3.50 ಕೋಟಿ ರು. ವೆಚ್ಚದ ರಸ್ತೆ ಕಾಮಗಾರಿಗೆ ಪಿ.ರವಿಕುಮಾರ್ ಚಾಲನೆ

| Published : May 04 2025, 01:32 AM IST

ಸಾರಾಂಶ

ಗ್ರಾಮಸ್ಥರ ಬೇಡಿಕೆಯಂತೆ ಮಲ್ಲಯ್ಯನ ದೊಡ್ಡಿಯಿಂದ ಎನ್‌ಎಚ್ 275 ಮಾರ್ಗವಾಗಿ ಕಟ್ಟೇದೊಡ್ಡಿಗೆ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು ಸೋಮವಾರದಿಂದಲೇ ರಸ್ತೆ ಕಾಮಗಾರಿ ಶುರು ಮಾಡಲಿದ್ದು ಶೀಘ್ರದಲ್ಲೇ ಕಾಮಗಾರಿ ಮುಗಿಸಿ ಗ್ರಾಮದ ಜನರಿಗೆ ಅನುಕೂಲ ಕಲ್ಪಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಕಟ್ಟಿದೊಡ್ಡಿ- ಮಲ್ಲಯ್ಯನ ದೊಡ್ಡಿ ಮುಖ್ಯ ರಸ್ತೆಯ 3.50 ಕೋಟಿ ರು. ಅಂದಾಜು ವೆಚ್ಚದ ಕಾಮಗಾರಿಗೆ ಶಾಸಕ ಪಿ.ರವಿಕುಮಾರ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಗ್ರಾಮಸ್ಥರ ಬೇಡಿಕೆಯಂತೆ ಮಲ್ಲಯ್ಯನ ದೊಡ್ಡಿಯಿಂದ ಎನ್‌ಎಚ್ 275 ಮಾರ್ಗವಾಗಿ ಕಟ್ಟೇದೊಡ್ಡಿಗೆ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದು ಸೋಮವಾರದಿಂದಲೇ ರಸ್ತೆ ಕಾಮಗಾರಿ ಶುರು ಮಾಡಲಿದ್ದು ಶೀಘ್ರದಲ್ಲೇ ಕಾಮಗಾರಿ ಮುಗಿಸಿ ಗ್ರಾಮದ ಜನರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ನಾಲೆಯ ಅಭಿವೃದ್ಧಿಗೆ 5 ಕೋಟಿ ರು. ಬಿಡುಗಡೆಗೆ ಟೆಂಡರ್ ಕರೆದಿದ್ದು ಮುಂದಿನ ದಿನಗಳಲ್ಲಿ ನಾಲೆಯ ಕಾಮಗಾರಿಗೆ ಚಾಲನೆ ನೀಡಲಾಗುವುದು. ಇದರಿಂದ ರೈತರ ಬೆಳೆಗಳಿಗೆ ಸರಾಗವಾಗಿ ನೀರು ತಲುಪಲಿದೆ. ಮುಂದಿನ ಮೂರು ವರ್ಷಗಳಲ್ಲಿ ಗ್ರಾಮದ ಬೀದಿಗಳಿಗೆ ಸಿಮೆಂಟ್ ರಸ್ತೆಯನ್ನಾಗಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ಮನ್‌ಮುಲ್‌ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಕಟ್ಟೇದೊಡ್ಡಿ ಗ್ರಾಪಂ ಸದಸ್ಯ ಕೆ.ಎನ್‌.ಸಿದ್ದೇಗೌಡ, ಮುಖಂಡರಾದ ಚಂದ್ರಶೇಖರ್, ಪುಟ್ಟಸ್ವಾಮಿ, ಶಿವರಾಂ, ಮಂಜು, ಗುತ್ತಿಗೆದಾರ ಕರೀಗೌಡ ಭಾಗವಹಿಸಿದ್ದರು.

ಜಾತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮನವಿ

ಕನ್ನಡಪ್ರಭ ವಾರ್ತೆ ಮಂಡ್ಯ

ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾತಿ ಗಣತಿಯಲ್ಲಿ ಜಿಲ್ಲೆಯ ಕೊರಮ ಮತ್ತು ಕೊರಚ ಕುಟುಂಬಗಳು ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಕರ್ನಾಟಕ ಪರಿಶಿಷ್ಟ ಜಾತಿ ಕೊರಮ, ಕೊರಚ, ಕುರುವನ್, ಕೇಪ್ ಮಾರಿಸ್ ವೈಜ್ಞಾನಿಕ ಒಳ ಮೀಸಲಾತಿ ಅನುಷ್ಠಾನ ಹೋರಾಟ ಸಮಿತಿಯ ರಾಜ್ಯ ಸಂಯೋಜಕ ಕಿರಣ್‌ಕುಮಾರ್ ಮನವಿ ಮಾಡಿದರು.

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ಸಮಿತಿ ನಡೆಸುವ ಗಣತಿಯಲ್ಲಿ ಕುಳುವ ಸಮಾಜದವರೆಲ್ಲರೂ ತಪ್ಪದೇ ಪಾಲ್ಗೊಳ್ಳಬೇಕು. ಗಣತಿ ವೇಳೆ ಕೊರಮ, ಕೊರಚ, ಕುರುವನ್, ಕೇಪ್‌ಮಾರಿಸ್ ಎಂದೇ ಬರೆಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

ಜಿಲ್ಲೆಯಲ್ಲಿ ಕೊರಮ ಮತ್ತು ಕೊರಚ ಜಾತಿಯ ಸಂಖ್ಯೆ ಸುಮಾರು ೨೫ ಸಾವಿರಕ್ಕೂ ಹೆಚ್ಚಿದ್ದಾರೆ. ಮೂಲತಃ ಅಲೆಮಾರಿ ಹಿನ್ನೆಲೆಯುಳ್ಳವರಾಗಿರುವುದರಿಂದ ಇವರಿಗೆ ನಿರ್ದಿಷ್ಟ ನೆಲೆಯೂ ಇಲ್ಲ, ವಿಳಾಸವೂ ಇಲ್ಲ. ಸರ್ಕಾರ ಕುಟುಂಬಗಳ ನೋಂದಣಿಗಾಗಿ ನಿರ್ದಿಷ್ಟಪಡಿಸಿರುವ ದಾಖಲೆಗಳನ್ನೂ ಸಹ ಇವರು ಹೊಂದಿಲ್ಲ. ಇಂತಹ ಅಲೆಮಾರಿ ಕುಟುಂಬಗಳ ಗಣತಿಗೆ ಜಿಲ್ಲಾಡಳಿತ ವಿಶೇಷ ಗಮನಹರಿಸುವಂತೆ ಒತ್ತಾಯಿಸಿದರು.

ಈ ಅಲೆಮಾರಿ ಸಮುದಾಯದ ಮುಖಂಡರನ್ನು ಪ್ರತ್ಯೇಕವಾಗಿ ಸಭೆ ಕರೆದು ಚರ್ಚಿಸಬೇಕು. ಒಂದೆಡೆ ನೆಲೆಯೇ ಇಲ್ಲದ ಪರಿಶಿಷ್ಟ ಜಾತಿ ಅಲೆಮಾರಿ ಹಾಗೂ ಸಾಮಾಜಿಕ ಕಳಂಕಿತ ಹಿನ್ನೆಲೆಯುಳ್ಳ ಸಮುದಾಯಗಳನ್ನು ನಿರ್ದಿಷ್ಟವಾಗಿ ಗಣತಿಗೆ ಒಳಪಡಿಸಲು ಅಲೆಮಾರಿ ಸಂಘಟನೆ, ಸ್ವಯಂಸೇವಾ ಸಂಸ್ಥೆಗಳ ಸಮನ್ವಯದೊಂದಿಗೆ ವಿಶೇಷ ನೋಂದಣಿ ಅಭಿಯಾನವನ್ನು ಕೈಗೊಳ್ಳುವಂತೆ ಆಗ್ರಹಪಡಿಸಿದರು.ಜಾತಿ ಗಣತಿ ಕಾರ್ಯದಲ್ಲಿ ಯಾವುದೇ ಉಪಜಾತಿಗಳ ನಡುವಿನ ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಮತ್ತು ರಾಜಕೀಯ ಸ್ಥಾನ-ಮಾನಗಳ ಕುರಿತ ಮಾಹಿತಿಗಳನ್ನು ಯಾವುದೇ ಲೋಪದೋಷಗಳಿಲ್ಲದೆ ವಾಸ್ತವಿಕವಾಗಿ ನಮೂದಿಸಬೇಕು. ಪಕ್ಷಪಾತವಿಲ್ಲದೆ ಸಮೀಕ್ಷೆ ಕೈಗೊಳ್ಳುವಂತೆ ಗಣತಿದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಒತ್ತಾಯಿಸಿದರು.ಗೋಷ್ಠಿಯಲ್ಲಿ ಲೋಕೇಶ್, ಕೆ.ವಿ.ನಾಗರಾಜು, ಎಚ್.ವಿ.ರಾಮಶೆಟ್‌ಟಿ, ರವಿಕುಮಾರ್, ರಾಘವೇಂದ್ರ, ಶ್ರೀನಿವಾಸ್, ವೆಂಕಟೇಶ್ ಇತರರಿದ್ದರು.