ಸಾರಾಂಶ
- ಸೀತೂರು ಸಹಕಾರ ಸಂಘದ 2024-25 ನೇ ಸಾಲಿನ ಸರ್ವಸದಸ್ಯರ ಸಭೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಸೀತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಕಚೇರಿ ಹಾಗೂ ವ್ಯಾಪಾರ 3 ಶಾಖೆಗಳಿಂದ ಒಟ್ಟು ₹7.79 ಕೋಟಿ ರು. ವ್ಯವಹಾರ ನಡೆಸಿದೆ ಎಂದು ಸೀತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ.ಮೋಹನ್ ತಿಳಿಸಿದರು.
ಶುಕ್ರವಾರ ಸೀತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದಲ್ಲಿ 2024-25 ನೇ ಸಾಲಿನ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. 60 ವರ್ಷದ ಹಿಂದೆ ಪ್ರಾರಂಭವಾದ ಸೀತೂರು ಸಹಕಾರ ಸಂಘದಲ್ಲಿ ಈಗ 1650 ಸದಸ್ಯರಿದ್ದಾರೆ. ಪ್ರಸಕ್ತ ವರ್ಷದಲ್ಲಿ ಸಂಘದ 710 ಸದಸ್ಯರಿಗೆ ₹8 ಕೋಟಿ ರು.ಸಾಲ ನೀಡಿದ್ದೇವೆ. ಇದರಲ್ಲಿ 450 ಸಣ್ಣ ರೈತರಿಗೆ ₹4.28 ಕೋಟಿ ಸಾಲ ನೀಡಲಾಗಿದೆ. ಸಂಘ ಪ್ರಸ್ತುತ 11ಕ್ಕೂ ಹೆಚ್ಚು ಸೇವೆ ನೀಡುತ್ತಾ ಬಂದಿದ್ದು ಇದರಲ್ಲಿ ಅಡಕೆ ಸಂಸ್ಕರಣಾ ಘಟಕವೂ ಸೇರಿದೆ. ರಾಜ್ಯ ಸರ್ಕಾರ ಸಹಕಾರ ಕಾಯ್ದೆ ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ಸಹ ಹೊಸದಾಗಿ ಸಹಕಾರ ನೀತಿ ಜಾರಿಗೆ ತಂದಿದೆ. ಇದರ ಪರಿಣಾಮ ಸಹಕಾರ ರಂಗದ ಮೇಲೆ ಏನಾಗಬಹದು ಎಂದು ಕಾದು ನೋಡಬೇಕಾಗಿದೆ ಎಂದರು.ಮುಂದಿನ ದಿನಗಳಲ್ಲಿ ನಮ್ಮ ಬಿ.ಎಚ್.ಕೈಮರ ಶಾಖೆಯಲ್ಲಿ ಗೋದಾಮಿನ ಅಗತ್ಯವಿದ್ದು ಇದನ್ನು ನಿರ್ಮಿಸಲು ಎಲ್ಲಾ ಸದಸ್ಯರು ಸಹಕಾರ ನೀಡಬೇಕು. ಸಂಘದ ಬೆಳವಣಿಗೆಯಲ್ಲಿ ಎಲ್ಲಾ ಷೇರುದಾರರು, ಗ್ರಾಹಕರ ಪಾತ್ರ ದೊಡ್ಡದಾಗಿದೆ. ಮುಂದೆ ಸಹ ಷೇರುದಾರರು ಇದೇ ರೀತಿ ಸಹಕಾರ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಾದ ಪ್ರಜೀತ್ ಪಿ. ಶೆಟ್ಟಿ, ಸಾನ್ಮಿ ಆರ್ ಶೆಟ್ಟಿ, ಪಿಯುಸಿ ವಿದ್ಯಾರ್ಥಿನಿ ಎಚ್.ಎಸ್.ಸ್ಮಿತ, ಅನಿಷ ಆರ್ ರಾವ್, ಪದವಿಯಲ್ಲಿ ಬಿ.ಆರ್.ಪ್ರೀತಿಕ, ವೈದ್ಯಕೀಯ ಪದವಿ ಜೇಷ್ಮಾ ಜೋಶಿ ಅವರನ್ನು ಗೌರವಿಸಲಾಯಿತು.ಸೀತೂರು ಸಹಕಾರ ಸಂಘದಲ್ಲಿ 2014-25 ನೇ ಸಾಲಿನಲ್ಲಿ ಅತಿ ಹೆಚ್ಚು ವ್ಯಾಪಾರ ಮಾಡಿದ ಷೇರುದಾರರಾದ ಕಮಾಲಾ ಪುರ ಗ್ರಾಮದ ಎನ್.ಪಿ ರವಿ, ಈಚಿಕೆರೆ ಗ್ರಾಮದ ಜಯಂತಿ, ಹಾತೂರು ಗ್ರಾಮದ ಬಿ.ವಿ.ಅರವಿಂದ, ಬಾಳೆ ಗ್ರಾಮದ ಈ.ಎಸ್.ಸುಬ್ಬಣ್ಣ ಅವರನ್ನು ಗೌರವಿಸಲಾಯಿತು.
ಇದೇ ಸಭೆಯಲ್ಲಿ ಆರೋಗ್ಯ ಇಲಾಖೆ ಪವನ್, ಸುಜಾತಾ, ರಮ್ಯಕೃಷ್ಣ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ನೇತ್ರ ಪರೀಕ್ಷೆ, ಶುಗರ್, ಬಿಪಿ ಪರೀಕ್ಷೆ ನಡೆಸಲಾಯಿತು.ಸೀತೂರು ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅನಿಲ್ ಕುಮಾರ್ ವರದಿ ವಾಚಿಸಿ ಜಮಾ -ಖರ್ಚು ಮಂಡಿಸಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಎಂ.ಎಸ್.ಗೀತಾ, ನಿರ್ದೇಶಕರಾದ ವೈ.ಎಸ್.ಸುಬ್ರಮಣ್ಯ, ಎಚ್.ವಿ. ಸಂದೀಪ ಕುಮಾರ್, ಉಪೇಂದ್ರರಾವ್, ಕೆ.ಎಂ.ಜಗದೀಶ್, ಎಚ್.ಎನ್.ಸತೀಶ್. ಕೆ.ಜಿ.ರಮೇಶ್, ವೈ.ವಿ.ಲೋಲಾಕ್ಷಿ, ಜಿ.ಕೆ.ಜಯರಾಂ, ಸುಧಾಕರ್, ಎಚ್.ಎಚ್.ನಾರಾಯಣ,ಡಿಸಿಸಿ ಬ್ಯಾಂಕ್ ಮೇಲ್ವೀಚಾರಕ ಪದ್ಮನಾಭ ಇದ್ದರು.