಕರೆದಿದ್ದೇವೆ.
-ಕೆ.ಎಸ್. ಕೃಷ್ಣೇಗೌಡ, ಅಧ್ಯಕ್ಷರು ಕೊಡಗು ವಿವಿ ಹಿತ ರಕ್ಷಣಾ ಬಳಗಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಗೊಂದು ವಿಶ್ವ ವಿದ್ಯಾಲಯ ಎಂಬ ಗುರಿಯೊಂದಿಗೆ ಕೊಡಗು ಸೇರಿದಂತೆ 9 ಜಿಲ್ಲೆಗಳಲ್ಲಿ ನೂತನ ವಿವಿಯನ್ನು ಸ್ಥಾಪಿಸಿತು. ಆದರೆ ಇದೀಗ ರಾಜ್ಯವನ್ನು ಆಳುತ್ತಿರುವ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯವನ್ನು ಕಡೆಗಣಿಸಿ ವಿವಿಗಳನ್ನು ಮುಚ್ಚುವ ನಿರ್ಧಾರ ಮಾಡಿರುವುದು ಖಂಡನೀಯ.
-ಚೆಪ್ಪುಡಿರ ರಾಕೇಶ್ ದೇವಯ್ಯ, ವಿರಾಜಪೇಟೆ ಬಿಜೆಪಿ ವಕ್ತಾರಕೊಡಗು ವಿಶ್ವ ವಿದ್ಯಾಲಯ ಮುಚ್ಚುವ ನಿರ್ಧಾರಕ್ಕೆ ಶಿಪಾರಸ್ಸು ಮಾಡಿರುವ ಸಚಿವ ಸಂಪುಟದ ಉಪ ಸಮಿತಿಯ ನಿಲುವು ಅತ್ಯಂತ ವಿಷಾದಕರ ಮತ್ತು ಖಂಡನೀಯ. ತಕ್ಷಣ ಕೊಡಗಿನ ಜನ ಪ್ರತಿನಿಧಿಗಳು ಮಧ್ಯ ಪ್ರವೇಶ ಮಾಡುವ ಮೂಲಕ ವಿಶ್ವ ವಿದ್ಯಾಲಯವನ್ನು ಮುಚ್ಚುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯುವುದಕ್ಕೆ ಒತ್ತಡ ಹಾಕಬೇಕು.
-ನಾಪಂಡ ಮುತ್ತಪ್ಪ, ಸಮಾಜ ಸೇವಕಕೊಡಗು ವಿಶ್ವ ವಿದ್ಯಾಲಯ ಮುಚ್ಚುವುದಾದರೆ ಎಲ್ಲಾ ತಾಲೂಕುಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಂಬಿಎ, ಎಲ್ ಎಲ್ ಬಿ ಹಾಗೂ ಎಂಸಿಎ ಕೋರ್ಸ್ ಗಳನ್ನು ಸರ್ಕಾರದಿಂದ ಆರಂಭಿಸಬೇಕು.
-ಡಾ. ಸುಭಾಷ್ ನಾಣಯ್ಯ, ಮೂರ್ನಾಡು