ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ : ಭಾರಿ ವಾಹನ ಸಂಚಾರ ನಿರ್ಬಂಧ ತೆರವಿಗೆ ಒಕ್ಕೊರಲ ಆಗ್ರಹ

| N/A | Published : Feb 02 2025, 01:04 AM IST / Updated: Feb 02 2025, 01:17 PM IST

ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ : ಭಾರಿ ವಾಹನ ಸಂಚಾರ ನಿರ್ಬಂಧ ತೆರವಿಗೆ ಒಕ್ಕೊರಲ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿ-ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಹಾಕಿದ ನಿರ್ಬಂಧ ಸಡಿಲಿಸಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಒಕ್ಕೊರಲಿನ ಆಗ್ರಹ ಕೇಳಿಬಂದಿದೆ.

ಕಾರವಾರ: ಶಿರಸಿ -ಕುಮಟಾ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಹಾಕಿದ ನಿರ್ಬಂಧ ಸಡಿಲಿಸಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಒಕ್ಕೊರಲಿನ ಆಗ್ರಹ ಕೇಳಿಬಂದಿದೆ.

ಕುಮಟಾ ಶಿರಸಿ ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಯಾಗಿ ಉನ್ನತೀಕರಣವಾಗಲಿದೆ ಎಂದು ಟೆಂಡರ್ ಕರೆದಾಗಲೆ ರಾಜ್ಯ ಹೆದ್ದಾರಿಯ ನಿರ್ವಹಣೆ ಸ್ಥಗಿತಗೊಂಡಿತು. ಹೆದ್ದಾರಿ ಗಬ್ಬೆದ್ದುಹೋಯಿತು. 2018ರಲ್ಲಿ ಟೆಂಡರ್ ಆದರೂ ಕಾಮಗಾರಿ ಶುರುವಾಗಲಿಲ್ಲ. ಆನಂತರ ಅಲ್ಲೊಂದು ಇಲ್ಲೊಂದು ಕಡೆ ಕಾಮಗಾರಿ ಆರಂಭವಾಗಿ ಹೆದ್ದಾರಿಯಲ್ಲಿ ಸಂಚಾರವೇ ದುಸ್ತರವಾಯಿತು. ಹೀಗೆ ಆರು ವರ್ಷಗಳಾದರೂ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳದೆ ಪ್ರಯಾಣಿಕರು, ವಾಹನ ಸವಾರರು ಬವಣೆ ಅನುಭವಿಸುತ್ತಲೇ ಇದ್ದಾರೆ. ಈಗಂತೂ ಫೆ. 25ರ ತನಕ ಭಾರಿ ವಾಹನಗಳ ಸಂಚಾರ ನಿಷೇಧಿಸಿರುವುದರಿಂದ ಇನ್ನಷ್ಟು ಸಮಸ್ಯೆ ಉಂಟಾಗಿದೆ.

54 ಕಿಮೀ ಹೆದ್ದಾರಿ ನಿರ್ಮಾಣ ವಿಳಂಬವಾಗಲು ಕಾರಣಗಳು ಹಲವು ಇರಬಹುದು. ಆದರೆ, ಅದರ ದುಷ್ಪರಿಣಾಮ ಮಾತ್ರ ಪ್ರಯಾಣಿಕರು, ವಾಹನ ಸವಾರರು ಎದುರಿಸುತ್ತಿದ್ದಾರೆ. ಭೂಸ್ವಾಧೀನ ಮಾಡಿಕೊಡದೆ ಆಡಳಿತ ಯಂತ್ರದ ತಪ್ಪಾಗಿರಲಿ, ಕಾಮಗಾರಿ ನಿಧಾನಗತಿಯಲ್ಲಿ ಮಾಡಿದ ಆರ್‌.ಎನ್.ಎಸ್. ಕಂಪನಿಯ ತಪ್ಪಾಗಿರಲಿ, ಜನತೆ ಏಕೆ ಶಿಕ್ಷೆ ಅನುಭವಿಸಬೇಕು? 2 ವರ್ಷಗಳಲ್ಲಿ ಮುಗಿಸಬಹುದಾದ ಕಾಮಗಾರಿಯನ್ನು 6 ವರ್ಷವಾದರೂ ಮುಗಿಸದೆ ಇದ್ದರೆ ಇದರ ಹೊಣೆಗಾರಿಕೆಯನ್ನು ಯಾರು ಹೊರಬೇಕು ಎನ್ನುವ ಪ್ರಶ್ನೆ ಉದ್ಭವಿಸಿದೆ.

ಕಾರು, ಲಘು ವಾಹನಗಳಲ್ಲಿ ಸಂಚರಿಸುವವರು ಈ ಹೆದ್ದಾರಿಯಲ್ಲಿ ಹಾಗೂ ಹೀಗೂ ಹೋಗಬಹುದು. ಬಸ್‌ಗಳಲ್ಲಿ ಸಂಚರಿಸುವ ಜನಸಾಮಾನ್ಯರು ಹೇಗೆ ಹೋಗಬೇಕು? ಕಾಮಗಾರಿ ಫೆ. 25ರೊಳಗೆ ಮುಗಿಯುವ ಸಾಧ್ಯತೆ ಇಲ್ಲದಿರುವುದರಿಂದ ಭಾರಿ ವಾಹನ ಸಂಚಾರದ ನಿರ್ಬಂಧವನ್ನು ಮುಂದುವರಿಸಲಾಗುತ್ತಿದೆಯಾ ಎಂಬ ಆತಂಕವೂ ಕಾಡುತ್ತಿದೆ.

ಹಲವು ಖಾಸಗಿ ಬಸ್ಸುಗಳು ಪ್ರತಿ ದಿನ ಇದೇ ಹೆದ್ದಾರಿಯಲ್ಲಿ ಬೆಂಗಳೂರಿಗೆ ಸಂಚರಿಸುತ್ತಿತ್ತು. ಈಗ ಸುತ್ತು ಬಳಸಿ ಪರ್ಯಾಯ ಮಾರ್ಗಗಳಲ್ಲಿ ಹೋಗಬೇಕಾಗಿದೆ. ಕರಾವಳಿಯಿಂದ ಬೆಂಗಳೂರು ಪ್ರಯಾಣ ಇನ್ನಷ್ಟು ದೂರವಾಗಿದೆ. ವಿಳಂಬವೂ ಉಂಟಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಕಾಮಗಾರಿ ಯಾವಾಗ ಬೇಕಾದರೂ ಮುಗಿಸಲಿ, ಆದರೆ ಎಲ್ಲ ರೀತಿಯ ವಾಹನ ಸಂಚಾರಕ್ಕೆ ಈ ಹೆದ್ದಾರಿಯಲ್ಲಿ ಕೂಡಲೇ ಅವಕಾಶ ಕಲ್ಪಿಸಬೇಕು ಎಂಬ ಒತ್ತಾಯ ಬಲವಾಗಿದೆ.

 ನಿರ್ಬಂಧ ಸಡಿಲಿಸಿ: ಶಿರಸಿ ಕುಮಟಾ ಹೆದ್ದಾರಿ 6 ವರ್ಷಗಳಾದರೂ ಪೂರ್ಣವಾಗದೆ ಇರುವುದರಿಂದ ಬಸ್, ಲಾರಿಗಳ ಮಾಲೀಕರು, ಪ್ರಯಾಣಿಕರು ತುಂಬಾ ತೊಂದರೆ ಎದುರಿಸುವಂತಾಗಿದೆ. ಕೂಡಲೇ ಭಾರಿ ವಾಹನಗಳ ಸಂಚಾರಕ್ಕೆ ಇರುವ ನಿರ್ಬಂಧ ಸಡಿಲಿಸಬೇಕು ಎಂದು ಆಗ್ರಹಿಸುತ್ತೇನೆ ಎಂದು ಶ್ರೀಕುಮಾರ ಸಾರಿಗೆ ಸಂಸ್ಥೆಯ ವೆಂಕಟ್ರಮಣ ಹೆಗಡೆ ಕವಲಕ್ಕಿ ಹೇಳಿದರು.