ಪಹರೆಯ ಸ್ವಚ್ಛತಾ ಸೇವೆ ಇಡೀ ದೇಶಕ್ಕೆ ಮಾದರಿ: ವಿಶ್ವೇಶ್ವರ ಹೆಗಡೆ ಕಾಗೇರಿ

| Published : Sep 28 2025, 02:00 AM IST

ಪಹರೆಯ ಸ್ವಚ್ಛತಾ ಸೇವೆ ಇಡೀ ದೇಶಕ್ಕೆ ಮಾದರಿ: ವಿಶ್ವೇಶ್ವರ ಹೆಗಡೆ ಕಾಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರ ಬಾಡದ ಶಿವಾಜಿ ಮಹಾವಿದ್ಯಾಲಯದ ಸಭಾಭವನದಲ್ಲಿ ಶನಿವಾರ ನಡೆದ ಪಹರೆ ವೇದಿಕೆಯ ದಶಮಾನೋತ್ಸವದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.

ಕಾರವಾರ: ಪಹರೆ ವೇದಿಕೆಯ ಒಳ್ಳೆಯ ಕೆಲಸ ದೇಶಕ್ಕೆ ಮಾದರಿ. ಇದನ್ನು ಪ್ರಧಾನಿಗೆ ತಿಳಿಸುವ ಜವಾಬ್ದಾರಿ ನನ್ನದು. ಪ್ರಧಾನಿಯಿಂದ ಖಂಡಿತಾ ಪಹರೆಗೆ ಪತ್ರ ಬರಲಿದೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಕಾರವಾರ ಬಾಡದ ಶಿವಾಜಿ ಮಹಾವಿದ್ಯಾಲಯದ ಸಭಾಭವನದಲ್ಲಿ ಶನಿವಾರ ನಡೆದ ಪಹರೆ ವೇದಿಕೆಯ ದಶಮಾನೋತ್ಸವದ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಸ್ವಚ್ಚತೆಯ ಬಗ್ಗೆ ಕರೆ ನೀಡಿದ್ದಾರೆ. ಪಹರೆ ವೇದಿಕೆ ಕೂಡ ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಸ್ವಚ್ಛತೆಯ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಪಹರೆಯು ನಾಡಿನ ಹಲವು ದಿಗ್ಗಜರನ್ನು ಜಿಲ್ಲೆಗೆ ಕರೆತಂದು ಪರಿಚಯಿಸುವ ಕೆಲಸ ಮಾಡಿದೆ. ಸ್ವಚ್ಛತೆಯ ಜತೆಗೆ ಜನರ ಮನಸ್ಸನ್ನೂ ಶುದ್ಧಗೊಳಿಸುವ ಕೆಲಸ ಪಹರೆ ಮಾಡಿದೆ. ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಪಹರೆ ವೇದಿಕೆಗೆ ಇದೆ ಎಂದರು.

ಸಿರಸಿ ಅರಣ್ಯ ವೃತ್ತದ ಸಿಸಿಎಫ್ ಡಾ. ಹೀರಾಲಾಲ, ಕಸವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಆದರೆ ಅದರ ಪ್ರಮಾಣವನ್ನು ಕಡಿಮೆ ಮಾಡಬಹುದು. ವಿಶ್ವದಲ್ಲಿ ೧೮ ಬಯೋ ಡೈವರ್ಸಿಟಿ ಹಾಟ್‌ಸ್ಪಾಟ್‌ಗಳಿವೆ. ಅದರಲ್ಲಿ ನಮ್ಮ ಪಶ್ಚಿಮ ಘಟ್ಟವೂ ಒಂದು. ಅದನ್ನು ಮಾಲಿನ್ಯದಿಂದ ಕಾಪಾಡುವ ಹೊಣೆ ನಮ್ಮ ಮೇಲಿದೆ ಎಂದರು.

ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ಕಾರವಾರದ ಪರಿಸರವನ್ನು ಕಳೆದ ಹತ್ತು ವರ್ಷಗಳಿಂದ ಸ್ವಚ್ಛಗೊಳಿಸುತ್ತಿರುವ ಪಹರೆ ಸಂಸ್ಥೆಯು ಇನ್ನಷ್ಟು ಸಾಧನೆ ಮಾಡಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪಹರೆ ವೇದಿಕೆಯ ಗೌರವಾಧ್ಯಕ್ಷ ಜಾರ್ಜ್ ಫರ್ನಾಂಡೀಸ್, ಪಹರೆ ವೇದಿಕೆಯವರು ಪ್ರತಿವಾರದ ಒಂದು ಗಂಟೆಯ ಸ್ವಚ್ಛತಾ ಸೇವೆ ಎಲ್ಲೆಡೆಯೂ ಮಾದರಿಯಾಗಬೇಕಿದೆ. ಕಾರವಾರ ನಗರದ ಸ್ವಚ್ಛತೆಯಲ್ಲಿ ಪಹರೆ ವೇದಿಕೆಯ ಕೊಡುಗೆ ಅಪಾರವಾಗಿದೆ ಎಂದರು.

ಪಹರೆ ವೇದಿಕೆಯ ಅಧ್ಯಕ್ಷ ನಾಗರಾಜ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯದರ್ಶಿ ಟಿ.ಬಿ. ಹರಿಕಾಂತ ನಿರ್ವಹಿಸಿದರು. ಗೌರವಾಧ್ಯಕ್ಷ ಜಾರ್ಜ್ ಫರ್ನಾಂಡೀಸ್, ಸಾಮಾಜಿಕ ಅರಣ್ಯ ವಿಭಾಗದ ಮಂಜುನಾಥ ನಾವಿ ಉಪಸ್ಥಿತರಿದ್ದರು. ಪದ್ಮಜಾ ಜೋಯಿಸ್ ದೇಶಭಕ್ತಿ ಗೀತೆ ಹಾಡಿದರು. ಸುಜಾತಾ ತಾಮ್ಸೆ ವಂದಿಸಿದರು. ಕಾರ್ಯಕ್ರಮದ ಯಶಸ್ವಿಗೆ ಪಹರೆಯ ಪೂರ್ತಿ ಬಳಗ ಶ್ರಮಿಸಿತ್ತು.

ಪ್ರಾರಂಭೋತ್ಸವದಲ್ಲಿ ಹತ್ತಾರು ಕಾರ್ಯ: ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಬಳಿಕ ಸ್ವಚ್ಛತೆಯ ಕುರಿತು ಜಾಗೃತಿ ಸ್ಟಿಕರ್ ಬಿಡುಗಡೆ ಮಾಡಲಾಯಿತು. ಅಲ್ಲದೇ ಸಾವಿರ ಗಿಡ ವಿತರಿಸುವ ಕಾರ್ಯಕ್ರಮದ ಅಂಗವಾಗಿ ಹನ್ನೊಂದು ಜನರಿಗೆ ವೇದಿಕೆಯಲ್ಲೇ ಹಣ್ಣಿನ ಸಸಿಗಳನ್ನು ನೀಡಲಾಯಿತು. ಅಲ್ಲದೆ ಇದುವರೆಗೂ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕೆ.ಡಿ. ಪೆಡ್ನೇಕರ್, ರಮೇಶ ಗುನಗಿ, ಸುರೇಶ ನಾಯ್ಕ, ಸದಾನಂದ ಮಾಂಜ್ರೇಕರ್, ಪ್ರಕಾಶ ಕೌರ್, ಖೈರುನ್ನಿಸಾ ಶೇಖ್, ಜಿಡಿ ಮನೋಜೆ ಮತ್ತು ಹಾಲಿ ಗೌರವಾಧ್ಯಕ್ಷ ಜಾರ್ಜ್ ಫರ್ನಾಂಡೀಸ್‌ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ಆವರಣದಲ್ಲಿದ್ದ ಶಿವಾಜಿ ಪ್ರತಿಮೆಗೆ ಸಂಸದ ಕಾಗೇರಿ ಮಾಲಾರ್ಪಣೆ ಮಾಡಿ, ಶಿವಾಜಿ ತಾಯಿ ಜೀಜಾಬಾಯಿ ಹೆಸರಲ್ಲಿ ಗಿಡವನ್ನು ನೆಟ್ಟರು. ಬಳಿಕ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ಅವರೊಂದಿಗೆ ಬುಟ್ಟಿ ಹಿಡಿದು ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸಿದರು.

ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆಯಲ್ಲಿ ಇಂದಿಗೂ ಹಳ್ಳಿಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆಯಿದೆ. ಕುಡಿಯುವ ನೀರಿಗಾಗಿ ಪಾನಿ ಪಾರ್ಲಿಮೆಂಟ್ ಎಂಬ ಹೊಸ ಯೋಜನೆ ಮಾಡುವ ಕನಸು ಪಹರೆ ವೇದಿಕೆ ಹೊಂದಿದೆ ಎಂದು ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ಹೇಳಿದರು.