ಸಾರಾಂಶ
ನಿಮ್ಮ ಮನೆಗಳ ಮುಂದೆ ಕಸ ವಿಲೇವಾರಿ ವಾಹನ ಬಂದಾಗ ಕಸವನ್ನು ಪೌರಕಾರ್ಮಿಕರಿಗೆ ಒಪ್ಪಿಸುವುದಕ್ಕೂ ಮುನ್ನ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಕೊಡುವಂತೆ ನಿಮ್ಮ ಮನೆಯಲ್ಲಿನ ಸದಸ್ಯರಿಗೆ ನೀವು ತಿಳಿ ಹೇಳಬೇಕು. ನಗರವನ್ನು ಕಸ ಮುಕ್ತವಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಕೆಲಸಕ್ಕೆ ಯುವಕರು ಸಹಕರಿಸಬೇಕು ಮತ್ತು ನಿಮ್ಮ ಸುತ್ತಮುತ್ತಿನ ಜನರಿಗೆ ಅರಿವು ಮೂಡಿಸಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ರಮ್ಮನಹಳ್ಳಿ ಪಟ್ಟಣ ಪಂಚಾಯತಿ ಮತ್ತು ಸಂತ ಜೋಸೆಫರ ಮಹಿಳಾ ಕಾಲೇಜು ಸಂಯುಕ್ತವಾಗಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು "ನಮ್ಮ ನಡಿಗೆ ಸ್ವಚ್ಛತೆಯ ಕಡೆಗೆ " ಅಭಿಯಾನವನ್ನು ಶುಕ್ರವಾರ ಆಯೋಜಿಸಿತ್ತು.ಈ ಅಭಿಯಾನ ಉದ್ಘಾಟಿಸಿದ ರಮ್ಮನಹಳ್ಳಿ ಪಪಂ ಕಿರಿಯ ಆರೋಗ್ಯಾಧಿಕಾರಿ ಅಣ್ಣೀಶಿ ಮಾತನಾಡಿ, ಇಂದು ನಾವು ನಮ್ಮ ನಮ್ಮ ಮನೆಗಳ ಸ್ವಚ್ಛತೆಯ ಕಡೆಗಷ್ಟೇ ಗಮನ ವಹಿಸುತ್ತಿದ್ದು, ನಮ್ಮ ಸುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸುವುದನ್ನು ಮರೆತಿದ್ದೇವೆ. ಪರಿಸರ ಸ್ವಚ್ಛ, ಶುದ್ಧವಾಗಿದ್ದರೆ ನಾವೆಲ್ಲರೂ ಆರೋಗ್ಯದಿಂದ ಇರುತ್ತೇವೆ ಎನ್ನುವ ಸತ್ಯವನ್ನು ಇನ್ನಾದರೂ ಅರಿಯಬೇಕಿದೆ ಎಂದರು.ನಿಮ್ಮ ಮನೆಗಳ ಮುಂದೆ ಕಸ ವಿಲೇವಾರಿ ವಾಹನ ಬಂದಾಗ ಕಸವನ್ನು ಪೌರಕಾರ್ಮಿಕರಿಗೆ ಒಪ್ಪಿಸುವುದಕ್ಕೂ ಮುನ್ನ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ಕೊಡುವಂತೆ ನಿಮ್ಮ ಮನೆಯಲ್ಲಿನ ಸದಸ್ಯರಿಗೆ ನೀವು ತಿಳಿ ಹೇಳಬೇಕು. ನಗರವನ್ನು ಕಸ ಮುಕ್ತವಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಕೆಲಸಕ್ಕೆ ಯುವಕರು ಸಹಕರಿಸಬೇಕು ಮತ್ತು ನಿಮ್ಮ ಸುತ್ತಮುತ್ತಿನ ಜನರಿಗೆ ಅರಿವು ಮೂಡಿಸಬೇಕು ಎಂದು ಅವರು ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೃಥ್ವಿ ಎಸ್. ಶಿರಹಟ್ಟಿ ಮಾತನಾಡಿ, ಇಂದು ನಾವೆಲ್ಲರು ತ್ಯಾಜ್ಯವಸ್ತುಗಳನ್ನ ಎಲ್ಲೆಂದರಲ್ಲಿ ಎಸೆದು, ನಗರದ ಸೌಂದರ್ಯವನ್ನು ಕೆಡಿಸುತ್ತಿರುವುದಷ್ಟೇ ಅಲ್ಲದೆ, ನಮ್ಮ ಪಾಲಿನ ಜವಾಬ್ದಾರಿಯನ್ನು ಮರೆತು ವರ್ತಿಸುತ್ತಿದ್ದೇವೆ. ಇಲ್ಲಿ ವಾಸಿಸುತ್ತಿರುವ ನಮಗೆ ಇಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಪರಿಸರವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಂಡು ಹೋಗಬೇಕಾದರೆ ಹೊಣೆಗಾರಿಕೆ ಇದೆ ಎಂದರು.ನಂತರ ಕನ್ನಡ ವರ್ಣಮಾಲೆಯಲ್ಲಿನ ಸ್ವರಾಕ್ಷರಗಳಾದ ಅ ದಿಂದ ಅಂ ವರ್ಣಗಳನ್ನು ಬಳಸಿ ಬರೆದ ಸ್ವಚ್ಛತೆಯ ಅರಿವು ಕುರಿತ ಸಂದೇಶಗಳಿರುವ ಫಲಕಗಳನ್ನು ವಿದ್ಯಾರ್ಥಿನಿಯರು ಪ್ರದರ್ಶಿಸಿ, ಸಂದೇಶಗಳನ್ನು ಓದುವ ಮೂಲಕ ಸ್ವಚ್ಛತೆ ಕುರಿತು ಅರಿವು ಮೂಡಿಸಿದರು. ಅಲ್ಲದೆ, ವಿದ್ಯಾರ್ಥಿನಿಯರೆ ಸ್ವಚ್ಛತೆ ಕುರಿತು ಪ್ರಮಾಣ ವಚನ ಭೋದಿಸಲಾಯಿತು.ಪಪಂ ಮುಖ್ಯಾಧಿಕಾರಿ ರವಿಕೀರ್ತಿ, ಸಿಬ್ಬಂದಿ ಚನ್ನನಾಯಕ, ಸೊಹೇಬ್, ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ನಗ್ಮಾ ಸುಲ್ತಾನ, ಸಹಾಯಕ ಪ್ರಾಧ್ಯಾಪಕರಾದ ಶೋಭಾ, ಪುಷ್ಪಾ, ಅವಂತಿ, ಎ.ಎಸ್. ಮಹೇಶ್ ಇದ್ದರು. ಉಮ್ಮಿ ಕುಲ್ಸಮ್ ನಿರೂಪಿಸಿದರು. ನಿಶಾತ್ ಷರೀಫ್ ಸ್ವಾಗತಿಸಿದರು. ಅಸ್ಮಾ ತಬಸುಮ್ ವಂದಿಸಿದರು.