ಹುಲಿಕಲ್ಲು ಸರ್ಕಾರಿ ಶಾಲೆಯನ್ನೊಮ್ಮೆ ನೋಡಬನ್ನಿ!

| Published : Oct 21 2024, 12:45 AM IST

ಸಾರಾಂಶ

ಕುದೂರು: ಆಗಲೋ ಈಗಲೋ ಮುರಿದು ಬೀಳುವ ಕಟ್ಟಡ, ಶಿಕ್ಷಕರು ಹಾಗೂ ಮೂಲಸೌಲಭ್ಯಗಳ ಕೊರತೆ ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಕಾಡುವ ಸಮಸ್ಯೆ. ಆದರೆ, ಇಲ್ಲೊಂದು ಸರ್ಕಾರಿ ಶಾಲೆ ನಂದನವನದಂತೆ ಮಕ್ಕಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಸುಂದರ ವಾತಾವರಣ ರೂಪುಗೊಂಡಿದೆ.

ಕುದೂರು: ಆಗಲೋ ಈಗಲೋ ಮುರಿದು ಬೀಳುವ ಕಟ್ಟಡ, ಶಿಕ್ಷಕರು ಹಾಗೂ ಮೂಲಸೌಲಭ್ಯಗಳ ಕೊರತೆ ಸಾಮಾನ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಕಾಡುವ ಸಮಸ್ಯೆ. ಆದರೆ, ಇಲ್ಲೊಂದು ಸರ್ಕಾರಿ ಶಾಲೆ ನಂದನವನದಂತೆ ಮಕ್ಕಳಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿ ಸುಂದರ ವಾತಾವರಣ ರೂಪುಗೊಂಡಿದೆ.

ಮಾಗಡಿ ತಾಲೂಕಿನ ಹುಲಿಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸುಂದರ ಪರಿಸರ ರೂಪಿಸಿ ಸರ್ಕಾರಿ ಶಾಲೆಯನ್ನು ಜನರು ತಿರುಗಿ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕನವರ ಮನೆಗೆ ಹೊಂದಿಕೊಂಡಂತಿರುವ ಶಾಲೆಗೆ ತಿಮ್ಕಕ್ಕ ಹಾಕಿರುವ ಸಾಲುಮರಗಳ ನಡುವೆಯೇ ಹೋಗಬೇಕು. ಹೊರಗೆ ಸಾಲುಮರಗಳಾದರೆ ಶಾಲೆಯ ಒಳಗೆ ಮಲೆನಾಡಿನ ಅನುಭವ ನೀಡುವ ಗಿಡಮರಗಳು, ಹೂಗಿಡಗಳು, ಕಣ್ಣು ಹಾಯಿಸಿದೆಲ್ಲಾ ಹಸಿರಿನಿಂದ ಕಂಗೊಳಿಸುತ್ತಾ ಎಲ್ಲರನ್ನು ಆಕರ್ಷಿಸುತ್ತಿದೆ.

1ರಿಂದ 7ನೇ ತರಗತಿವರೆಗೆ 175 ವಿದ್ಯಾರ್ಥಿಗಳಿರುವ ಈ ಶಾಲೆ ಆಂಗ್ಲ ಮತ್ತು ಕನ್ನಡ ಎರಡು ಮಾಧ್ಯಮಗಳಿವೆ. ಈ ಶೈಕ್ಷಣಿಕ ವರ್ಷದಲ್ಲಿ ಎಲ್ ಕೆಜಿ ವಿಭಾಗ ತೆರೆದಿದ್ದು 45 ಮಕ್ಕಳು ಸೇರ್ಪಡೆಯಾಗಿದ್ದಾರೆ.

ಮಕ್ಕಳಿಗಾಗಿ ಬಸ್ ಸೌಲಭ್ಯ: ಹುಲಿಕಲ್ಲು ಸರ್ಕಾರಿ ಶಾಲೆಯ ಎಸ್ಡಿಎಂಸಿ ಸದಸ್ಯ ಕೃಷ್ಣಮೂರ್ತಿ 4 ಲಕ್ಷ ರು. ವೆಚ್ಚದಲ್ಲಿ ಮಕ್ಕಳಿಗೆ ಬಸ್ ಸೌಲಭ್ಯ ಕಲ್ಪಿಸಿದ್ದಾಎರ. ಇದರಿಂದ ಹುಲಿಕಲ್ಲು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು ಶಾಲೆಗೆ ಬಂದು ಶಿಕ್ಷಣ ಪಡೆಯಲು ಅನುಕೂಲವಾಗಿದೆ.

ಶಾಲೆಯ ಗೋಡೆಗಳೂ ಪಾಠ ಮಾಡುತ್ತವೆ:

ದಾನಿಗಳ ಸಹಾಯದಿಂದ ಶಾಲೆಯ ಹೊರಗೆ ಮತ್ತು ಒಳಗಿನ ಗೋಡೆಗಳ ಮೇಲೆ ಮಕ್ಕಳಿಗೆ ಉಪಯೋಗವಾಗುವಂತಹ ಬರಹಗಳನ್ನು ಬರೆಯಲಾಗಿದೆ. ಸುಂದರ ಚಿತ್ರಗಳನ್ನು ಬರೆದು ಅದರ ಕೆಳಗೆ ಟಿಪ್ಪಣೆ ಬರೆಯಲಾಗಿದೆ. ಇದರಿಂದಾಗಿ ಮಕ್ಕಳು ತರಗತಿಯಿಂದ ಹೊರಗೆ ಬಂದಾಗಲೂ ಗೋಡೆ ಮೇಲಿನ ಬರಹಗಳನ್ನು ಓದುವುದು ನೋಡಲು ಖುಷಿಯೆನಿಸುತ್ತೆದೆ. ಕ್ರಿಯಾಶೀಲತೆ ಇದ್ದಲ್ಲಿ ಸರ್ಕಾರಿ ಶಾಲೆಗಳಿಗೂ ಮಕ್ಕಳನ್ನು ಆಕರ್ಷಿಸಬಹುದು ಎನ್ನಲು ಹುಲಿಕಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆ ಉತ್ತಮ ಉದಾಹರಣೆ.

ಪಿಎಂಶ್ರೀ ಪ್ರಶಸ್ತಿಗೆ ಶಾಲೆ ಆಯ್ಕೆ:

ಪ್ರಧಾನಮಂತ್ರಿ ಅಭಿವೃದ್ಧಿ ಯೋಜನೆಯ ಪಿಎಂಶ್ರೀ ಪ್ರಶಸ್ತಿಗೆ ಹುಲಿಕಲ್ಲಿನ ಸರ್ಕಾರಿ ಶಾಲೆ ಆಯ್ಕೆಯಾಗಿದೆ. ಈ ಪ್ರಶಸ್ತಿಗೆ ಆಯ್ಕೆಯಾದ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಮಂತ್ರಿ ಯೋಜನೆಯಲ್ಲಿ ಹಣ ಬಿಡುಗಡೆಯಾಗುತ್ತದೆ. ಇದರಡಿ ಉದ್ಯೋಗ ತರಬೇತಿ ಕೊಡುವ ಅಂಶವನ್ನು ಒಳಗೊಂಡಿದೆ. ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತದೆ. ರಾಜ್ಯದಲ್ಲಿ ಒಟ್ಟು 706 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಾಗಡಿ ತಾಲೂಕಿನಿಂದ ಒಂದು ಶಾಲೆಯನ್ನು ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಹುಲಿಕಲ್ಲಿನ ಶಾಲೆ ಆಯ್ಕೆಯಾಗಿದೆ.

ಮಕ್ಕಳಿಂದಲೇ ತರಕಾರಿ ಬೆಳೆ:

ಮಕ್ಕಳ ಬಿಸಿಯೂಟಕ್ಕೆ ಬೇಕಾಗುವ ಸೊಪ್ಪು, ತರಕಾರಿಗಳನ್ನು ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳೇ ಬೆಳೆಯುತ್ತಾರೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಮುಗಿಲು ಮುಟ್ಟಿದ್ದರೂ ಈ ಶಾಲೆಯಲ್ಲಿ ಮಾತ್ರ ಬಿಸಿಯೂಟಕ್ಕೆ ಬಗೆಬಗೆಯ ತರಕಾರಿಗಳನ್ನು ಮಕ್ಕಳು ಸವಿಯುತ್ತಾರೆ. ಜೊತೆಗೆ ಶಾಲೆಯ ಅಂಗಳದಲ್ಲಿರುವ ಹಲಸು, ಪಪ್ಪಾಯಿ ಇತ್ಯಾದಿ ಹಣ್ಣು ಕೂಡ ಮಕ್ಕಳಿಗೆ ನೀಡಲಾಗುವುದು.

ಮಕ್ಕಳಿಗೆ ಕುಡಿಯಲು ಶುದ್ಧ ನೀರಿನ ಘಟಕ, ಅಚ್ಚುಕಟ್ಟುತನದಿಂದ ಕೂಡಿದ ಅಡುಗೆ ಮನೆ, ಕೂರಲು ಡೆಸ್ಕ್ ಗಳು, ಶಾಸಗಿ ಶಾಲೆಗೆ ಸಡ್ಡು ಹೊಡೆಯುವಂತೆ ಯೂನಿಫಾರಂ, ಸುಸಜ್ಜಿತ ಶೌಚಾಲಯ ಸೌಲಭ್ಯಗಳನ್ನು ಒಳಗೊಂಡಿದ್ದು ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕ್ರೀಡಾ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಮುನ್ನಡೆ:

ಶಾಲೆಯಲ್ಲಿ ದೈಹಿಕ ಶಿಕ್ಷಕ ಕೆ.ಪಿ.ವೆಂಕಟೇಶ್ ಪರಿಶ್ರಮದಿಂದ ಶಾಲೆಯ ಮಕ್ಕಳು ಕ್ರೀಡೆಗಳಲ್ಲಿ ರಾಜ್ಯಮಟ್ಟದವರೆಗೂ ಪ್ರತಿನಿಧಿಸಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳನ್ನು ನೋಡಲು ಸಾವಿರಾರು ಜನರು ಸೇರುತ್ತಾರೆ. ಶಾಲೆಯ ಮುಖ್ಯೋಪಾಧ್ಯಾಯ ಉಮಾಶಂಕರ್ ಅವರಿಗೆ ಅತ್ಯುತ್ತಮ ಶಾಲೆಯ ಮುಖ್ಯೋಪಾಧ್ಯಾಯ ಎಂಬ ಜಿಲ್ಲಾ ಪ್ರಶಸ್ತಿ ಲಭಿಸಿದೆ.

ಕೋಟ್ ....................

ಮಾಗಡಿ ಕ್ಷೇತ್ರದ ಎಲ್ಲಾ ಶಾಲೆಗಳು ಹುಲಿಕಲ್ಲು ಸರ್ಕಾರಿ ಶಾಲೆಯಂತೆಯೇ ರೂಪುಗೊಳ್ಳಬೇಕು. ಅದಕ್ಕಾಗಿ ಎಲ್ಲಾ ಶಾಲೆಯ ಶಿಕ್ಷಕರಲ್ಲಿ ನನ್ನದೊಂದು ಮನವಿಯೇನೆಂದರೆ, ಸರ್ಕಾರದಿಂದ ಯಾವುದೇ ನೆರವು ಬೇಕಾದರೂ ಕೇಳಿ ಪಡೆಯಿರಿ. ಸರ್ಕಾರಿ ಶಾಲೆಗಳನ್ನು ಮತ್ತೆ ಕಂಗೊಳಿಸುವಂತೆ ಮಾಡಲು ಎಲ್ಲರೂ ಕೈಜೋಡಿಸಬೇಕು. ಹುಲಿಕಲ್ಲು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ.

- ಎಚ್.ಸಿ. ಬಾಲಕೃಷ್ಣ, ಶಾಸಕರು, ಮಾಗಡಿ ಕ್ಷೇತ್ರ

ಕೋಟ್ ............

ನನ್ನೂರಿನಲ್ಲಿ ಇಂತಹ ಶಾಲೆ ಇರುವುದು ನನಗೆ ತುಂಬಾ ಖುಷಿಯ ವಿಚಾರ. ಮರಗಡಿಗಳನ್ನು ನೆಟ್ಟು ಪೋಷಿಸಬೇಕು ಎಂದು ಅಕ್ಷರ ಕಲಿಸುವುದರ ಜೊತೆಗೆ ಮಕ್ಕಳಿಗೆ ಕಲಿಸುತ್ತಿರುವುದು ಉತ್ತಮ ಬೆಳವಣಿಗೆ. ಈ ಬಾರಿ ಊರಿಗೆ ಹೋದಾಗ ಶಾಲೆಗೆ ಹೋಗಿ ಮಕ್ಕಳನ್ನು, ಶಿಕ್ಷಕರನ್ನು ಮಾತಾಡಿಸಿ ಬರುತ್ತೇನೆ.

-ಸಾಲುಮರದ ತಿಮ್ಮಕ್ಕ, ಪದ್ಮಶ್ರೀ ಪುರಸ್ಕೃತೆ

ಕೋಟ್ ...............

ಹುಲಿಕಲ್ಲಿನ ಶಾಲೆಗೆ ಹೋಗುವುದೆಂದರೆ ಶಾಂತಿನಿಕೇತನಕ್ಕೆ ಹೋದಂತೆ. ಇಲ್ಲಿನ ಮುಖ್ಯ ಶಿಕ್ಷಕರು ಎಲ್ಲಾ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದು ಶಾಲೆಯ ಅಭಿವೃದ್ಧಿಗೆ ಕಾರಣ. ಶಾಲೆಯ ಪ್ರಗತಿಗೆ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮತ್ತು ಶಿಕ್ಷಾಣಾಧಿಕಾರಿಗಳ ಮಾರ್ಗದರ್ಶನ ಮತ್ತು ಸಹಕಾರ ನೀಡುತ್ತಿರುವುದಕ್ಕೆ ಇದೊಂದು ಉದಾಹರಣೆ.

- ಗಂಗಾಧರ್, ಶಿಕ್ಷಣ ಸಂಯೋಜನಕರು, ಮಾಗಡಿ

20ಕೆಆರ್ ಎಂಎನ್ 1,2,3,4,5,6.ಜೆಪಿಜಿ

ಹುಲಿಕಲ್ಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸುಂದರ ಪರಿಸರ.