ಜಿಎಸ್‌ಟಿ ಇಳಿಕೆ-ಜನಸಾಮಾನ್ಯರ ಪರವಾದ ನಿರ್ಣಯ: ಸಂಸದ ಕಾಗೇರಿ

| Published : Sep 28 2025, 02:00 AM IST

ಜಿಎಸ್‌ಟಿ ಇಳಿಕೆ-ಜನಸಾಮಾನ್ಯರ ಪರವಾದ ನಿರ್ಣಯ: ಸಂಸದ ಕಾಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಶನಿವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜಿಎಸ್‌ಟಿ ದರ ಇಳಿಕೆ ಬಗ್ಗೆ ವ್ಯಾಪಾರಿಗಳೊಂದಿಗೆ ಚರ್ಚೆ ಮತ್ತು ಸ್ವದೇಶಿ ಉತ್ಪನ್ನಗಳ ಬಳಕೆಗೆ ಜಾಗೃತಿಗೆ ಜಾಥಾ ನಡೆಸಿದರು.

ಕಾರವಾರ: ಜಿಎಸ್‌ಟಿ ಇಳಿಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಸಾಮಾನ್ಯರ ಪರವಾಗಿ ನಿರ್ಣಯ ಕೈಗೊಂಡಿದೆ. ಇದರಿಂದ ಜನರ ಖರೀದಿ ಸಾಮರ್ಥ್ಯ ಹೆಚ್ಚಲಿದೆ. ಜತೆಗೆ ಉಳಿತಾಯವೂ ಆಗಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ನಗರದ ಮಾರುಕಟ್ಟೆ ಪ್ರದೇಶದಲ್ಲಿ ಶನಿವಾರ ಜಿಎಸ್‌ಟಿ ದರ ಇಳಿಕೆ ಬಗ್ಗೆ ವ್ಯಾಪಾರಿಗಳೊಂದಿಗೆ ಚರ್ಚೆ ಮತ್ತು ಸ್ವದೇಶಿ ಉತ್ಪನ್ನಗಳ ಬಳಕೆಗೆ ಜಾಗೃತಿಗೆ ಜಾಥಾ ನಡೆಸಿದ ಅವರು ಅಂಗಡಿಕಾರರು, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದರು.

ದಿನ ಬಳಕೆ ವಸ್ತುಗಳು, ಔಷಧ, ಆಹಾರ ಸಾಮಗ್ರಿಗಳು ಸೇರಿದಂತೆ ಜನಸಾಮಾನ್ಯರು ಹೆಚ್ಚು ಬಳಸುವ ವಸ್ತುಗಳ ಜಿಎಸ್‌ಟಿ ಇಳಿಕೆಯಾಗಿದೆ. ಮುಂಚೆ ಇದ್ದ ನಾಲ್ಕು ಸ್ಲ್ಯಾಬ್‍ಗಳನ್ನು ಎರಡು ಸ್ಲ್ಯಾಬ್‌ಗೆ ಸರ್ಕಾರ ಇಳಿಸಿದೆ. ತೆರಿಗೆ ಹೊರೆ ತಪ್ಪಲಿರುವ ಕಾರಣ ವಸ್ತುಗಳ ಬೆಲೆ ಕಡಿಮೆಯಾಗಲಿದ್ದು, ಬಡ ಮತ್ತು ಮಧ್ಯಮ ವರ್ಗದ ಮೇಲೆ ಆರ್ಥಿಕ ಹೊರೆ ಬೀಳುವುದು ತಪ್ಪಲಿದೆ ಎಂದರು.

ಸ್ವದೇಶಿ ಉತ್ಪನ್ನಗಳ ಬಳಕೆ ಹೆಚ್ಚಿಸಬೇಕು. ಈ ಮೂಲಕ ಸಣ್ಣ ಉದ್ದಿಮೆಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಜತೆಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಬೆಂಗಾವಲಾಗಬೇಕು. ಸ್ವದೇಶಿ ಉತ್ಪನ್ನ ಬಳಕೆ ಹೆಚ್ಚಿದಂತೆ ದೇಶವೂ ಸ್ವಾವಲಂಬಿ ರಾಷ್ಟ್ರವಾಗಿ ಬದಲಾಗಲಿದೆ ಎಂದು ಕರೆ ನೀಡಿದರು.

ಮಾರುಕಟ್ಟೆಯಲ್ಲಿನ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಜಿಎಸ್‌ಟಿ ಇಳಿಕೆ ಬಳಿಕ ವಹಿವಾಟಿನಲ್ಲಿ ಉಂಟಾದ ಬದಲಾವಣೆ ಬಗ್ಗೆ ವ್ಯಾಪಾರಿಗಳು, ಗ್ರಾಹಕರಿಂದ ಮಾಹಿತಿಯನ್ನೂ ಪಡೆದರು.

ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೇಕರ, ಬಿಜೆಪಿ ಪದಾಧಿಕಾರಿಗಳಾದ ಸುನೀಲ ಸೋನಿ, ನಾಗೇಶ ಕುರ್ಡೇಕರ, ಸುಭಾಷ ಗುನಗಿ, ಭಾಸ್ಕರ ನಾರ್ವೇಕರ ಇದ್ದರು.

ದ್ವಂದ್ವ ನೀತಿಯ ರಾಜ್ಯ ಸರ್ಕಾರ: ಜಿಎಸ್‌ಟಿ ಸಲಹಾ ಸಮಿತಿ ಸಭೆಯಲ್ಲಿ ದರ ಇಳಿಕೆಗೆ ಸಹಮತ ಸೂಚಿಸಿದ ರಾಜ್ಯ ಸರ್ಕಾರವು ಈಗ ಜಿಎಸ್‌ಟಿ ದರ ಇಳಿಕೆ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದೆ. ಈ ಮೂಲಕ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಟೀಕಿಸಿದರು.

ಆಡಳಿತ ವೈಫಲ್ಯದಿಂದ ಜನರು ಬೇಸತ್ತಿದ್ದಾರೆ. ತನ್ನ ತಪ್ಪು ಮರೆಮಾಚಲು, ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹೆಸರಿನಲ್ಲಿ ಜಾತಿ ಗಣತಿ ಮಾಡಲು ಹೊರಟಿದ್ದಾರೆ. ಈ ಹಿಂದೆ ಇದೇ ಸರ್ಕಾರ ಜನರ ತೆರಿಗೆಯ ಕೋಟ್ಯಂತರ ಹಣ ವ್ಯಯಿಸಿ ಮಾಡಿದ್ದ ಸಮೀಕ್ಷೆ ವರದಿಯನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕರಿಸಿತ್ತು. ಈಗ ಪುನಃ ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿ ಸಮೀಕ್ಷೆ ನಡೆಯುತ್ತಿದೆ ಎಂದು ಆರೋಪಿಸಿದರು.