ಸಾವಿರಾರು ಯುವಕರಿಗೆ ಬದುಕು ಕಲ್ಪಿಸಿದ ಪಿ. ಜಿ. ಆರ್. ಸಿಂಧ್ಯಾ: ಹೊಸಕೋಟೆ ಪುರುಷೋತ್ತಮ್

| Published : Sep 21 2025, 02:00 AM IST

ಸಾವಿರಾರು ಯುವಕರಿಗೆ ಬದುಕು ಕಲ್ಪಿಸಿದ ಪಿ. ಜಿ. ಆರ್. ಸಿಂಧ್ಯಾ: ಹೊಸಕೋಟೆ ಪುರುಷೋತ್ತಮ್
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಜಾತಿ ರಾಜಕಾರಣದಲ್ಲಿ ಅತಿ ಕಡಿಮೆ ಸಂಖ್ಯೆಯ ಜನಾಂಗದ ನನಗೆ ರಾಜಕೀಯ ಶಕ್ತಿ ನೀಡಿ ಬೆಳೆಸಿ, ಪೋಷಿಸಿ ರಾಮಕೃಷ್ಣ ಹೆಗಡೆ, ಎಂ. ಪಿ. ಪ್ರಕಾಶ್, ದೇವೇಗೌಡರು, ಜೀವರಾಜ ಆಳ್ವ ಸೇರಿದಂತೆ ಹಲವು ನಾಯಕರ ಸಹಕಾರದ ಜೊತೆಗೆ ತಮ್ಮೆಲ್ಲರ ಹಾರೈಕೆಯಿಂದ ಇಡೀ ಭಾರತ ದೇಶವಲ್ಲದೆ ವಿದೇಶಿಗಳು ಸಹ ನನ್ನನ್ನು ಗುರುತಿಸಿ ಗೌರವಿಸಲು ಕಾರಣರಾದ ಈ ದೇವರುಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳನ್ನು ಅರ್ಪಿಸುವುದಾಗಿ ತಿಳಿಸಿದರು,

ಕನ್ನಡಪ್ರಭ ವಾರ್ತೆ ಕನಕಪುರ

ರಾಜ್ಯ ಕಂಡ ಅತ್ಯಂತ ಸರಳ ಹಾಗೂ ಜನ ಸೇವೆಯನ್ನೇ ಮೂಲ ತತ್ವವಾಗಿಸಿಕೊಂಡಿರುವ ಜನಪ್ರಿಯ ನಾಯಕ ಪಿ. ಜಿ. ಆರ್. ಸಿಂಧ್ಯಾ ರವರಿಗೆ ದೇವರು ಆರೋಗ್ಯ, ಆಯಸ್ಸು ನೀಡಿ ಮುಂದಿನ ದಿನಗಳಲ್ಲಿ ಜನ ಸೇವೆ ಮಾಡುವ ಅವಕಾಶ ಲಭಿಸಲಿ ಎಂದು ಮುಖಂಡ, ಸಿಂಧ್ಯಾ ಅಭಿಮಾನಿ ಬಳಗದ ರೂವಾರಿ ಹೊಸಕೋಟೆ ಪುರುಷೋತ್ತಮ್ ತಿಳಿಸಿದರು.

ಮಾಜಿ ಸಚಿವ ಪಿ. ಜಿ. ಆರ್. ಸಿಂಧ್ಯಾರವರ 77ನೇ ಹುಟ್ಟುಹಬ್ಬದ ಅಂಗವಾಗಿ ತಾಲೂಕು ಪುರಾಣ ಪ್ರಸಿದ್ಧವಾದ ಕಲ್ಲಹಳ್ಳಿಯ ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಪೂಜೆ ನೆರವೇರಿಸಿ, ಸಿಂಧ್ಯಾರವರಿಗೆ ಸನ್ಮಾನಿಸಿ ಮಾತನಾಡಿದ ಅವರು, ಪಿ. ಜಿ. ಆರ್. ಸಿಂಧ್ಯಾರವರು ಈ ನಾಡು ಕಂಡ ಅತ್ಯಂತ ಸಜ್ಜನ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದು, ತಮ್ಮ ಅಧಿಕಾರದ ಅವಧಿಯಲ್ಲಿ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಫಲವಾಗಿ ಇಂದು ಗ್ರಾಮೀಣ ಭಾಗಗಳಿಗೂ ರಸ್ತೆ, ಸಾರಿಗೆ ಸಂಪರ್ಕ ವ್ಯವಸ್ಥೆ ಜೊತೆಗೆ ತಾಲೂಕಿನ ಸಾವಿರಾರು ಯುವಕರಿಗೆ ನಾನಾ ಇಲಾಖೆಗಳಲ್ಲಿ ಉದ್ಯೋಗ ಕೊಡಿಸಿ ಅವರ ಬದುಕಿಗೆ ದಾರಿ ತೋರಿರುವುದನ್ನು ಕಾಣಬಹುದಾಗಿದೆ. ನನಗೆ ರಾಜಕೀಯವಾಗಿ ಶಕ್ತಿ ಕೊಟ್ಟ ಗುರುಗಳು ಪಿ. ಜಿ. ಆರ್. ಸಿಂಧ್ಯಾರವರಾಗಿದ್ದು, ಅವರ ಮೇಲಿನ ಪ್ರೀತಿ, ವಿಶ್ವಾಸದಿಂದ ಪ್ರತಿ ವರ್ಷ ಅವರ ಹುಟ್ಟುಹಬ್ಬವನ್ನು ಶ್ರೀಶ್ರೀ ಶ್ರೀನಿವಾಸ ದೇವರ ಸನ್ನಿಧಿಯಲ್ಲಿ ಆಚರಿಸಿಕೊಂಡು ಬರುತ್ತಿದ್ದು, ಭಗವಂತ ಅವರಿಗೆ ಆರೋಗ್ಯ, ಆಯಸ್ಸನ್ನು ನೀಡಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಮಾಜ ಹಾಗೂ ಜನ ಸೇವೆ ಮಾಡುವ ಶಕ್ತಿ ಕೊಡಲಿ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿ, ಅಭಿಮಾನಿಗಳು ತಂದಿದ್ದ ಬೃಹತ್ ಕೇಕ್ ಕತ್ತರಿಸಿ ಮಾತನಾಡಿದ ಮಾಜಿ ಸಚಿವ ಪಿ. ಜಿ. ಆರ್ ಸಿಂಧ್ಯಾ, ನನ್ನನ್ನು ರಾಜ್ಯ ಹಾಗೂ ರಾಷ್ಟ್ರದಲ್ಲಿ ಏನಾದರೂ ಗುರುತಿಸಿದ್ದರೆ ಅದಕ್ಕೆ ಕಾರಣ ತಾಲೂಕಿನ ಮಹಾ ಜನತೆ ಆಗಿದ್ದು, ಅವರು ನನಗೆ ನೀಡಿದ ಶಕ್ತಿಯಿಂದ ಸ್ವಲ್ಪ ಮಟ್ಟಿಗೆ ಸಮಾಜ ಹಾಗೂ ಜನ ಸೇವೆ ಮಾಡಲು ಸಾಧ್ಯವಾಗಿದೆ ಎಂದರೆ ತಪ್ಪಾಗಲಾರದು ಎಂದರು.

ಇಡೀ ರಾಜ್ಯದಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರ ಮಾದರಿಯಾಗಿದ್ದು, ಇಂದಿನ ಜಾತಿ ರಾಜಕಾರಣದಲ್ಲಿ ಅತಿ ಕಡಿಮೆ ಸಂಖ್ಯೆಯ ಜನಾಂಗದ ನನಗೆ ರಾಜಕೀಯ ಶಕ್ತಿ ನೀಡಿ ಬೆಳೆಸಿ, ಪೋಷಿಸಿ ರಾಮಕೃಷ್ಣ ಹೆಗಡೆ, ಎಂ. ಪಿ. ಪ್ರಕಾಶ್, ದೇವೇಗೌಡರು, ಜೀವರಾಜ ಆಳ್ವ ಸೇರಿದಂತೆ ಹಲವು ನಾಯಕರ ಸಹಕಾರದ ಜೊತೆಗೆ ತಮ್ಮೆಲ್ಲರ ಹಾರೈಕೆಯಿಂದ ಇಡೀ ಭಾರತ ದೇಶವಲ್ಲದೆ ವಿದೇಶಿಗಳು ಸಹ ನನ್ನನ್ನು ಗುರುತಿಸಿ ಗೌರವಿಸಲು ಕಾರಣರಾದ ಈ ದೇವರುಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳನ್ನು ಅರ್ಪಿಸುವುದಾಗಿ ತಿಳಿಸಿದರು,

ನಾನು ತೆಗೆದುಕೊಂಡ ಕೆಲ ನಿರ್ಧಾರಗಳು ತಪ್ಪಾಗಿದ್ದರೂ ಸಹ ನನ್ನ ಜೊತೆ ನಿಂತು ಬೆಂಬಲಿಸಿದ ನನ್ನ ಹಿತೈಷಿಗಳು, ಮುಖಂಡರು,ಅಭಿಮಾನಿಗಳ ಪ್ರೀತಿ,ವಿಶ್ವಾಸಕ್ಕೆ ಎಂದಿಗೂ ದಕ್ಕೆ ಬಾರದಂತೆ ನಡೆದುಕೊಳ್ಳುವುದಾಗಿ ತಿಳಿಸಿದ ಅವರು,

ಪ್ರತಿ ವರ್ಷ ನನ್ನ ಹುಟ್ಟುಹಬ್ಬವನ್ನು ತಪ್ಪದೇ ಆಚರಿಸಿಕೊಂಡು ಬರುತ್ತಿರುವ ತಾಲೂಕಿನ ನನ್ನ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರಿಗೆ ಚಿರಋುಣಿಯಾಗಿರುವೆ ಎಂದು ತಿಳಿಸಿದರು.

ಕನಕಪುರ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶಕ್ತಿಯಿಂದ ಅಭಿವೃದ್ಧಿಯ ಕಾರ್ಯಗಳು ನಡೆದು ತಾಲೂಕಿನ ಜನ ಸಾಮಾನ್ಯರ ಬದುಕು ಹಸನಾಗಲಿ ಎಂದು ಹಾರೈಸಿದರು.

ಸಿಂಧ್ಯಾರವರ ಅಭಿಮಾನಿಗಳು ಹಾಗೂ ಮುಖಂಡರಾದ ಸುಧಾಕರ್, ಅಂಬಾ ಪ್ರಸಾದ್, ನಟರಾಜ್, ರಾಜಣ್ಣ, ಮರಳವಾಡಿ ನಾಗರಾಜು, ಸ್ಟುಡಿಯೋ ಚಂದ್ರು, ಬಿ.ಎಸ್. ಗೌಡ, ಕಲ್ಲಹಳ್ಳಿ ಕುಮಾರ್, ರಾಮಕೃಷ್ಣ ಸೇರಿದಂತೆ ಹಲವು ಮುಖಂಡರು, ಅಭಿಮಾನಿಗಳು ಈ ವೇಳೆ ಹಾಜರಿದ್ದರು.