ದೇವರಹಿಪ್ಪರಗಿ: ತಾಲೂಕಿನ ಹರನಾಳ ಗ್ರಾಮ ಪಂಚಾಯಿತಿಯಲ್ಲಿ ನಡೆದ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸಮ್ಮ ದೊಡಮನಿ ಅವರನ್ನು ಅಮಾನತುಗೊಳಿಸಿ ಜಿಪಂ ಸಿಇಒ ರಿಷಿ ಆನಂದ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ವಿಜಯಪುರದಲ್ಲಿ ಮಂಗಳವಾರ ನಡೆದ ಸಭೆಗೆ ತಡವಾಗಿ ಆಗಮಿಸಿದ ಕೆರೂಟಗಿ ಮತ್ತು ಹಿಟ್ನಳ್ಳಿ ಹಾಗೂ ಕೊಂಡಗೂಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಅಮಾನತು ಮಾಡಿದ್ದಾರೆ. ಒಂದೇ ದಿನ ಮೂರು ಜನ ಪಿಡಿಒಗಳನ್ನು ಅಮಾನತು ಮಾಡಿದ್ದಾಗಿ ತಾಪಂ ಇಒ ಭಾರತಿ ಚೆಲುವಯ್ಯ ಮಾಹಿತಿ ನೀಡಿದರು.

ಈ ಕುರಿತು ಬುಧವಾರ ಪತ್ರಿಕೆ ಜೊತೆ ಮಾತನಾಡಿದ ಅವರು, ಹರನಾಳ ಗ್ರಾಮ ಪಂಚಾಯತಿ ಪಿಡಿಒ ಬಸಮ್ಮ ದೊಡ್ಡಮನಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹಾಗೂ ಹಿಟ್ನಳ್ಳಿ ಹಾಗೂ ಕೆರೂಟಗಿ ಗ್ರಾಪಂ ಪಿಡಿಒ ವಿನೋದ್ ರಾಠೋಡ ಹಾಗೂ ಕೊಂಡಗೂಳಿ ಗ್ರಾಮ ಪಂಚಾಯತಿ ಪಿಡಿಒ ಸಂಜೀವ ಶೇಗುಣಶಿ ಅವರ ಮೇಲೆ ಕರ್ತವ್ಯ ನಿರ್ಲಕ್ಷ್ಯತೆ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಅವರ ಜಾಗಕ್ಕೆ ಯಾರನ್ನು ನೇಮಿಸಿದ್ದಾರೆ ಎನ್ನುವುದು ನಾಳೆ ತಿಳಿಸುವುದಾಗಿ ಹೇಳಿದರು.