ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿಗೆ ಆದೇಶ

| Published : May 15 2025, 01:44 AM IST

ಸಾರಾಂಶ

2024-25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಸೂರ್ಯಕಾಂತಿ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿ ರೈತರಿಗೆ ತೊಂದರೆಯಾಗಿತ್ತು. ಆದರೆ ಈಗ ಸರ್ಕಾರ ಸೂರ್ಯಕಾಂತಿ ಖರೀದಿಗೆ ಆದೇಶ ಮಾಡಿದೆ. ಈ ಬೆಂಬಲ ಬೆಲೆಯ ಸದುಪಯೋಗ ರೈತ ಸಮುದಾಯ ಪಡೆದುಕೊಳ್ಳಬೇಕೆಂದು ಮಾಜಿ ಶಾಸಕ ಬಿ.ಆರ್. ಯಾವಗಲ್ ಹೇಳಿದರು.

ನರಗುಂದ: 2024-25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಸೂರ್ಯಕಾಂತಿ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿ ರೈತರಿಗೆ ತೊಂದರೆಯಾಗಿತ್ತು. ಆದರೆ ಈಗ ಸರ್ಕಾರ ಸೂರ್ಯಕಾಂತಿ ಖರೀದಿಗೆ ಆದೇಶ ಮಾಡಿದೆ. ಈ ಬೆಂಬಲ ಬೆಲೆಯ ಸದುಪಯೋಗ ರೈತ ಸಮುದಾಯ ಪಡೆದುಕೊಳ್ಳಬೇಕೆಂದು ಮಾಜಿ ಶಾಸಕ ಬಿ.ಆರ್. ಯಾವಗಲ್ ಹೇಳಿದರು.

ಅವರು ಬುಧವಾರ ಪಟ್ಟಣದ ಆಯಿಲ್ ಮಿಲ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಹಿಂದೆ ರೈತರು ಬೆಳೆದ ಸೂರ್ಯಕಾಂತಿ ಬೆಳೆಗೆ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲ ಸರ್ಕಾರ ಮುಂಗಾರು ಹಂಗಾಮಿನ ಸೂರ್ಯಕಾಂತಿ ಬೆಳೆಗೆ ಅಷ್ಟೇ ಅವಕಾಶ ನೀಡುತ್ತಿತ್ತು. ಆದರೆ, ಪ್ರಸಕ್ತ ವರ್ಷ ಈ ತಾಲೂಕಿನ ರೈತರು ಹಿಂಗಾರು ಹಂಗಾಮಿನಲ್ಲಿ ಹೆಚ್ಚು ಸೂರ್ಯಕಾಂತಿ ಬೆಲೆ ಬೆಳೆದಿದ್ದೇವೆ, ಆದರೆ ಮಾರುಕಟ್ಟೆಯಲ್ಲಿ ಬೆಲೆ ದಿಢೀರ್ ಕುಸಿತವಾಗಿದೆ. ಹಾಗಾಗಿ ಸರ್ಕಾರದ ಮಟ್ಟದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಸೂರ್ಯಕಾಂತಿ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಪ್ರಾರಂಭ ಮಾಡಿಸಬೇಕೆಂದು ರೈತರು ಮನವಿ ನೀಡಿದ್ದರು. ಆ ಪ್ರಕಾರ ನಾನು ಮತ್ತು ಕೆಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಸ್. ಪಾಟೀಲರು ಸೇರಿಕೊಂಡು ಕೃಷಿ ಅಧಿಕಾರಿ ಹಾಗೂ ತಹಸೀಲ್ದಾರ್ ಜೊತೆ ಮಾತನಾಡಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪತ್ರ ಬರೆಯಿಸಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ಕಳೆದ ಹಲವು ದಿನಗಳಿಂದ ಸೂರ್ಯಕಾಂತಿ ಬೆಳೆ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ಕೇಂದ್ರ ಪ್ರಾರಂಭ ಮಾಡಬೇಕೆಂದು ಒತ್ತಾಯ ಮಾಡಿದ್ದಕ್ಕೆ ಸದ್ಯ ಸರ್ಕಾರ ಈ ತಾಲೂಕಿನಲ್ಲಿ ಬೆಳೆದ ರೈತರ ಸೂರ್ಯಕಾಂತಿಯನ್ನು ಜೂನ್‌ ತಿಂಗಳವರೆಗೆ ಪ್ರತಿ ಒಬ್ಬ ರೈತನಿಂದ 15 ಕ್ವಿಂಟಲ್‌ದಂತೆ ಪ್ರತಿ 1 ಕ್ವಿಂಟಲ್‌ಗೆ 7280 ರು.ಗಳ ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮತಿ ನೀಡಿದೆ. ಈ ಖರೀದಿ ಪ್ರಕ್ರಿಯೆ ಎಣ್ಣಿ ಬೆಳೆಗಾರರ ಸಂಘಗಳಿಗೆ ವಹಿಸಲಾಗಿದೆ ಎಂದರು.

ಅಭಿವೃದ್ಧಿಯಲ್ಲಿ ಹಿನ್ನಡೆ: ನಮ್ಮ ತಾಲೂಕಿನ ಸುತ್ತ ಮುತ್ತಗಳ ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ನಮ್ಮ ತಾಲೂಕಿನ ಶಾಸಕರು ಸರ್ಕಾರದಿಂದ ಅನುದಾನ ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡುವಲ್ಲಿ ಹಿಂದೆ ಇದ್ದಾರೆ. ನಮ್ಮ ಕ್ಷೇತ್ರ ಶಾಸಕರಿಗೆ ಈ ಸರ್ಕಾರದ ಕೆಲವು ಸಚಿವರ ಜೊತೆ ಒಳ್ಳೆಯ ಸ್ನೇಹವಿದೆ, ಅಂಥವರ ಮೂಲಕ ಸರ್ಕಾರದಿಂದ ಅನುದಾನ ತರಿಸಿಕೊಂಡು ಈ ಕ್ಷೇತ್ರ ಅಭಿವೃದ್ಧಿ ಮಾಡಲು ಮುಂದಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಸ್. ಪಾಟೀಲ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿವೇಕ ಯಾವಗಲ್, ಗುರುಪಾದಪ್ಪ ಕುರುಹಟ್ಟಿ, ಪ್ರವೀಣ ಯಾವಗಲ್, ಟಿ.ಬಿ. ಶಿರಿಯಪ್ಪಗೌಡ್ರ, ಬಸಪ್ಪ ನರಗುಂದ, ಎಂ.ಬಿ. ಅರಹುಣಿಸಿ, ಸುಭಾಸಗೌಡ ಖಾನಪ್ಪಗೌಡ್ರ, ಶಂಕರಗೌಡ ಪಾಟೀಲ, ವಿಷ್ಣು ಸಾಠೆ, ಹನಮಂತ ರಾಮಣ್ಣವರ, ಪ್ರಕಾಶ ಹಡಗಲಿ, ಮಾರುತಿ ತಳವಾರ ಸೇರಿದಂತೆ ಮುಂತಾದವರು ಇದ್ದರು.