ಸಾರಾಂಶ
ಬೆಂಗಳೂರು : ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಕರ್ನಾಟಕಕ್ಕೆ ಅವಕಾಶ ಮಾಡಿಕೊಡುವ ಸಂಬಂಧ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.
ಸುಪ್ರೀಂಕೋರ್ಟ್‌ಗೆ ಅಂತರಾಜ್ಯ ಜಲ ವಿವಾದದ ಕಾನೂನಿನ ಬಗ್ಗೆ ಸ್ಪಷ್ಟವಾಗಿ ತಿಳಿಸಿ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದೂ ಆಗ್ರಹಿಸಿದ್ದಾರೆ.
ಬುಧವಾರ ಸಂಸತ್ತಿನಲ್ಲಿ ಜಲಶಕ್ತಿ ಇಲಾಖೆಯ ಬೇಡಿಕೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ನ್ಯಾಯ ಮಂಡಳಿ ಆದೇಶವಾಗಿ 15 ವರ್ಷ ಕಳೆದಿದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ನಡುವಿನ ನೀರಿನ ಹಂಚಿಕೆ ಗೊಂದಲದಿಂದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಹೇಳಿದರು.
ಈ ಯೋಜನೆಯಲ್ಲಿ ಕರ್ನಾಟಕ ಮಧ್ಯಂತರ ರಾಜ್ಯವಾಗಿದೆ. ಮಹಾರಾಷ್ಟ್ರದವರು ನೀರು ಕೊಡುವುದಿಲ್ಲ. ಆಂಧ್ರ ಹಾಗೂ ತೆಲಂಗಾಣದವರು ನೀರು ಬೇಡುತ್ತಾರೆ. 2010 ರಲ್ಲಿ ಕೃಷ್ಣಾ ನ್ಯಾಯಮಂಡಳಿ ಆದೇಶ ನೀಡಲಾಗಿದೆ. ಈಗ 2025 ಕ್ಕೆ ಬಂದಿದ್ದೇವೆ. ಈಗಲ್ಲೂ ನೋಟಿಫಿಕೇಶನ್ ಆಗಿಲ್ಲ. ಆಲಮಟ್ಟಿ ಜಲಾಶಯದ ಎತ್ತರವನ್ನು 524 ಮೀ.ಗೆ ಹೆಚ್ಚಳ ಮಾಡುವುದು ನಮ್ಮ ಪ್ರಸ್ತಾವನೆ ಅಲ್ಲ, ಅದು ನಮ್ಮ ಹಕ್ಕು. ಅದು ನ್ಯಾಯಮಂಡಳಿ ತೀರ್ಮಾನ. ಇದರಿಂದ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾಗುವುದಿಲ್ಲ. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದಿಂದ ತೆಲಂಗಾಣಾ, ಆಂಧ್ರ ಪ್ರದೇಶಕ್ಕೂ ಅನುಕೂಲವಾಗಲಿದೆ. ಆಂಧ್ರ ಹಾಗೂ ತೆಲಂಗಾಣ ನಡುವೆ ನೀರು ಹಂಚಿಕೆಯ ಸಮಸ್ಯೆ ಉದ್ಭವವಾಗಿದೆ. ಅದನ್ನು ಅವರು ಬಗೆ ಹರಿಸಿಕೊಳ್ಳಬೇಕು ಎಂದರು.
ಒಂದೇ ನ್ಯಾಯ ಮಂಡಳಿ ರಚಿಸಿ: ಇದೇ ವೇಳೆ ಅಂತಾರಾಜ್ಯ ಜಲ ವಿವಾದಗಳನ್ನು ಬಗೆಹರಿಸಲು ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ದೇಶಾದ್ಯಂತ ಒಂದೇ ನ್ಯಾಯ ಮಂಡಳಿ ಸ್ಥಾಪನೆ ಮಾಡಿ, ಆರು ತಿಂಗಳಲ್ಲಿ ವಿವಾದ ಇತ್ಯರ್ಥ ಪಡಿಸಬೇಕು ಎಂದು ಬೊಮ್ಮಾಯಿ ಸಲಹೆ ನೀಡಿದರು. ಇಡೀ ದೇಶ ಅಂತಾರಾಜ್ಯ ಜಲ ವಿವಾದ ಕಾಯ್ದೆ ಕಾರಣದಿಂದ ಆರ್ಥಿಕವಾಗಿ ಹಾಗೂ ಜೀವನ ಕ್ರಮದಲ್ಲಿಯೂ ಸಾಕಷ್ಟು ನಷ್ಟ ಅನುಭವಿಸುತ್ತಿದ್ದೇವೆ. ಈ ಕಾಯ್ದೆಯ ಸೆಕ್ಷನ್ 3ರ ಪ್ರಕಾರ ಯಾವುದಾದರೂ ರಾಜ್ಯ ಜಲ ವ್ಯಾಜ್ಯ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದರೆ, ನ್ಯಾಯಮಂಡಳಿ ರಚನೆ ಮಾಡಬೇಕಾಗುತ್ತದೆ. ಅಂತಾರಾಜ್ಯ ಜಲವ್ಯಾಜ್ಯಗಳಿಂದ ನಾವು ಅನೇಕ ಸಮಸ್ಯೆ ಎದುರಿಸುತ್ತಿದ್ದೇವೆ. ಒಮ್ಮೆ ಜಲ ವಿವಾದ ಆರಂಭವಾದರೆ ನ್ಯಾಯಮಂಡಳಿ ಸ್ಥಾಪನೆ ಆಗುತ್ತದೆ. ಕಳೆದ ಐವತ್ತು ವರ್ಷಗಳಿಂದ ತೆಲಂಗಾಣ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಉತ್ತರದಲ್ಲಿ ಗುಜರಾತ್, ಪಂಜಾಬ್, ಮಧ್ಯಪ್ರದೇಶದಲ್ಲಿ ನ್ಯಾಯಮಂಡಳಿಗಳು ಕಾರ್ಯ ನಿರ್ವಹಿಸುತ್ತಿವೆ. ಆದರೆ, ಯಾವುದೇ ಪರಿಹಾರ ದೊರೆತಿಲ್ಲ ಎಂದು ವಿವರಿಸಿದರು.