ಬಸ್ಸುಗಳ ಮಾರ್ಗ ದಿಢೀರ್‌ ರದ್ದತಿಗೆ ವಿರೋಧ

| Published : Oct 21 2024, 12:45 AM IST

ಸಾರಾಂಶ

ಹಬ್ಬ ಹರಿದಿನಗಳು, ರಾಜಕೀಯ ಕಾರ್ಯಕ್ರಮ ಅಥವಾ ಜಾತ್ರೆಗಳ ಸಮಯದಲ್ಲಿ ಗುಡಿಬಂಡೆಗೆ ಬರಬೇಕಾದ ಬಸ್ ಗಳನ್ನು ರದ್ದುಪಡಿಸಿ ಅಲ್ಲಿಗೆ ಕಳುಹಿಸಿ ಬಿಡುತ್ತಾರೆ. ಇದರಿಂದ ಪ್ರತಿನಿತ್ಯ ಸಂಚಾರ ಮಾಡುವ ಗುಡಿಬಂಡೆ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಇದೀಗ ಅನೇಕ ಬಸ್‌ ಮಾರ್ಗಗಳನ್ನು ರದ್ದುಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಹಬ್ಬಗಳು ಸೇರಿದಂತೆ ಕೆಲವೊಮ್ಮೆ ಗುಡಿಬಂಡೆಗೆ ಬರಬೇಕಾದ ಕೆಎಸ್ಸಾರ್ಟಿಸಿ ಬಸ್ಸುಗಳನ್ನು ಏಕಾಏಕಿ ನಿಲ್ಲಿಸಲಾಗುತ್ತದೆ, ಇದರಿಂದಾಗಿ ತಾಲೂಕಿನ ಜನತೆ ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ಎಲ್ಲ ಮಾರ್ಗಗಳಲ್ಲೂ ಬಸ್ಸು ಸಂಚಾರ ಏರ್ಪಡಿಸುವಂತೆ ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆ ಒತ್ತಾಯಿಸಿದೆ.

ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ಗುಡಿಬಂಡೆ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆ ವತಿಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮಾರ್ಗ ಅನುಸೂಚಿಗಳು ಹಾಗೂ ಬಸ್ ಡಿಪೋ ನಿರ್ಮಾಣದ ಕುರಿತು ಸಭೆ ಕರೆಯಲಾಗಿತ್ತು. ಸಭೆಯಲ್ಲಿ ವರ್ತಕರ ಸಂಘದ ಕಾರ್ಯದರ್ಶಿ ಜಿ.ಲಕ್ಷ್ಮೀಪತಿ ಮಾತನಾಡಿ, ಗುಡಿಬಂಡೆಯನ್ನು ಸಾರಿಗೆ ಸಂಸ್ಥೆ ನಿರ್ಲಕ್ಷ್ಯತೆಯಿಂದ ಕಾಣುತ್ತದೆ ಎಂದು ಆರೋಪಿಸಿದರು.

ವಿಶೇಷ ದಿನಗಳಲ್ಲಿ ಬಸ್ಸು ರದ್ದು

ಹಬ್ಬ ಹರಿದಿನಗಳು, ರಾಜಕೀಯ ಕಾರ್ಯಕ್ರಮ ಅಥವಾ ಜಾತ್ರೆಗಳ ಸಮಯದಲ್ಲಿ ಗುಡಿಬಂಡೆಗೆ ಬರಬೇಕಾದ ಬಸ್ ಗಳನ್ನು ರದ್ದುಪಡಿಸಿ ಅಲ್ಲಿಗೆ ಕಳುಹಿಸಿ ಬಿಡುತ್ತಾರೆ. ಇದರಿಂದ ಪ್ರತಿನಿತ್ಯ ಸಂಚಾರ ಮಾಡುವ ಗುಡಿಬಂಡೆ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಇದೀಗ ಅನೇಕ ಬಸ್‌ ಮಾರ್ಗಗಳನ್ನು ರದ್ದುಪಡಿಸಿದ್ದಾರೆ. ಇದನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಬಳಿಕ ಸಾರಿಗೆ ಘಟಕ ಸ್ಥಾಪನಾ ಹೋರಾಟ ವೇದಿಕೆಯ ಜಿ.ವಿ.ಗಂಗಪ್ಪ ಮಾತನಾಡಿ, ವೇದಿಕೆ ವತಿಯಿಂದ ನವೆಂಬರ್ 23 ರಂದು ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ಗುಡಿಬಂಡೆ ಬಸ್ ನಿಲ್ದಾಣದಿಂದ ಎಲ್ಲ ಬಸ್‌ ಮಾರ್ಗಗಳನ್ನು ಕಾರ್ಯಾಚರಣೆ ಮಾಡಲು ಒತ್ತಾಯಿಸಲಾಗುವುದು ಎಂದರು.

ಈ ವೇಳೆ ಕರವೇ ಶ್ರೀನಿವಾಸ್ ಯಾದವ್, ನರೇಂದ್ರ, ಜೆಡಿಎಸ್ ಮುಖಂಡ ಶ್ರೀನಿವಾಸ್, ಮುಖಂಡರಾದ ಗು.ನ.ನಾಗೇಂದ್ರ, ಎಂ.ಸಿ.ಚಿಕ್ಕನರಸಿಂಹಪ್ಪ, ಇಸ್ಕೂಲಪ್ಪ, ಆದಿನಾರಾಯಣ, ಶ್ರೀನಾಥ್, ಮೊಹಮದ್ ನಾಸೀರ್, ರಾಜೇಶ್, ಸಿ.ಕೃಷ್ಣಪ್ಪ ಸೇರಿದಂತೆ ಹಲವರು ಇದ್ದರು.