ಸಾರಾಂಶ
ಭಟ್ಕಳ: ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ (ಐಟಾ) ಕರ್ನಾಟಕದ ನಿಯೋಗವು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶಿರಸಿಯ ಸರ್ಕಾರಿ ಉರ್ದು ಮತ್ತು ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಶಗುಪ್ತಾ ಅಂಜುಮ್ ಅವರನ್ನು ಅವರ ಮನೆಯಲ್ಲಿ ಸನ್ಮಾನಿಸಿತು.
ಈ ಸಂದರ್ಭದಲ್ಲಿ ₹ 10,000 ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.ಗೌರವ ಸ್ವೀಕರಿಸಿ ಮಾತನಾಡಿದ ಶಗುಪ್ತಾ ಅಂಜುಮ್, ನನ್ನ ಮನೆಯ ಆರ್ಥಿಕ ದುಸ್ಥಿತಿಯು ಓದಿಗೆ ಎಂದಿಗೂ ಅಡಚಣೆಯಾಗಿಲ್ಲ. ಹಣವಿದ್ದವರಿಗೆ ಮಾತ್ರ ಶಿಕ್ಷಣ ಸಾಧ್ಯ ಎಂಬುದು ಸುಳ್ಳು ಎಂದು ನಾನು ಸಾಬೀತುಪಡಿಸಿದ್ದೇನೆ. ನನ್ನ ಪಾಲಕರು ಎಷ್ಟೇ ಕಷ್ಟದಲ್ಲಿದ್ದರೂ ಶಿಕ್ಷಣದಿಂದ ನನ್ನನ್ನು ವಂಚಿತರನ್ನಾಗಿ ಮಾಡಿಲ್ಲ. ಸರ್ಕಾರಿ ಶಾಲೆಯಲ್ಲಿ ಎಲ್ಲ ಸೌಲಭ್ಯಗಳಿವೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗಿಂತ ಕಡಿಮೆಯೇನೂ ಅಲ್ಲ ಎಂದು ಹೇಳಿದರು.
ಐಟಾದ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಮಾತನಾಡಿ, ಬಿಹಾರ ಮೂಲದ ಶಗುಪ್ತಾ, ಹಿಂದಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಕರ್ನಾಟಕಕ್ಕೆ ಬಂದು ಕನ್ನಡ ಕಲಿತು, ದ್ವಿತೀಯ ಭಾಷೆಯಾಗಿ ಕನ್ನಡದಲ್ಲಿ ಶೇ.100 ಅಂಕಗಳನ್ನು ಗಳಿಸಿ, ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.ಇದು ಕರ್ನಾಟಕ ಮತ್ತು ಕನ್ನಡಕ್ಕೆ ಗೌರವ ತಂದಿದೆ. ಐಟಾದಿಂದ ಶಗುಪ್ತಾ ಅವರ ಶೈಕ್ಷಣಿಕ ಭವಿಷ್ಯಕ್ಕೆ ಅಗತ್ಯ ಮಾರ್ಗದರ್ಶನ ನೀಡಲು ಸಿದ್ಧರಿದ್ದೇವೆ ಎಂದರು.ರಾಜ್ಯ ಕಾರ್ಯದರ್ಶಿ ಯಾಸೀನ್ ಭೀಕ್ಬಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಇಸ್ಮಾಯಿಲ್ ಮುಜಾವರ್, ಕುಮಟಾ ಶಾಖೆಯ ಅಧ್ಯಕ್ಷ ಶಫೀ ಮುಲ್ಲಾ, ಜಮಾತ್-ಎ-ಇಸ್ಲಾಮಿ ಹಿಂದ್‌ನ ಜಿಲ್ಲಾ ಸಂಚಾಲಕ ಅಬ್ದುಲ್ ಮನ್ನಾನ್ ಉಪಸ್ಥಿತರಿದ್ದರು.
ಐಟಾದಿಂದ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶಿರಸಿಯ ಶಗುಪ್ತಾ ಅಂಜುಮ್ ಅವರನ್ನು ಸನ್ಮಾನಿಸಲಾಯಿತು.