ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಹೊರಗುತ್ತಿಗೆ ಮತ್ತು ಹಂಗಾಮಿ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಿರುವುದನ್ನು ಖಂಡಿಸಿ, ನೌಕರರು ಎಂಆರ್‌ಎನ್ ಸಂಸ್ಥೆ ಆಡಳಿತ ಮಂಡಳಿ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಸಿದರು.ರೈಲ್ವೆ ನಿಲ್ದಾಣ ಸಮೀಪದ ಕಾರ್ಖಾನೆ ಜನರಲ್ ಮ್ಯಾನೇಜರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನೌಕರರು, ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿರುವ ಎಂಆರ್‌ಎನ್ ಸಂಸ್ಥೆ ಗುತ್ತಿಗೆ ಕರಾರನ್ನು ಉಲ್ಲಂಘಿಸಿ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಿದೆ ಎಂದು ಕಿಡಿಕಾರಿದರು.
ಕಾರ್ಖಾನೆ ಆಡಳಿತ ಮಂಡಳಿ ನಡೆ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯ ಕೂಡ ಆದೇಶ ನೀಡಿ ಕಾರ್ಮಿಕರನ್ನು ಗುತ್ತಿಗೆ ಕರಾರಿನಂತೆ ನಡೆಸಿಕೊಳ್ಳುವಂತೆ ಸೂಚಿಸಿದ್ದರೂ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡುತ್ತಿಲ್ಲ. ಹೊರ ಗುತ್ತಿಗೆ ಆಧಾರದ ಮೇಲೆ ಕಳೆದ ಎರಡು ದಶಕಗಳಿಂದ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.ಕಾರ್ಖಾನೆಯನ್ನು ಎಂಆರ್‌ಎನ್ ಸಂಸ್ಥೆಗೆ ಗುತ್ತಿಗೆ ನೀಡುವ ವೇಳೆ ಸರ್ಕಾರ ಕಾರ್ಖಾನೆ ಹಾಲಿ ನೌಕರರನ್ನು ಮುಂದುವರಿಸಿಕೊಂಡು ಹೋಗುವಂತೆ ಕರಾರಿನಲ್ಲಿ ನಮೂದಿಸಿದೆ. ಈ ಒಡಂಬಡಿಕೆಯಂತೆ ಎಂಆರ್‌ಎನ್ ಸಂಸ್ಥೆ ಕಾರ್ಮಿಕರನ್ನು ನಡೆಸಿಕೊಳ್ಳಬೇಕು. ಆದರೆ ಉದ್ದೇಶ ಪೂರ್ವಕವಾಗಿ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಿ ಕಾರ್ಖಾನೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಉತ್ತರ ಭಾರತದ ನೌಕರರಿಗೆ ಮಣೆ ಹಾಕಲಾಗಿದೆ. ಇದರಿಂದ ಕನ್ನಡಿಗ ನೌಕರರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಸಂಸ್ಥೆ ಆಡಳಿತ ಮಂಡಳಿ ಧೋರಣೆ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯ ಕೂಡ ಆದೇಶ ನೀಡಿದ್ದರೂ ಆಡಳಿತ ಮಂಡಳಿ ಆದೇಶದ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಎಂಆರ್‌ಎನ್ ಸಂಸ್ಥೆ ಕಾರ್ಮಿಕರ ಯಾವುದೇ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಜತೆಗ ಪ್ರತಿ ಹಂಗಾಮಿನಲ್ಲೂ ನೌಕರರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ದೂರಿದರು.ಕಾರ್ಖಾನೆ ಗುತ್ತಿಗೆ ಪಡೆಯುವಾಗ 109 ನೌಕರರನ್ನು ಯಥಾವತ್ತಾಗಿ ಮುಂದುವರಿಸಬೇಕು ಎಂಬ ಅಂಶದೊಂದಿಗೆ ಗುತ್ತಿಗೆ ಪಡೆಯಲಾಗಿದೆ. ಕರಾರಿನಲ್ಲಿ ನೌಕರರನ್ನು ಮುಂದುವರಿಸಬೇಕು, ಇಲ್ಲವೇ ಸ್ವಯಂ ನಿವೃತ್ತಿಗೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಲಾಗಿದೆ. ಆದರೆ, ಈ ಎಲ್ಲಾ ನಿಯಮಗಳನ್ನು ಕಾರ್ಖಾನೆ ಗಾಳಿಗೆ ತೂರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಆರ್‌ಎನ್ ಸಂಸ್ಥೆ ಮೂಲಕ ಕೆಲಸ ಪಡೆದಿರುವ ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದ ನೌಕರರನ್ನು ಕೆಲಸದಿಂದ ತೆಗೆಯುವ ಗೋಜಿಗೆ ಸಂಸ್ಥೆ ಹೋಗುತ್ತಿಲ್ಲ. ಆದರೆ, ಪಿಎಸ್‌ಎಸ್‌ಕೆ ನೌಕರರನ್ನು ಟಾರ್ಗೆಟ್ ಮಾಡಿ ವಿನಃಕಾರಣ ತೊಂದರೆ ಕೊಡಲಾಗುತ್ತಿದೆ. ಎಂಆರ್‌ಎಸ್ ಸಂಸ್ಥೆ ಜನರಲ್ ಮ್ಯಾನೇಜರ್ ಅವರಿಗೆ ಕನ್ನಡ ಮಾತನಾಡುವುದಕ್ಕೆ ಬರುವುದಿಲ್ಲ. ಇವರು ಉತ್ತರ ಭಾರತದವರು. ಹಿಂದಿ ಭಾಷಿಕರಿಗೆ ಹೆಚ್ಚಿನ ಮಣೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.ಆತ್ಮಹತ್ಯೆ ಯತ್ನಿಸಿದ್ದ ಕಾರ್ಮಿಕರು:
2023 ರಲ್ಲಿ ಇದೇ ರೀತಿಯಲ್ಲಿ ಹೊರಗುತ್ತಿಗೆ ಕಾರ್ಮಿಕರನ್ನು ಬಿಡುಗಡೆಗೊಳಿಸಿ ಎಂಆರ್‌ಎನ್ ಸಂಸ್ಥೆ ಆಡಳಿತ ಮಂಡಳಿ ನಡೆ ವಿರುದ್ಧ ಆಕ್ರೋಶಗೊಂಡ ಕಾರ್ಮಿಕರು ಕಾರ್ಖಾನೆ ಚಿಮಣೆ ಏರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಸಂಸ್ಥೆ ಆಡಳಿತ ಮಂಡಳಿ ವರ್ತನೆ ಬದಲಾಗದಿದ್ದರೆ ಈಗಲೂ ಅದೇ ಪರಿಸ್ಥಿತಿ ಬರಬಹುದು ಎಂದು ಪ್ರತಿಭಟನಾ ನೌಕರರು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಪಿಎಸ್‌ಎಸ್‌ಕೆ ನೌಕರರ ಮುಖಂಡರಾದ ಆನಂದ್, ಯೋಗೇಶ್, ಕೆ.ಜಿ.ಮಧು, ಅಶ್ವಥ್, ಎಂಫ್ಲಾಯಿಸ್ ಯೂನಿಯನ್ ಅಧ್ಯಕ್ಷ ಪುಟ್ಟಮಾದೇಗೌಡ, ನಿರಂಜನ್, ಪ್ರಮೀಳಾ, ಅಂಜನ್, ಲೋಕೇಶ್ ಇತರರು ಇದ್ದರು.