ಉಡುಪಿ: ಇಲ್ಲಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಬುಧವಾರ ಪ್ರಧಾನ ಮಂತ್ರಿ ರಾಷ್ಟ್ರೀಯ ಉಚ್ಛತರ್ ಶಿಕ್ಷಣ ಅಭಿಯಾನ್ (ಪಿಎಂ ರುಸಾ) ಅನುದಾನದಡಿ ವೈವಿಧ್ಯತೆ, ಸಮಾನತೆ ಮತ್ತು ಒಳಗೊಳ್ಳುವಿಕೆ ಕುರಿತ ಒಂದು ದಿನದ ರಾಜ್ಯ ಮಟ್ಟದ ಸಾಮರ್ಥ್ಯ ವೃದ್ಧಿ ಕಾರ್‍ಯಕ್ರಮ ಜರುಗಿತು. ಕಾರ್‍ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ ಎನ್. ಅವರು ಆನ್‌ಲೈನ್ ಮೂಲಕ ಭಾಗವಹಿಸಿ, ಪ್ರಸ್ತುತ ಶೈಕ್ಷಣಿಕ ಸುಧಾರಣೆಗಳು ಮತ್ತು ಅವುಗಳ ಅನುಷ್ಠಾನದ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದರು.ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ. ಕೆ.ಆರ್. ಕವಿತಾ ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಡಾ. ಅಶೋಕ ಕಾಮತ್ ಹಾಗೂ ಡಾ. ಮಂಜುಳಾ ವಿ. ಅವರು ಜಂಟಿಯಾಗಿ ಜ್ಯೋತಿ ಬೆಳಗಿಸುವ ಮೂಲಕ ಕಾರ್‍ಯಕ್ರಮ ಉದ್ಘಾಟಿಸಿದರು. ಈ ವಿಶೇಷ ಕಾರ್‍ಯಾಗಾರದಲ್ಲಿ ವಿವಿಧ ಜಿಲ್ಲೆಗಳ 100ಕ್ಕೂ ಹೆಚ್ಚು ಉಪನ್ಯಾಸಕರು ಭಾಗವಹಿಸಿದ್ದರು. ವೇದಿಕೆಯಲ್ಲಿ ರುಸಾ ಸಂಯೋಜಕಿ ಕವಿತಾ ಹಾಗೂ ಐಕ್ಯೂಎಸಿ ಸಂಯೋಜಕಿ ಪ್ರೊ. ಶ್ರೀಮತಿ ಅಡಿಗ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ. ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಮಂಜುನಾಥ್ ವಂದಿಸಿದರು. ಆಂಗ್ಲ ವಿಭಾಗದ ಸಹಪ್ರಾಧ್ಯಾಪಕ ಯೋಗೀಶ್ ಡಿ.ಎಚ್. ಕಾರ್‍ಯಕ್ರಮ ನಿರೂಪಿಸಿದರು.