ಸಾರಾಂಶ
ಲೋಕೇಶ್ ವಿ.ನಾಯಕ ಅವರ ವಾಲ್ಮೀಕಿ (ನಾಯಕ) ಜಾತಿ ಪ್ರಮಾಣಪತ್ರ ರದ್ದು ಮಾಡಿ ಬೆಂಗಳೂರು ಉತ್ತರ ಉಪವಿಭಾಗದ ಎಸಿ ಪ್ರಮೋದ್ ಎಲ್. ಪಾಟೀಲ್ ಜು.2ರಂದು ಆದೇಶ ಹೊರಡಿಸಿದ್ದಾರೆ.
ಕೂಡ್ಲಿಗಿ: ಕಳೆದ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿದ್ದ ಲೋಕೇಶ್ ವಿ.ನಾಯಕ ಅವರ ವಾಲ್ಮೀಕಿ (ನಾಯಕ) ಜಾತಿ ಪ್ರಮಾಣಪತ್ರ ರದ್ದು ಮಾಡಿ ಬೆಂಗಳೂರು ಉತ್ತರ ಉಪವಿಭಾಗದ ಎಸಿ ಪ್ರಮೋದ್ ಎಲ್. ಪಾಟೀಲ್ ಜು.2ರಂದು ಆದೇಶ ಹೊರಡಿಸಿದ್ದಾರೆ. ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದು ಬಿಜೆಪಿ ರಾಜ್ಯ ಎಸ್.ಟಿ.ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಹೇಳಿದರು.ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಲೋಕೇಶ್ ವಿ.ನಾಯಕ ವಾಲ್ಮೀಕಿ ಅಲ್ಲ; ಆಂಧ್ರದ ಕಮ್ಮವಾರಿ ನಾಯ್ಡು ಜನಾಂಗಕ್ಕೆ ಸೇರಿದ್ದಾರೆ. ಆಂಧ್ರದಿಂದ ಬೆಂಗಳೂರಿಗೆ ಬಂದಾಗ ತಾನು ಓದಿದ ಶಾಲೆಗಳ ದಾಖಲಾತಿಗಳಲ್ಲಿ ವಾಲ್ಮೀಕಿ ನಾಯಕ ಎಂದು ತಿದ್ದುಪಡಿ ಮಾಡಿಸಿದ್ದು ಈ ಮೂಲಕ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದರು.
ಲೋಕೇಶ್ ನಾಯಕ ವಾಲ್ಮೀಕಿ ಜಾತಿ ಎಂದು ಸುಳ್ಳು ಹೇಳಿ ತಳಸಮುದಾಯದ ಸೌಲಭ್ಯಗಳನ್ನು ಪಡೆದು ವಾಲ್ಮೀಕಿ ಜನಾಂಗಕ್ಕೆ ದ್ರೋಹ ಎಸಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದು ಬಿಜೆಪಿ ಟಿಕೆಟ್ ಪಡೆದು ಕೂಡ್ಲಿಗಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸ್ಥಳೀಯ ಬಿಜೆಪಿ ಅಭ್ಯರ್ಥಿಯಾಗಿ ನನಗೆ ಟಿಕೆಟ್ ತಪ್ಪಿಸಿ ತಾನೇ ನಿಜವಾದ ವಾಲ್ಮೀಕಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಅತಿ ಹೀನಾಯವಾಗಿ ಸೋತರು. ಬೆಂಗಳೂರಿನಲ್ಲಿ 2013ರಲ್ಲಿ ನಕಲಿ ಜಾತಿ ಪ್ರಮಾಣಪತ್ರ ನೀಡಿ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಅನೇಕ ಸವಲತ್ತುಗಳನ್ನು ಪಡೆದಿದ್ದು, ಬೆಂಗಳೂರಿನಲ್ಲಿ ವಾಲ್ಮೀಕಿ ಜಾತಿ ಕೋಟಾದಲ್ಲಿ ಗ್ಯಾಸ್ ಏಜೆನ್ಸಿ ಪಡೆದು, ಇದೇ ಕೋಟಾದಲ್ಲಿ ಕೈಗಾರಿಕಾ ನಿವೇಶನ ಪಡೆದು ಲಕ್ಷಾಂತರ ರುಪಾಯಿ ಆದಾಯ ಪಡೆದು ಆರ್ಥಿಕವಾಗಿ ಸಬಲರಾಗಿ ವಾಲ್ಮೀಕಿ ಜಾತಿಗೆ ಮೋಸ ಮಾಡಿದ್ದಾರೆ ಎಂದು ದೂರಿದರು.ಅವರು ಈಗ ಪ್ರಸ್ತುತ ಬೆಂಗಳೂರಿನಲ್ಲಿ ಮತ್ತೆ ನಕಲಿ ಜಾತಿ ಪ್ರಮಾಣಪತ್ರದಡಿ ಕಾರ್ಪೊರೇಟರ್ ಸದಸ್ಯನಾಗಲು ಲಾಬಿ ನಡೆಸುತ್ತಿರುವುದು ತಿಳಿದುಬಂದಿದೆ ಎಂದು ಬಂಗಾರು ಹನುಮಂತು ಆದೇಶ ಪ್ರತಿ ಹಿಡಿದು ಆರೋಪಿಸಿದರು.
ಬಿಜೆಪಿ ಕೂಡ್ಲಿಗಿ ಮಂಡಲ ಅಧ್ಯಕ್ಷ ಬಣವಿಕಲ್ಲು ರಾಜು, ಮಾಜಿ ಅಧ್ಯಕ್ಷರಾದ ಎಂ.ಬಿ.ಅಯ್ಯನಹಳ್ಳಿ ನಾಗಭೂಷಣ, ಕೆ.ಎಚ್. ವೀರನಗೌಡ, ಇಮಡಾಪುರ ಚನ್ನಪ್ಪ, ಮುಖಂಡರಾದ ಸೂರ್ಯಪಾಪಾಣ್ಣ, ಸೂಲದಹಳ್ಳಿ ರಾಜಣ್ಣ, ಎನ್.ನರಸಿಂಹ, ಪಪಂ ಮಾಜಿ ಅಧ್ಯಕ್ಷ ಪಿ.ರಜನೀಕಾಂತ್, ಕಲ್ಲೇಶ್ ಗೌಡ, ಕೆ.ಕೆ. ಹಟ್ಟಿ ವೀರಣ್ಣ, ಎಸ್.ದುರುಗೇಶ್, ಮಂಜುನಾಥ ನಾಯಕ ಇದ್ದರು.